
ವಿದ್ಯಾರ್ಥಿಗಳಿಗೆ ದೊಡ್ಡ ಕನಸುಗಳಿರದಿದ್ದರೆ ಅಂಥವರ ಬದುಕಿಗೆ ಗರ ಬಡಿಯುವುದು ನಿಶ್ಚಿತ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಹೇಳಿದರು. ಅವರು ತಾಲೂಕಿನ ಕೋಲಶಿರ್ಸಿ ಬಿ.ಸಿ.ಎಂ. ಬಾಲಕಿಯರ ವಸತಿ ನಿಲಯದ ವಾರ್ಷಿಕೋತ್ಸವ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಕೀಳರಿಮೆ ಮತ್ತು ಮೇಲರಿಮೆಯಿಂದ ಬಳಲುತ್ತಿರುವ ಸಮಾಜದಲ್ಲಿ ಸೂಕ್ತ ಸಮಯದಲ್ಲಿ ಯೋಗ್ಯ ನಿರ್ಣಯಗಳನ್ನು ಮಾಡದಿದ್ದರೆ ಬದುಕು ಬರಡಾಗುತ್ತದೆ. ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯುವ ಮೂಲಕ ಸರ್ಕಾರಿ ಸೇವೆಗೆ ಬಂದು ವಿದ್ಯಾರ್ಥಿಗಳು ಸರ್ಕಾರ, ದೇಶದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೋಲಶಿರ್ಸಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಯಂತಿ ನಾಯ್ಕ ವಿದ್ಯಾರ್ಥಿಗಳ ಒಳಿತನ್ನು ತಮ್ಮ ಒಳಿತೆಂದು ಭಾವಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಸರಿಸುವ ಮೂಲಕ ತಮ್ಮ ಸಾಮಥ್ರ್ಯ ವೈದ್ಧಿಗೆ ಪ್ರಯತ್ನಿಸಬೇಕು ಎಂದರು.
ಇಲಾಖೆಯ ಅಧಿಕಾರಿಗಳು, ಸಂಘಟಕರೂ ಆದ ಕೆ.ಕೆ.ಗಣಪತಿ ಮತ್ತು ಸಂತೋಷ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ವಿದ್ಯಾರ್ಥಿನಿಲಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವು ನೀಡಿದ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು.




