

ರಾಜಕಾರಣ,ಜನಸೇವೆ ಯಲ್ಲಿ ಯಾರೆಲ್ಲಾ ಇರಬಾರದೋ, ಯಾರ್ಯಾರು ಬರಬಾರದೋ ಅಥವರೆಲ್ಲಾ ರಾಜಕಾರಣಿಗಳಾಗಿ ಈಗಿನ ವ್ಯವಸ್ಥೆ ಕಲುಷಿತಗೊಂಡಿದೆ. ಈ ಸ್ಥಿತಿಯಲ್ಲಿ ಸ್ವಚ್ಛ,ಪ್ರಾಮಾಣಿಕ, ಜನಪರ ರಾಜಕಾರಣ ಮಾಡಬಯಸುವವರಿಗಾಗಿ ಕರ್ನಾಟಕ ರಾಷ್ಟ್ರಸಮೀತಿ ಹೊಸ ನಾಯಕತ್ವ, ಹೊಸ ಆಲೋಚನೆ, ಯೋಜನೆಗಳೊಂದಿಗೆ ರಾಜ್ಯದಲ್ಲಿ ಕೆಲಸಮಾಡುವ ಸಂಕಲ್ಫಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.
ಅವರು ಇಲ್ಲಿಯ ನೌಕರರ ಸಭಾಭವನದಲ್ಲಿ ನಡೆದ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಸಂವೇದನೆ ಇಲ್ಲದ ಜೆ.ಸಿ.ಬಿ.
(ಜಾದಳ,ಕಾಂಗ್ರೆಸ್, ಬಿ.ಜೆ.ಪಿ.) ರಾಜಕಾರಣದಿಂದಾಗಿ ಜನರಲ್ಲಿ ಸಿನಿಕತೆ ಪ್ರಾರಂಭವಾಗಿದೆ. ಈ ವ್ಯವಸ್ಥೆ ಬದಲಿಸುವ ಸಂಕಲ್ಫದಿಂದಲೇ ಕರ್ನಾಟಕ ರಾಷ್ಟ್ರಸಮೀತಿ ಪ್ರಾರಂಭವಾಗಿದೆ. ಹೊಸ ರಾಜಕೀಯ ಪರಿಭಾಷೆ ಅರ್ಥಮಾಡಿಕೊಳ್ಳುವವರು, ಹಣ-ಹೆಂಡದ ಹಂಗಿಲ್ಲದೆ ನಾಯಕತ್ವ, ರಾಜಕೀಯ ಮಾಡುವವರು ಮಾತ್ರ ಕೆಆರೆಸ್‍ಗೆ ಬರಬೇಕು ಎಂದರು.
ಎಲ್ಲಾ ಪಕ್ಷಗಳು ಅಮಲಿನ ರಾಜಕೀಯ ಪ್ರಯೋಗಮಾಡುತ್ತಿರುವ ಸಂದರ್ಭದಲ್ಲಿ ಹೊಸ ಆಶಾವಾದದಿಂದ ಬರುತ್ತಿರುವ ರವಿಕೃಷ್ಣ ರೆಡ್ಡಿ ಮತ್ತು ಅವರ ಕರ್ನಾಟಕ ರಾಷ್ಟ್ರ ಸಮೀತಿ ಮೇಲೆ ಜನ ಭರವಸೆ ಕಾಣುವಂತಾಗಿದೆ ಎಂದು ಈ ಕಾರ್ಯಾಗಾರ ಉದ್ಘಾಟಿಸಿದ ಪತ್ರಕರ್ತ ಗಣೇಶ್ ಭಟ್ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜಮುಖಿ ಕನ್ನೇಶ್ ಮಾತನಾಡಿ ರಾಜ್ಯದ ಜನರ ಹೊಸ ನಿರೀಕ್ಷೆಯಂತೆ, ಹೊಸ ನಿರೀಕ್ಷೆ ಭರವಸೆಗಳೊಂದಿಗೆ ಬಂದಿರುವ ಕರ್ನಾಟಕ ರಾಷ್ಟ್ರಸಮೀತಿ ಜನರ ಕಷ್ಟಕಾಲದ ಒಳ್ಳೆಯ ಆಯ್ಕೆ, ಜನಪರ ಕೆಲಸಗಳಿಂದ, ಹೋರಾಟಗಳಿಂದ ರಾಜಕಾರಣ ಸಮಾಜಮುಖಿಯಾಗಬೇಕಾದ ಈ ತುರ್ತಿನ ಕಾಲದಲ್ಲಿ ರವಿಕೃಷ್ಣ ರೆಡ್ಡಯಂಥವರ ನಾಯಕತ್ವವನ್ನು ಒಪ್ಪಿ, ಭರವಸೆ ಇಡಬಹುದು ಎಂದು ಶ್ಲಾಘಿಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಕರ್ನಾಟಕ ರಾಷ್ಟ್ರ ಸಮೀತಿಯಿಂದ ನಾಯಕತ್ವ ಶಿಬಿರ ನಡೆಸಿ ಸ್ವಚ್ಛ, ಪ್ರಾಮಾಣಿಕ ನಾಯಕತ್ವ ರೂಪಿಸುವುದು ಮತ್ತು ಮತದಾರರಿಗೂ ಜನಪ್ರೀಯ ರಾಜಕಾರಣಕ್ಕಿಂತ ಜನಪರ ರಾಜಕಾರಣದ ಮಹತ್ವ ಹೆಚ್ಚು ಎಂದು ಪರಿಚಯಿಸುವುದಾಗಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಮತ್ತು ಸಮಾಜಮುಖಿ ಸಮೂಹದ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿಯವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಕರ್ನಾಟಕ ರಾಷ್ಟ್ರ ಸಮೀತಿಯ ಪ್ರಮುಖರು ವೇದಿಕೆಯಲ್ಲಿದ್ದರು.



