
ಕರ್ನಾಟಕ ರಾಷ್ಟ್ರ ಸಮೀತಿ ರವಿಕೃಷ್ಣ ರೆಡ್ಡಿಯವರೊಂದಿಗೆ
ಮೂಖಾಮುಖಿ-
ಜನ ಇನ್ನೂ ಸಮಾಜಮುಖಿಯಾಗಿ ಯೋಚಿಸುತ್ತಿಲ್ಲ,
ಗೆಲ್ಲುತ್ತೇವೆ ಒಂದುದಿನ ಗೆಲ್ಲಲೇಬೇಕು ಒಳ್ಳೆತನ
ಕರ್ನಾಟಕ ರಾಷ್ಟ್ರ ಸಮೀತಿಯ(ಪಕ್ಷ) ರವಿಕೃಷ್ಣ ರೆಡ್ಡಿ ಕನಸುಗಾರ, 2008 ರಲ್ಲಿ ವಿದೇಶದಿಂದ ಭಾರತಕ್ಕೆ ಬಂದು ಸಮಾಜಮುಖಿಯಾದ ವಾತಾವರಣಕ್ಕೆ ಅಂಥ ಮನೋಭಾವದ ಮಾಧ್ಯಮ,ಪಕ್ಷ, ಆಡಳಿತ, ರಾಜ್ಯ ಬೇಕು ಎಂದು ಕನಸಿದವರು. ಅವರು ಹೊರತರುತ್ತಿದ್ದ ವಿಕ್ರಾಂತ ಕರ್ನಾಟಕ ಕನ್ನಡ ಸಾಪ್ತಾಹಿಕ ಲೋಕದ ವಿಶಿಷ್ಟ ಪ್ರಯೋಗ. ಈ ವಿಕ್ರಾಂತ ಕರ್ನಾಟಕ ಮುಂದುವರಿಸಲಾಗದ ಬಿಕ್ಕಟ್ಟಿಗೆ ಸಿಲುಕಿದ ರವಿಕೃಷ್ಣ ರೆಡ್ಡಿ ರಾಜಕೀಯದಿಂದ ಸಮಾಜಪರಿವರ್ತನೆಯ ಕನಸು ಕಂಡವರು.
ಸಮಾಜಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠರೊಂದಿಗೆ ಸಮಸಮಾಜ, ಸಮಾಜಮುಖಿ ಚಿಂತನೆಯ ಆಶಾವಾದದೊಂದಿಗೆ ಕರ್ನಾಟಕ ರಾಷ್ಟ್ರ ಸಮೀತಿ ಕಟ್ಟಿದ್ದಾರೆ. ಕರ್ನಾಟಕ ರಾಷ್ಟ್ರ ಸಮೀತಿ ಹಣ-ಹೆಂಡ,ಮನಿ.ಮಸಲ್‍ಪವರ್ ಗಳನ್ನು ಮೀರಿದ ಸುಧಾರಣಾವಾದಿ ರಾಜಕೀಯದ ಪ್ರಯೋಗ.
ಕರ್ನಾಟಕ ರಾಷ್ಟ್ರ ಸಮೀತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಕಳೆದ ವಾರ ಸಮಾಜಮುಖಿ ಗೆ ಮುಖಾಮುಖಿಯಾದರು ಅವರೊಂದಿಗಿನ ಚುಟುಕು ಸಂದರ್ಶನ ಹೀಗಿದೆ-
ಸಮಾಜಮುಖಿ- ಈ ಪ್ರಯೋಗ ಸಾಧ್ಯವೆ?
