

ಬಿಸಿತುಪ್ಪವಾದ ಮೀಸಲಾತಿ:
ವಿಧಾನಸಭಾ ಅಧ್ಯಕ್ಷರ
ಕೈವಾಡದ ಬಗ್ಗೆ ಅಸಮಾಧಾನ
ಬುಧವಾರ ರಾಜ್ಯ ಸರ್ಕಾರ ಪ್ರಕಟಿಸಿರುವ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ಸಮರ್ಪಕವಾಗಿಲ್ಲ ಎನ್ನುವ ಅಸಮಾಧಾನದ ಹೊಗೆ ಎದ್ದಿದೆ.
ಕೆಲವು ಸ್ಥಳಿಯ ಸಂಸ್ಥೆಗಳಲ್ಲಿ ಆಡಳಿತ ಪಕ್ಷ ತಮ್ಮ ಪರ ಮೀಸಲಾತಿ ತಂದುಕೊಂಡಿದ್ದರೆ,ಹಲವು ಕಡೆ ಬಿ.ಜೆ.ಪಿ.ಗೆ ಬಹುಮತ ಇಲ್ಲದ ಸ್ಥಳಿಯ ಸಂಸ್ಥೆಗಳಲ್ಲಿ ತಮ್ಮವರ ಪರ ಮೀಸಲಾತಿ ಪ್ರಕಟಿಸಿ, ಚುನಾಯಿತ ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಒಂದು ಉದಾಹರಣೆ-
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪಟ್ಟಣ ಪಂಚಾಯತ್ ನಲ್ಲಿ ಬಿ.ಜೆ.ಪಿ. ಅವಶ್ಯಕತೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.ಈ ಪ.ಪಂ. ನಲ್ಲಿ ಹಿರಿಯರು, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾಗಿದ್ದ ಕೆ.ಜಿ.ನಾಯ್ಕ ಅಧ್ಯಕ್ಷರಾಗುವ ಅನುಕೂಲ ಪರಿಸ್ಥಿತಿಯಲ್ಲಿ ಈಗಿನ ಮೀಸಲಾತಿ ಅವರಿಗೆ ಶಾಪವಾಗಿ ಪರಿಣಮಿಸಿದೆ. ಕಳೆದ ಎರಡ್ಮೂರು ಅವಧಿಗಳಿಂದಲೂ ಸಾಮಾನ್ಯವರ್ಗ ಹಾಗೂ ಹಿಂದುಳಿದ ವರ್ಗ ಅ ಸಾಮಾನ್ಯ ಮೀಸಲಾತಿಯಿಂದ ವಂಚಿತವಾಗಿದ್ದ ಈ ಪ.ಪಂ. ಈ ಬಾರಿ ರಾಜ್ಯ ವಿಧಾನಸಭಾ ಅಧ್ಯಕ್ಷರ ಆಸೆ, ಅಪೇಕ್ಷೆಯಂತೆ ಹಿಂದುಳಿದ ವರ್ಗ ಸಾಮಾನ್ಯ ಅಥವಾ ಸಾಮಾನ್ಯ ಮೀಸಲಾತಿ ಬರುವ ಬದಲು ಹಿಂದಿನಂತೆ ಸಾಮಾನ್ಯ ಮಹಿಳೆ (ಅಧ್ಯಕ್ಷ) ಮತ್ತು ಹಿಂದುಳಿದವರ್ಗದ ಮಹಿಳೆ (ಉಪಾಧ್ಯಕ್ಷ) ಮೀಸಲಾತಿ ನಿಗದಿಯಾಗಿದೆ.
ಇಂಥ ಮೀಸಲಾತಿ ನಿಗದಿ ಮಾಡಿಸುವ ಮೂಲಕ ಬಿ.ಜೆ.ಪಿ. ನಿಕಟಪೂರ್ವ ಜಿಲ್ಲಾಧ್ಯಕ್ಷರನ್ನು ತೆರೆಮರೆಗೆ ಸರಿಸುವ ಪ್ರಯತ್ನ ನಡೆದಿದೆಯಾ ಎನ್ನುವ ಸಂಶಯ, ಅನುಮಾನಗಳನ್ನು ಬಿ.ಜೆ.ಪಿ. ಪ್ರಮುಖರೇ ವ್ಯಕ್ತಪಡಿಸಿದ್ದು. ಮೀಸಲಾತಿ ನಿಗದಿಯಿಂದ ಸಮರ್ಥರು ಯೋಗ್ಯರನ್ನು ಮೇಲೇರಿಸಲೂಬಹುದು, ಕೆಳಗಿಳಿಸಲೂ ಬಹುದು ಎನ್ನುವುದನ್ನು ಸಾಧ್ಯಮಾಡಿದಂತಾಗಿದೆ.
