ನಟರಾಜ ನೃತ್ಯಶಾಲೆ ಸಿದ್ದಾಪುರ ಶಾಖೆಯ 27ನೇ ವರ್ಷದ ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮ ಪಟ್ಟಣ ವ್ಯಾಪ್ತಿಯ ಶಂಕರಮಠದಲ್ಲಿ ನಡೆಯಿತು. ವಿದುಷಿ ಸೀಮಾ ಭಾಗ್ವತ್, ನಟರಾಜನಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೃತ್ಯ ಶಿಕ್ಷಕಿ ಸೌಭಾಗ್ಯ ಹಂದ್ರಾಳ ಹಾಗೂ ನೃತ್ಯಗುರು ವಿದುಷಿ ಸೀಮಾ ಭಾಗ್ವತರನ್ನು ಪಾಲಕರು ವೇದಿಕೆಯಲ್ಲಿ ಗೌರವಿಸಿದರು.
ನಟರಾಜ ನೃತ್ಯಶಾಲೆಯ ವಿದ್ಯಾರ್ಥಿನಿಯರು ವಿವಿಧ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಪುಷ್ಪಾಂಜಲಿಯೊಂದಿಗೆ ಪ್ರಾರಂಭವಾದ ನೃತ್ಯವಾಹಿನಿಯಲ್ಲಿ ಶಿವಸ್ತುತಿ, ಗಣೇಶಸ್ತುತಿ, ವಚನ, ದೇವರನಾಮ, ಕೃತಿ, ಅಲರಿಪುಗಳು ಮೂಡಿಬಂದು ತಿಲ್ಲಾನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನೃತ್ಯ ಶಿಕ್ಷಕಿ ಸೌಭಾಗ್ಯ ಹಂದ್ರಾಳ ಪ್ರದರ್ಶಿಸಿದ ಬಸವಣ್ಣನವರ ವಚನ, 56 ವರ್ಷವಯಸ್ಸಿನ ಇಟಲಿಯ ಮಹಿಳೆ ಮಿರಿಯಂ ಬ್ರೆವಿಟಿ ಅಭಿನಯಿಸಿದ ದೇವರನಾಮ ಪ್ರೇಕ್ಷಕರ ಗಮನಸೆಳೆದವು. ವಿದುಷಿ ದೀಪಾ ಭಾಗ್ವತರ ಗಾಯನ, ವಿದುಷಿ ಸೀಮಾ ಭಾಗ್ವತರ ನಟುವಾಂಗಕ್ಕೆ ವಿದ್ವಾನ್ ಗಣೇಶ ಶಿವಮೊಗ್ಗ ಮೃದಂಗಂ, ಪ್ರದೀಪ ಭಾಗ್ವತ ರಿದಂಪ್ಯಾಡ್ ಹಾಗೂ ವಿದ್ವಾನ್ ಶ್ರೀಕಾಂತ ಮೈಸೂರು ವೈಲಿನ್ ನಲ್ಲಿ ಸಹಕರಿಸಿ ಉತ್ತಮ ಹಿಮ್ಮೇಳ ಒದಗಿಸಿದರು. ಉಷಾ ಹೆಗಡೆ ನಿರೂಪಿಸಿದರು.
ಶರಾವತಿ ಅಭಯಾರಣ್ಯಕ್ಕೆ ಗ್ರಾಮಗಳ ಸೇರ್ಪಡೆ, ಹೆಗ್ಗರಣಿಯಲ್ಲಿ
ಮಾ.3 ರಂದು ಪ್ರತಿಭಟನೆ
ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಮಾರ್ಚ 3 ಮುಂಜಾನೆ 10 ಘಂಟೆಗೆ ಹೆಗ್ಗರಣೆ ಸೊಸೈಟಿಯ ಹತ್ತಿರ ಬೃಹತ್ ಪ್ರತಿಭಟನಾ ಸಭೆ ಜರುಗಿಸಲು ನಿರ್ಧರಿಸಲಾಗಿದೆ.