ರವಿಕೃಷ್ಣರೆಡ್ಡಿ- ನಮ್ಮ ಗುಣ,ಆಶಾವಾದ, ಅಪೇಕ್ಷೆ ವರವೂ ಆಗಬಹುದು, ಶಾಪವೂ ಆಗಬಹುದು. ರಾಜಕೀಯ, ರಾಜಕೀಯ ಬದುಕು ತೀರಾ ಕೆಟ್ಟ ಸಂದರ್ಭದಲ್ಲಿ ನಾವು ಮಾಡುತ್ತಿರುವ ಪ್ರಯೋಗ ಅಪ್ರಾಯೋಗಿಕ ಎನಿಸಬಹುದು. ನಿರಾಶಾವಾದಿಗಳು, ಸಿನಿಕರಿಗೆ ಇದು ಕೆಟ್ಟ ಕಾಲ ಇದನ್ನು ಯಾರೂ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಹತಾಸೆ ಇರಬಹುದು. ಆದರೆ ಸಮಾಜಮುಖಿಯಾದ ಸಮಾಜ,ರಾಜಕೀಯ, ಆಡಳಿತದ ಹಿನ್ನೆಲೆಯಲ್ಲಿ ನಮ್ಮ ಪ್ರಯತ್ನಸಾಗಿದೆ. ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಪಾಪಿ,ನಮ್ಮ ಸಂಕಲ್ಫ, ಬದ್ಧತೆ ಒಳ್ಳೆಯದರತ್ತ, ಗೆಲ್ಲುತ್ತೇವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ.
ಸಮಾಜಮುಖಿ-ದೇಶದಲ್ಲಿ ಆದಾಯ, ತೆರಿಗೆ ಸಂಗ್ರಹ ವೃದ್ಧಿಯಾಗುತ್ತಿದೆ. ಆದರೆ ಸಾಮಾಜಿಕ ವ್ಯವಸ್ಥೆ,ಜಿ.ಡಿ.ಪಿ. ಮೇಲೇಳುತ್ತಿಲ್ಲ ಯಾಕೆ?
ರ.ರೆ.- ದೇಶದ ಸಂಪತ್ತು ಕೆಲವರ ಕೈ ಸೇರುತ್ತಿದೆ. ಬಡವ ಬಡವನಾಗುತ್ತಾ, ಶ್ರೀಮಂತ ಶ್ರೀಮಂತನಾಗುತ್ತಾ ಈ ಎರಡೂ ವರ್ಗಗಳೂ ಸೇರಿಯೇ ಜಾತಿವಾದ, ಕೋಮುವಾದ ಬೆಳೆಸುತ್ತಿವೆ. ಅಸಹನೆ, ಅಪನಂಬಿಕೆ ಹೆಚ್ಚುತ್ತಾ ಸಂಕೀರ್ಣವಾಗುತ್ತಾ ಅಸಮಾನತೆ, ಕೋಮುವಾದ, ಉಳ್ಳವರ ಪರ ಜನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿವೆ.
ಇದರ ಪರಿಣಾಮ ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹದಗೆಡುತ್ತಿದೆ. ಸಂಪತ್ತು, ಹಣದ ಕ್ರೋಢೀಕರಣ ಅರಾಜಕತೆ ಸೃಷ್ಟಿಸುತ್ತದೆ. ದುರಂತವೆಂದರೆ ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳು ಅರಾಜಕತೆ, ಅಸಮಾನತೆ ಸೃಷ್ಟಿಸಿ ಜನರನ್ನು ದಿಕ್ಕುತಪ್ಪಿಸುತ್ತಿವೆ. ಇವೆಲ್ಲಾ ಅರ್ಥಮಾಡಿಕೊಳ್ಳಬೇಕಾದ ಜನತೆ,ಮತದಾರರು ಈಅವ್ಯವಸ್ಥೆಗಳ ದಾಳವಾಗುತಿದ್ದಾರೆ. ಜಾಗತಿಕ ತಾಪಮಾನ, ಬೃಷ್ಟಾಚಾರ ಇಂದಿನ ಸವಾಲುಗಳು ಆದರೆ ಭಾರತದ ಪ್ರಭುತ್ವ ಇವುಗಳನ್ನು ಬಿಟ್ಟು ಬೇರೆಯದರ ಬಗ್ಗೆಯೇ ಮಾತನಾಡುತ್ತಿದೆ. ವಿವೇಕಿಗಳಿಗಾದರೂ ಸತ್ಯ ಯಾವುದು ಮಿಥ್ಯ ಯಾವುದು ಎಂದು ಅರ್ಥವಾಗಬೇಕಲ್ಲ.
