
ಅನಾಥ, ಮಾನಸಿಕ ಅಸ್ವಸ್ಥರ ಮಾನವೀಯತೆಯ ಸೇವೆಗೆ ಸಂದ ಗೌರವ
ಆಧಾರ ಶಿಕ್ಷಣ, ಸ್ವ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಸಿದ್ದಾಪುರ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುವ ದಿ.ಎಂ.ಟಿ.ಕೊಡಿಯ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟಿನ ಜಾಕಿ ಡಿಸೋಜಾರನ್ನು ಆಯ್ಕೆ ಮಾಡಲಾಗಿದೆ. ಫೆ. 10 ರಂದು ನಡೆಯಲಿರುವ ಸಂಸ್ಥೆಯ ‘ಸಂಕಲ್ಪ ದಿನಾಚರಣೆ’ಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದಿ.ಎಂ.ಟಿ.ಕೊಡಿಯ ಸಿದ್ದಾಪುರ ತಾಲೂಕಿನ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರು. ಸಂಸ್ಥೆಯ ಆರಂಭದ ದಿನದಿಂದ ಅವರ ಕೊನೆಯ ದಿನಗಳವರೆಗೂ ಸಂಸ್ಥೆಗೆ ಮಾರ್ಗದರ್ಶಕರಾಗಿ ಆಧಾರ ಆಗಿದ್ದರು.
ಅವರು ತಮ್ಮ ವೃತ್ತಿಯ ಹಾಗೂ ನಿವೃತ್ತಿಯ ಬದುಕಿನಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿದ್ದ ಅವರು ಶೋಷಿತರ ಪರವಾದ ಧ್ವನಿಯಾಗಿದ್ದರು. ಸಮಾಜಕ್ಕೆ ಆದರ್ಶವಾಗಿದ್ದರು. ಇವರ ಹೆಸರನ್ನು ಜೀವಂತವಾಗಿಡುವ ಪುಟ್ಟ ಪ್ರಯತ್ನವಾಗಿ ಅವರ ನೆನಪಿನಲ್ಲಿ ಆಧಾರಶ್ರೀ ಪ್ರಶಸ್ತಿಯನ್ನು ಸಂಸ್ಥೆ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಜಾಕಿ ಡಿಸೋಜಾ ತಮ್ಮ ಸರ್ಕಾರಿ ಸೇವಾ ನಿವೃತ್ತಿಯ ನಂತರ ಅಸಹಾಯಕರು, ವೃದ್ಧರು, ದುರ್ಬಲರ ಒಳತಿಗಾಗಿ ಕೆಲಸಮಾಡಿದ್ದಾರೆ ಎಂದು ವಿವರಿಸಲಾಗಿದೆ.
