

ರಾಜ್ಯೋತ್ಸವ ಕವಿಗೋಷ್ಠಿ-
ಮನುಷ್ಯತ್ವದ ಅನ್ವೇಷಣೆಯೆ ಕಾವ್ಯದ ಕೆಲಸ
ಕಾವ್ಯ ಎಂದರೆ ಮನುಷ್ಯತ್ವದ ಅನ್ವೇಷಣೆ.ಸಮಾಜವನ್ನು ಬದಲಾಯಿಸುವುದಕ್ಕಿಂತ ನಮ್ಮೊಳಗಿನ ತಪ್ಪಿನ ಅರಿವು, ವಿಮರ್ಶೆ ಕವಿತೆಯಿಂದ ಸಾಧ್ಯ ಎಂದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ಅವರು ಸಿರಿಗನ್ನಡ ವೇದಿಕೆ, ಪ್ರಯೋಗ ಸ್ವಯಂಸೇವಾ ಸಂಸ್ಥೆ ಆಯೋಜಿಸಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕವಿತೆಗಳ ಅವಲೋಕನ ನಡೆಸಿ ಮಾತನಾಡಿದ ಅವರು ಬದುಕಿನ ಸತ್ಯಶೋಧನೆಯ ಆರಂಭ ಕಾವ್ಯ ರಚನೆಯ ಮೂಲಕ ಆಗುತ್ತದೆ. ಮನುಷ್ಯತ್ವದ ಕಡೆಗೆ ಸಾಗುವ ಕ್ರಿಯೆ ಇದರಿಂದ ಸಾಧ್ಯವಾಗುತ್ತದೆ. ಕವಿತೆ ಎನ್ನುವದು ಸಹಜ ಓಡಾಟದಂತೆ. ಅದು ಸೂಕ್ಷ್ಮವಾಗುತ್ತ ಹೋದಂತೆ ಸ್ಪೋಟಕ ಶಕ್ತಿಯನ್ನೂ ಪಡೆದುಕೊಳ್ಳಬೇಕು. ಕಾವ್ಯದ ಮೂಲಕ ನಡೆಯುವ ಸತ್ಯಶೋಧನೆಯ ಹಾದಿಯಲ್ಲಿ ಅನುಕರಣೆ ಮಾಡದೇ ನಮ್ಮದೇ ಆದ ಲಯ, ಪ್ರತಿಮೆ ರೂಪಿಸಿಕೊಳ್ಳುವದು ಅಗತ್ಯ ಎಂದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಮಾತನಾಡಿ ಕಾವ್ಯ ದೃಶ್ಯಮಾಧ್ಯಮದ ಗುಂಗಿನಿಂದ ತಪ್ಪಿಸಿಕೊಳ್ಳಬೇಕು.ಕಾವ್ಯ ಸಾಂಸ್ಕøತಿಕ ಪ್ರಜ್ಞೆಯನ್ನು, ಸ್ವವಿಮರ್ಶೆಯನ್ನು ನೀಡುವದರ ಜೊತೆಗೆ ಮನುಷ್ಯರಾಗುವ ಪ್ರಯತ್ನಕ್ಕೆ ಇದು ಸಹಕಾರಿಯಾಗುತ್ತದೆ. ಕಾವ್ಯ ನಮ್ಮೊಳಗೆ ಅನುರಣಿಸುವಂತಿರಬೇಕು ಎಂದರು.