ಸಮಾಜಮುಖಿ- ಮುಂದಿನ ಚುನಾವಣೆಗಳಲ್ಲಿ ನಿಮ್ಮ ಪಾತ್ರ
ರ.ರೆ.- ನಮ್ಮ ಪ್ರಯತ್ನ ಸಾಗಿದೆ. 2012-13 ರಿಂದ ನಮ್ಮ ಕೆಲಸ ಮಾಡುತ್ತಾ ರಾಜಕೀಯದಲ್ಲೂ ಪ್ರಯೋಗ ಮಾಡುತಿದ್ದೇವೆ.
ಆಪ್‍ನಿಂದ ಚುನಾವಣೆ ಮಾಡಿದೆವು. ಆಪ್ ಪಕ್ಷಕ್ಕೆ ಕರ್ನಾಟಕದ ಮಟ್ಟಿಗೆ ಆಸಕ್ತಿ ಇಲ್ಲ. ಲೋಕಸತ್ತಾ ಜೊತೆ ಆಪ್ ಮೈತ್ರಿಯಲ್ಲಿ ದೇಶದಾದ್ಯಂತ ರಾಜಕೀಯ ಪ್ರಯೋಗಕ್ಕೆ ಚಿಂತನೆ, ಪ್ರಯತ್ನ ನಡೆದಿತ್ತು. ಅದು ಯಶಸ್ವಿಯಾಗಲಿಲ್ಲ.
ಲಂಚಮುಕ್ತ ಕರ್ನಾಟಕ ವೇದಿಕೆಯಿಂದ ಕೆಲಸ ಮಾಡುತ್ತಾ ಚುನಾವಣೆ ಎದುರಿಸಿದೆವು. ಈ ಜೆ.ಸಿ.ಬಿ.(ಜೆ.ಡಿ.ಎಸ್., ಕಾಂಗ್ರೆಸ್, ಬಿ.ಜೆ.ಪಿ.) ಗಳ ಅಂಧಾದರ್ಬಾರ್ ನಲ್ಲಿ ಒಳ್ಳೆ ಚಿಂತನೆ,ಸಮಾಜಮುಖಿ ಆಲೋಚನೆಗಳಿಗೆ ಬೆಲೆ ಇಲ್ಲ. ಆದರೆ ಒಳ್ಳೆಯ ಆಡಳಿತ, ಸಮಸಮಾಜ ನಿರ್ಮಾಣ, ಒಳ್ಳೆಯ ರಾಜಕೀಯದ ಮಾತು ಬಂದಾಗ ಜನ ನಮ್ಮತ್ತಲೇ ನೋಡುತ್ತಾರೆ. ನಾವೂ ಕಾಲಪಕ್ವವಾಗಲು ಕಾಯುತ್ತಿದ್ದೇವೆ. ಬರಲಿರುವ ಚುನಾವಣೆಗಳಲ್ಲಿ ನಮ್ಮ ವಿಚಾರ, ಚಿಂತನೆ, ಸಿದ್ಧಾಂತಕ್ಕೆ ಬದ್ಧರಿರುವ ಉತ್ತಮ ಯುವಕರಿಗೆ ಟಿಕೇಟ್ ನೀಡುತ್ತೇವೆ. ಹಣ-ಹೆಂಡ ಹಂಚದೆ ಚುನಾವಣೆ ಎದುರಿಸಬೇಕು. ಜನ ಲಂಚಮುಕ್ತ, ಉಳ್ಳವರ ಕಸರತ್ತಿನ ರಾಜಕೀಯದ ಮಧ್ಯೆ ನಮಗೆ ಅವಕಾಶ ನೀಡಬೇಕು. ಅದರ ಅಂಗವಾಗಿ ರಾಜ್ಯಾದ್ಯಂತ ನಾಯಕತ್ವ ತರಬೇತಿ ಶಿಬಿರಗಳನ್ನು ನಡೆಸುತಿದ್ದೇವೆ. ಹೀಗೆ ನಾಯಕತ್ವ ರೂಪಿಸುವ ಮೂಲಕ ಹೊಸ,ಸಮಾಜಮುಖಿ ಸಮಾಜ ಕಟ್ಟುವ ಉದ್ದೇಶ ನಮ್ಮದು. ಕರ್ನಾಟಕ ರಾಷ್ಟ್ರ ಸಮೀತಿ. ಸಿದ್ಧಾಂತ, ಶಿಸ್ತು,ಉತ್ತಮಸಮಾಜದ ನಿರ್ಮಾಣದ ಪ್ರಯತ್ನ ಮಾಡುತ್ತಿದೆ.