ಕೋರ್ಟ್‍ಮೊರೆ-
ಸಿದ್ದಾಪುರ ಪ,ಪಂ. ಮೀಸಲಾತಿ ನಿಗದಿಯಲ್ಲಿ ಸ್ಥಳಿಯ ಶಾಸಕರು ಮತ್ತು ಹಿಂದಿನ ಬಿ.ಜೆ.ಪಿ. ಜಿಲ್ಲಾಧ್ಯಕ್ಷರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವ ಸಾಧ್ಯತೆ ನಿಚ್ಚಳ ಎನ್ನಲಾಗುತ್ತಿದೆ. ಈಗಿನ ಬಿ.ಜೆ.ಪಿ. ಸರ್ಕಾರ ಅಧಿಕಾರ ಪ್ರಾರಂಭಿಸಿದ ದಿನಗಳಿಂದ ಪ.ಪಂ. ಸದಸ್ಯ ಮತ್ತು ನಿಕಟಪೂರ್ವ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ಸ್ಥಳಿಯ ಶಾಸಕ ವಿಧಾನಸಭಾ ಅಧ್ಯಕ್ಷರ ನಡುವಿನ ಅಸಮಾಧಾನದ ಬಿರುಕು ಹೆಚ್ಚುತ್ತಾ ಸಾಗಿದೆ. ಕೆಲವು ದಿವಸಗಳ ಹಿಂದೆ ಸಿದ್ಧಾಪುರದ ಬಿ.ಜೆ.ಪಿ. ಪ್ರಮುಖರು ವಿಧಾನಸಭಾ ಅಧ್ಯಕ್ಷರ ಬದಲಾದ ನಡೆ ಪ್ರಶ್ನಿಸಿ, ಬಹಿರಂಗ ಮಾತುಕತೆಗೆ ಆಹ್ವಾನಿಸಿದ್ದರು. ಕಾರ್ಯಕರ್ತರು,ಮುಖಂಡರ ಈ ಕರೆಗೆ ಕ್ಯಾರೇ ಎನ್ನದ ಶಾಸಕರು ಉಡಾಫೆ ಮಾಡಿದ್ದರು. ಇದಾಗಿ ಒಂದು ತಿಂಗಳ ಕಳೆಯುವುದರೊಳಗೆ ಸ್ಥಳಿಯ ಸಂಸ್ಥೆಗಳ ಮೀಸಲಾತಿ ಪ್ರಕಟವಾಗಿದೆ.
ಈ ಮೀಸಲಾತಿ ನಿಗದಿಯ ಹಿಂದೆ ಇರುವ ಕಾಣದ ಕೈ ಶಾಸಕರದ್ದೇ ಆಗಿದ್ದು ಅವರು ತಮ್ಮ ಮಾಜಿ ಶಿಷ್ಯ ಕೆ.ಜಿ.ನಾಯ್ಕರಿಗೆ ಪ.ಪಂ. ಅಧ್ಯಕ್ಷತೆ ತಪ್ಪಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ (ಮೀಸಲಾತಿ ಮಾಡಿಸಿದ್ದಾರೆ)ಮಾಡಿದ್ದಾರೆ ಎನ್ನುವ ಆರೋಪ ಬಹಿರಂಗವಾಗಿ ಕೇಳಿ ಬರುತ್ತಿದೆ.
