

[“ಸಿಡುಬು ರೋಗವನ್ನು ಜೈಸಿದೆವು!” ಎಂದು ಘೋಷಿಸಿ ನಾಡಿದ್ದು ಮೇ 8ಕ್ಕೆ 40 ವರ್ಷಗಳಾಗುತ್ತವೆ. ಅದರ ಎರಡು ಸ್ಯಾಂಪಲ್‌ಗಳು ಎರಡು ದೇಶಗಳಲ್ಲಿ ಅತಿಭದ್ರ ರಕ್ಷಣೆಯಲ್ಲಿವೆ. ಅವನ್ನು ನಾಶ ಮಾಡಬೇಕೆ, ಉಳಿಸಬೇಕೆ ಎಂಬುದು ಮತ್ತೆಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬರುತ್ತಲೇ ಇದೆ. ಆ ಸಂಕ್ಷಿಪ್ತ ಕಥನ ಇಲ್ಲಿದೆ. ಇದರಲ್ಲಿ ರಾಜಕೀಯವೂ ಇದೆ, ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಓದಿ.]
ಸಿಡುಬು (ಮೈಲಿ, smallpox) ರೋಗ ಹಿಂದೊಂದು ಕಾಲದಲ್ಲಿ ಭಾರೀ ವ್ಯಾಪಕವಾಗಿತ್ತು. ಅದಕ್ಕೆ ಕಾರಣವಾದ ‘ವೇರಿಯೊಲಾ’ ಎಂಬ ವೈರಾಣು ಈಗಿನ ಕೊರೊನಾದ ಹಾಗೇ ಎಂಜಲು ಅಥವಾ ಸೀನಿನ ಹನಿಯ ಮೂಲಕ ಹರಡುತ್ತಿತ್ತು. ಕೊರೊನಾದ ಹಾಗೇ ಹೆಚ್ಚಾಗಿ ಮಾರ್ಚ್ ಏಪ್ರಿಲ್‌ನಲ್ಲೇ ಅದರ ಹಾವಳಿ ಅತಿರೇಕಕ್ಕೆ ಹೋಗುತ್ತಿತ್ತು. ಮೈಲಿ ಸೋಂಕು ತಗುಲಿದರೆ ಒಂದೆರಡು ದಿನ ಜ್ವರ ಬಂದು ಆಮೇಲೆ ಮೈಕೈ ಮೇಲೆಲ್ಲ ಕಡಲೆ ಗಾತ್ರದ ಹುಣ್ಣಾಗಿ, ಕೀವಾಗಿ ಸೋರುತ್ತಿತ್ತು. ರೋಗ ತಗುಲಿದ ಎರಡು ವಾರಗಳಲ್ಲಿ ಪ್ರತಿ 10 ಜನರಲ್ಲಿ ಮೂವರು ಸಾಯುತ್ತಿದ್ದರು.
ಕಳೆದ 20ನೇ ಶತಮಾನವೊಂದರಲ್ಲೇ ಅಂದಾಜು 30 ಕೋಟಿ ಜನರು ಅದರಿಂದಾಗಿ ಸತ್ತಿದ್ದಾರೆ ಎಂಬುದು ದಾಖಲಾಗಿದೆ. ಬದುಕುಳಿದವರ ಮುಖದಲ್ಲಿ ಚುಕ್ಕಿಕಲೆಗಳು ಶಾಶ್ವತ ಉಳಿಯುತ್ತಿದ್ದವು. ಹಿಂದೀ ನಟ ದಿ. ಓಮ್ ಪುರಿಯನ್ನು ನೆನಪಿಸಿಕೊಳ್ಳಿ; ಮೂರು ಸಾವಿರ ವರ್ಷಗಳಷ್ಟು ಹಳೇ ಈಜಿಪ್ತಿನ ಮಮ್ಮಿಗಳ ಮುಖದಲ್ಲೂ ಅಂಥ ಕಲೆಗಳನ್ನು ಗುರುತಿಸಲಾಗಿದೆ. (ನನ್ನ ಮುಖದಲ್ಲೂ ಒಂದೆರಡು ಕಿರುಕುಳಿಗಳಿವೆ).
ಒಮ್ಮೆ ಸಿಡುಬು ತಗುಲಿದರೆ ಅದನ್ನು ವಾಸಿ ಮಾಡುವುದಕ್ಕೆ ಔಷಧ ಈಗಲೂ ಇಲ್ಲ. ದೇಹದೊಳಗಿನ ರೋ.ಶ. (ರೋಗನಿರೋಧಕ ಶಕ್ತಿ) ಎಷ್ಟೊ ಅಷ್ಟೆ. ಆದರೆ ರೋ.ಶ. ಹೆಚ್ಚುವಂತೆ ಮಾಡಬಲ್ಲ ತರಾವರಿ ನಾಟೀ ವಿಧಾನಗಳು ಅಲ್ಲಲ್ಲಿ ಬಳಕೆಯಲ್ಲಿದ್ದವು. ಸಿಡುಬಿನ ಬೊಬ್ಬೆಗಳ ಕೀವನ್ನು ಒಣಗಿಸಿ ಎಳೆಯರ ಮೂಗಿಗೆ ಹಚ್ಚುತ್ತಿದ್ದರು. ರೋಗ ವಾಸಿಯಾದವರ ಬಟ್ಟೆಯನ್ನು ಹಾಸಿ ಹೊದೆಯುತ್ತಿದ್ದರು. ಈಗಿನ ಪ್ಲಾಸ್ಮಾ ಥೆರಪಿಯ ಪೂರ್ವರೂಪ ಅದಾಗಿತ್ತು. ರೋಗ ಒಮ್ಮೆ ಸಣ್ಣ ಪ್ರಮಾಣದಲ್ಲಿ ಬಂದು ಹೋದರೆ ಮತ್ತೆಂದೂ ಬರುವುದಿಲ್ಲ ಎಂಬ ಪ್ರತೀತಿ ಇತ್ತು.