ಸಮಾಜಮುಖಿ- ವಿಷಯವಸ್ತು, ವಸ್ತುನಿಷ್ಠತೆಯ ಆಧಾರದಲ್ಲಿ ಚುನಾವಣೆ ಮಾಡುತ್ತೀರಾ?
ರ.ರೆ.- ಕರ್ನಾಟಕದಲ್ಲಿ ಜನ ವಿಷಯವಸ್ತು ಕೇಳುತ್ತಿಲ್ಲ. ಜಾತಿ, ಹಣ, ಧೃವೀಕರಣ, ಆಮಿಷ, ಬೃಷ್ಟಾಚಾರಗಳ ಆಧಾರದಲ್ಲೇ ಚುನಾವಣೆಗಳು ನಡೆಯುತ್ತಿವೆ.20-30 ವರ್ಷಗಳಿಂದ ಜನತೆ ಇದನ್ನು ನೋಡಿ ಬೇಸತ್ತಿದ್ದಾರೆ. ಕೆಲವೆಡೆ ಪರ್ಯಾಯ ಪಕ್ಷ, ವ್ಯಕ್ತಿ, ಅಭ್ಯರ್ಥಿಗಳೂ ಸಿಗುತ್ತಿಲ್ಲ. ನಾವು 15 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಸ್ಫರ್ಧಿಸಿ ನೋಡಿದ್ದೇವೆ. ಬಡತನ, ಅಸಹಾಯಕತೆಗಳೂ ಕೋಮುವಾದಕ್ಕೆ ಗೊಬ್ಬರಗಳಾಗುತ್ತಿವೆ. ನಮ್ಮ ಚಿಂತನೆ ಜನಕ್ಕೆ ಹಿಡಿಸುತ್ತಿದೆ. ಜನ ಒಪ್ಪಿಕೊಂಡರೆ ಮಾತ್ರ ನಮಗೆ ಗೆಲುವು, ಎಲ್ಲದಕ್ಕೂ ಕಾಲ ಬರಬೇಕು. ನಾವು ಕಾಯುತಿದ್ದೇವೆ. ನಮಗೆ, ನಮ್ಮ ಉನ್ನತ ಆದರ್ಶಗಳಿಗೆ ಮಹತ್ವ ಇದೆ. ಅದು ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದರೆ ಎಲ್ಲವೂ ಸಾಧ್ಯ. ಬೃಷ್ಟತೆ, ಕೋಮುವಾದಗಳ ನಂಜು ಏರಿದ ಸಮಯವಿದು, ನಂಜು ಇಳಿದಾಗ ಜನಕ್ಕೆ ಎಲ್ಲವೂ ಅರ್ಥವಾಗುತ್ತದೆ. ಆಗ ಜನ ತಮಗೆ ಯಾರು ಬೇಕು ಎಂದು ಯೋಚಿಸಿ ಮತದಾನಮಾಡುತ್ತಾರೆ. ಪರಿವರ್ತನೆಗೂ ಸಮಯಾವಕಾಶ ಬೇಕು.


