ಸಿದ್ದಾಪುರ ತಾಲೂಕು ಸೇರಿದ ಶಿರಸಿ ಕ್ಷೇತ್ರದಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ತಾಂಡವಾಡುತಿದ್ದು ಈ ಅವ್ಯವಸ್ಥೆ ನಿಲ್ಲಿಸದಿದ್ದರೆ ಸ್ಥಳಿಯ ಶಾಸಕರು, ರಾಜ್ಯ ವಿಧಾನಸಭಾ ಅಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆಯವರ ಮನೆ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಜೆ.ಡಿ.ಎಸ್. ಪ್ರಕಟಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಜನತಾದಳ ಜಾತ್ಯಾತೀತ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ್ ಹೆಗಡೆ ಶಿರಸಿ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದ ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸುತ್ತಿಲ್ಲ. ಹಿಂದಿನ ಚುನಾವಣಾ ಸಮಯದಲ್ಲಿ ತಾಲೂಕಿನ ಅಕ್ರಮ ಮದ್ಯ ಮಾರಾಟ, ಓ.ಸಿ. ಇಸ್ಫೀಟ್ ದಂದೆಗಳನ್ನು ನಿಲ್ಲಿಸುತ್ತೇನೆ ಎಂದು ಮತದಾರರ ಬಳಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದರು. ಆದರೆ ಈಗ ಈ ವ್ಯವಹಾರಗಳು ಮಿತಿಮೀರಿವೆ.
ಕಾನೂನು ಬಾಹೀರ ಚಟುವಟಿಕೆ ತಡೆಯಬೇಕಾದ ಶಾಸಕರು ಜಾಣ ಮೌನ ವಹಿಸಿರುವುದನ್ನು ನೋಡಿದರೆ ಅವರ ಕೃಪಾ ಕಟಾಕ್ಷದಿಂದಲೇ ಈ ವ್ಯವಹಾರಗಳು ನಡೆಯುತ್ತಿರುವುದು ಸತ್ಯ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸದಿರುವುದು, ಅಧಿಕಾರಿಗಳ ವರ್ಗಾವಣೆಯನ್ನೇ ದಂಧೆ ಮಾಡಿಕೊಂಡಿರುವುದು ಸೇರಿದಂತೆ ಸರ್ಕಾರದ ಕೃಪೆಯಿಂದ ನಡೆಯುತ್ತಿರುವ ಅಕ್ರಮ ಜೂಜು, ಇಸ್ಪೀಟ್,ಅಕ್ರಮ ಮದ್ಯ ಮಾರಾಟ ನಿಯಂತ್ರಿಸದಿದ್ದರೆ ಶಾಸಕರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಜೆ.ಡಿ.ಎಸ್. ಪರವಾಗಿ ಸತೀಶ್ ಹೆಗಡೆ ಎಚ್ಚರಿಸಿದ್ದಾರೆ.