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಕಾವ್ಯ ಅನನ್ಯತೆಯ ರೂಪ.ಕಾವ್ಯ ರಚನೆಗೆ ಅಧ್ಯಯನ, ಸೂಕ್ಷ್ಮ ಗ್ರಹಿಕೆ ಅತ್ಯಗತ್ಯ. ಸಮೂಹಕ್ಕೆ ಒಳ್ಳೆಯದನ್ನು ಬಯಸುವ ಕಾವ್ಯ ನಮ್ಮೊಳಗೆ ಬೀಜ ರೂಪವಾಗಿದ್ದು ವಿಕಾಸ ಹೊಂದುತ್ತ ಸಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬರಹಗಾರ ಗಂಗಾಧರ ಕೊಳಗಿ ನಮ್ಮ ಖಾಸಗಿತನವನ್ನು, ಏಕಾಗ್ರತೆಯನ್ನು ಹಲವು ವಿಧದಲ್ಲಿ ಪಲ್ಲಟಗೊಳಿಸುವ ಈ ಕಾಲಘಟ್ಟದಲ್ಲಿ ಬಹುದೊಡ್ಡ ಸವಾಲು ಬರಹಗಾರರ ಇದಿರಿನಲ್ಲಿದೆ. ಅಂಥ ಸವಾಲನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಕೊಡುತ್ತದೆ. ಕನ್ನಡದ ಗದ್ಯದಲ್ಲೂ ಕಾವ್ಯ ಅತ್ಯಂತ ಪ್ರಖರವಾಗಿ ಬಂದದ್ದು ಲಂಕೇಶ್, ಅನಂತಮೂರ್ತಿಯವರಂಥ ಅನೇಕ ಬರಹಗಾರರಲ್ಲಿ ಕಾಣಲು ಸಾಧ್ಯ. ಇಂಥ ಕಾರ್ಯಕ್ರಮಗಳು ಪರಸ್ಪರ ಕಾವ್ಯಾನುಸಂಧಾನಕ್ಕೆ, ಸಹೃದಯರ ಒಡನಾಟಕ್ಕೆ ವೇದಿಕೆ ಒದಗಿಸಿಕೊಡುತ್ತದೆ ಎಂದರು.
ಕವಿಗಳಾದ ಗೋಪಾಲ ನಾಯ್ಕ ಬಾಶಿ, ಮನೋಜಕುಮಾರ ಪಿ.ಎಚ್. ಮಾರುತಿ ಆಚಾರಿ, ನೂತನ ನಾಯ್ಕ, ಮಂಜುನಾಥ ಟಿ., ನಾಗರಾಜಪ್ಪ ಎಚ್., ಸುಧಾರಾಣಿ ನಾಯ್ಕ, ನಾಗಶ್ರೀ ಹೆಗಡೆ, ರಾಘವೇಂದ್ರ ಚಪ್ಪರಮನೆ, ಮಂಜುನಾಥ ಹೆಗಡೆ ಹೊಸ್ಕೊಪ್ಪ ಮುಂತಾದವರು ಕವಿತೆ ವಾಚಿಸಿದರು.
ಸಿರಿಗನ್ನಡ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಹೆಗಡೆ ಸ್ವಾಗತಿಸಿ, ವಂದಿಸಿದರು.
ನಾಟಿವೈದ್ಯರನ್ನು ಗುರುತಿಸಲು ಮನವಿ
ಸಿದ್ದಾಪುರ; ತಾಲೂಕಿನ ಕಡಕೇರಿಯಲ್ಲಿ ನಬಾರ್ಡ ಕಾರವಾರ ಹಾಗೂ ಧಾನ್ ಫೌಂಡೇಶನ್ ಶಿರಸಿ ಸಹಯೋಗದಲ್ಲಿ ನಾಟಿ ಪಶು ವೈದ್ಯಕೀಯ ಪದ್ಧತಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಥಳೀಯ ನಾಟಿ ವೈದ್ಯ ಗೋವಿಂದ ಜಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಲವಾರು ರೋಗಗಳನ್ನು ಗುಣ ಪಡಿಸುವ ಶಕ್ತಿ ನಾಟಿ ವೈದ್ಯಕೀಯ ಪದ್ಧತಿಗೆ ಇದೆ. ಇಂತಹ ವೈದ್ಯರನ್ನು ಗುರುತಿಸುವ ಕಾರ್ಯ ಸಮಾಜದಿಂದ ಆಗಬೇಕಿದೆ. ನಾಟಿ ಪದ್ಧತಿಯಿಂದ ಚಿಕಿತ್ಸೆ ಪಡೆದರೆ ಉತ್ತಮ ಆರೋಗ್ಯವನ್ನು ಮನೆಯಿಂದಲೇ ಪ್ರಾರಂಭಿಸಬಹುದು. ಇದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರದ ಅಗತ್ಯತೆ ಇದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