ಈ ಗುರುಶಿಷ್ಯರ ವಿರಸದ ಹಿನ್ನೆಲೆಯಲ್ಲಿ ಈಗ ಸಿದ್ಧಾಪುರ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಅವೈಜ್ಞಾನಿಕತೆ ಬಗ್ಗೆ ಅವಕಾಶ ವಂಚಿತರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ತಮ್ಮ ಹೆಸರು ಪ್ರಕಟಿಸಬಾರದೆಂದು ವಿನಂತಿಸಿಕೊಂಡ ಬಿ.ಜೆ.ಪಿ.ಯ ಪ್ರಮುಖರೊಬ್ಬರು
‘ ಮೀಸಲಾತಿ ಉದ್ದೇಶ ಮಹತ್ತರವಾದದ್ದಾದರೂ ಆಳುವವರು,ಪ್ರಬಲರು ಮೀಸಲಾತಿಯನ್ನೂ ತಮ್ಮ ಮೂಗಿನ ನೇರಕ್ಕೆ ಬಳಸಿ ಅದರ ಉದ್ದೇಶ ಹಾಳು ಮಾಡುತ್ತಾರೆ. ಸಿದ್ದಾಪುರದ ವಿಚಾರದಲ್ಲಿ ಸ್ಥಳಿಯ ಶಾಸಕರ ವರ್ತನೆ ಅಕ್ಷಮ್ಯ, ಉಂಡು ಎಸೆಯುವ ಎಲೆಯಂತೆ ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ವಿಧಾನಸಭಾ ಅಧ್ಯಕ್ಷರು ಜನರ ಅಪೇಕ್ಷೆ, ಕಾರ್ಯಕರ್ತರ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಶಾಸಕರು ಮುಂದಿನ ಚುನಾವಣೆಗೆ ಪಕ್ಷ ಬದಲಾಯಿಸುತ್ತಾರೋ? ಕ್ಷೇತ್ರ ಬದಲಾಯಿಸುತ್ತಾರೋ ಎನ್ನುವ ಅನುಮಾನ ಬರುವಂತೆ ನಡೆದುಕೊಳ್ಳುತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ಧಾಪುರದಿಂದ ಪ್ರಾರಂಭವಾಗಿ ಜಿಲ್ಲೆ, ರಾಜ್ಯದಾದ್ಯಂತ ಈಗಿನ ಮೀಸಲಾತಿಯೂ ವಿವಾದಾಸ್ಪದ,ವಿವಾದಾತ್ಮಕ ಎನ್ನಲಾಗುತಿದ್ದು ರಾಜ್ಯದ ಮುಖ್ಯಮಂತ್ರಿ, ವಿಧಾನಸಭಾ ಅಧ್ಯಕ್ಷರು ಹಾಗೂ ಕೆಲವು ಪ್ರಮುಖ ನಾಯಕರು ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನವಂತೂ ಬೂದಿಮುಚ್ಚಿದ ಕೆಂಡದಂತೆ ಸುಪ್ತವಾಗಿದೆ.
ಶನಿವಾರ ರಾ.ಸ.ನೌ.ಸಂಘದ ಸರ್ಕಾರಿ ನೌಕರರ ಸಾಂಸ್ಕøತಿಕ
ಸಂಜೆ -2020
ಸಿದ್ಧಾಪುರ ತಾಲೂಕಿನ ಸರ್ಕಾರಿ ನೌಕರರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸರ್ಕಾರಿ ನೌಕರರ ಸಾಂಸ್ಕøತಿಕ ಸಂಜೆ ಮೊಟ್ಟ ಮೊದಲ ಬಾರಿ ಇಲ್ಲಿ ನಡೆಯುತ್ತಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸೇರುವ ಈ ಕಾರ್ಯಕ್ರಮ ಮಾ.14ರ ಶನಿವಾರ ಸಂಜೆ ನಡೆಯಲಿದೆ.
ಈ ಬಗ್ಗೆ ಸರ್ಕಾರಿ ನೌಕರರ ಭವನದಲ್ಲಿ ಮಾಹಿತಿ ನೀಡಿದ ತಾಲೂಕಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಾರ್ವಜನಿಕರನ್ನು ಮಾಧ್ಯಮಗಳ ಮೂಲಕ ಆಹ್ವಾನಿಸಿದರು.ಅಂದು ನಡೆಯಲಿರುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಲಿದ್ದಾರೆ.




