

ವಿದೇಶಿ ವಿದ್ರೋಹಕ ಶಕ್ತಿಗಳು ನಮ್ಮ ಯುವಕರು,ಯುವತಿಯರನ್ನು ದಿಕ್ಕುತಪ್ಪಿಸುವ ಹುನ್ನಾರದಲ್ಲಿ ತೊಡಗಿದ್ದು,ಮಾದಕ ವಸ್ತುಗಳು,ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಈ ಪರೋಕ್ಷ ದಾಳಿಯನ್ನು ತಡೆಯಲುಪಾಲಕರು, ಹಿರಿಯರು ಜಾಗೃತರಾಗುವ ಅವಶ್ಯಕತೆಯಿದೆ ಎಂದು ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.
ಸಿದ್ಧಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಿರಸಿ ಉಪವಿಭಾಗ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ನೆರೆಯ ರಾಜ್ಯಗಳು, ದೇಶಗಳ ಕುಟಿಲ ಯತ್ನಗಳಿಂದ ಡಗ್ಸ್, ಗಾಂಜಾ ಸೇರಿದ ಮಾದಕ ವಸ್ತುಗಳ ಮಾರಾಟಜಾಲ ಕಾರ್ಯನಿರ್ವಹಿಸುತಿದ್ದು ಸಾರ್ವಜನಿಕರು, ಎಳೆಯ ಮಕ್ಕಳ ಪಾಲಕರು ಈ ಬಗ್ಗೆ ಗಮನ ಹರಿಸದಿದ್ದರೆ ಅಪಾಯವಿದೆ ಎಂದು ವಿವರಿಸಿದರು.
ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಸಂಬಂಧವಿರಬೇಕೆಂಬ ಆಶಯದಿಂದ ಇಂಥ ಸಭೆ ನಡೆಸುತಿದ್ದೇವೆ. 2017 ರಿಂದ ಸಿದ್ಧಾಪುರದಲ್ಲಿ ಅಪಘಾತ, ಸಾವು, ಅಪರಾಧ ಪ್ರಕರಣಗಳ ಪತ್ತೆ ಹೆಚ್ಚುತಿದ್ದು ಸಾರ್ವಜನಿಕರ ಸಹಕಾರದಿಂದ ಇಲ್ಲಿ ಕಾನೂನುಬಾಹೀರ ಚಟುವಟಿಕೆಗಳನ್ನು ನಿಯಂತ್ರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸೇರಿದ ಸಾರ್ವಜನಿಕರು ತಾಲೂಕಿನ ಅಕ್ರಮಮದ್ಯ ಮಾರಾಟ,ಇಸ್ಪೀಟ್,ಓ.ಸಿ. ವ್ಯವಹಾರಗಳ ಬಗ್ಗೆ ಆಕ್ಷೇಪಿಸಿ ನಿಯಂತ್ರಣಕ್ಕೆ ಕೋರಿದರು. ಅಪರಿಚಿತರ ಬಗ್ಗೆ ನಿಗಾ ಇಡುವುದು, ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸುವುದು,ಅಪರಾಧಪ್ರಕರಣಗಳ ನಿಯಂತ್ರಿಸುವುದು ಸೇರಿದಂತೆ ತಾಲೂಕಿನ ಶಾಂತಿ-ಸುವ್ಯವಸ್ಥೆ ಕಾಪಾಡಿ, ಜನಜೀವನಕ್ಕೆ ಅನುಕೂಲಮಾಡಲು ಶ್ರಮಿಸುವುದಾಗಿ ತಿಳಿಸಿದರು.