ನೆಪೋಲಿಯನ್ ಹಾಗೂ ಜಾರ್ಜ್ ವಾಷಿಂಗ್ಟನ್ ಕೂಡ ಇಂಥದ್ದೇ ವಿಧಾನಗಳ ಮೂಲಕ ತಮ್ಮ ಸೈನಿಕರ ರೋ.ಶ. ಹೆಚ್ಚುವಂತೆ ಮಾಡುತ್ತಿದ್ದರು.
ಯುರೋಪಿನ ದನಗಳಿಗೆ ಕೌ-ಪಾಕ್ಸ್ ಎಂಬ ಕಾಯಿಲೆ ಬರುತ್ತದೆ. ಅದು ಆಗಾಗ ಹಾಲು ಹಿಂಡುವವರಿಗೂ ಬಂದು ವಾಸಿಯಾಗಿದ್ದರೆ ಅಂಥವರಿಗೆ ಸಿಡುಬಿನ ರೋಗ ಬರುವುದಿಲ್ಲ ಎಂಬುದು ಬ್ರಿಟಿಷ್ ವೈದ್ಯ ಎಡ್ವರ್ಡ್ ಜೆನ್ನರ್ಗೆ ಗೊತ್ತಾಯಿತು. ಆತ 1796ರಲ್ಲಿ ಕೌ ಪಾಕ್ಸ್ ಕಾಯಿಲೆ ಬಂದಿದ್ದ ಹೆಂಗಸಿನ ಬೊಕ್ಕೆಯಿಂದ ತುಸು ಕೀವನ್ನು ತೆಗೆದು ಎಂಟು ವರ್ಷದ ಬಾಲಕನಿಗೆ ಚುಚ್ಚಿದ. ಕೆಲದಿನಗಳ ನಂತರ ಭಾರೀ ಧೈರ್ಯ ಮಾಡಿ ಅದೇ ಬಾಲಕನಿಗೆ ಸಿಡುಬಿನ ರೋಗಾಣು ವೇರಿಯೊಲಾವನ್ನು ಅನೇಕ ಬಾರಿ ಚುಚ್ಚಿದ. ಹುಡುಗನಿಗೆ ಸಿಡುಬು ಬರಲೇ ಇಲ್ಲ.
ಹಸುವಿನ ದೇಹದಿಂದ ಪಡೆದ ಈ ದ್ರವ್ಯಕ್ಕೆ ವ್ಯಾಕ್ಸೀನ್ ಎಂಬ ಹೆಸರು ಬಂತು. ವ್ಯಾಕ್ಸಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಹಸು.
ಜೆನ್ನರ್ ಸ್ವತಃ ಕೆಲವು ವ್ಯಾಕ್ಸೀನ್ ಶೀಶೆಗಳನ್ನು 1802ರಲ್ಲಿ ಮುಂಬೈಗೆ ಕಳುಹಿಸಿದ್ದ. ಆದರೆ ಮುಂದೆ 150 ವರ್ಷಗಳವರೆಗೂ ಮೈಲಿಮಹಾಮಾರಿಯ ಸುಂಟರಗಾಳಿ ಬೀಸುತ್ತಲೇ ಇತ್ತು. ಸ್ವಾತಂತ್ರ್ಯದ ನಂತರ ಕೂಡ 1951ರಲ್ಲಿ 105 ಸಾವಿರ, 1958ರಲ್ಲಿ 69 ಸಾವಿರ ಹಾಗೂ 1964ರಲ್ಲಿ 34 ಸಾವಿರ ಜನರು ಮೃತಪಟ್ಟರು. ನಾನು ಐದನೇ ಕ್ಲಾಸಿನಲ್ಲಿದ್ದಾಗ ತಿಂಗಳುಗಟ್ಟಲೆ ಶಾಲೆಗಳಿಗೆ ರಜೆ ಕೊಟ್ಟಿದ್ದರು. ನನ್ನ ಮುಂಗೈಗೂ ಮುಳ್ಳಿರುವ ಮೊಳೆಯನ್ನು ಮೆಲ್ಲಗೆ ಒತ್ತಿ ಗರಕ್ಕೆಂದು ತಿರುವಿ ಚುಚ್ಚು ಮದ್ದು ಹಾಕಿದ್ದರು.

ವಿಶ್ವ ಸ್ವಾಸ್ಥ್ಯ ಸಂಸ್ಥೆಯವರ (ವಿ.ಸ್ವಾ.ಸಂ) ಸಿಡುಬು ನಿರ್ಮೂಲನ ಅಭಿಯಾನ 1960ರಲ್ಲೇ ಇಂಡಿಯಾದಲ್ಲಿ ವ್ಯಾಪಕವಾಗಿ ಆರಂಭವಾಗಿತ್ತು. ಹದಿನೈದು ವರ್ಷಗಳಲ್ಲಿ ಬಹುತೇಕ ಎಲ್ಲರಿಗೂ ಚುಚ್ಚುಮದ್ದು ಹಾಕಲಾಗಿತ್ತು. “ಸಿಡುಬು ತಗಲಿದ ಒಬ್ಬ ರೋಗಿಯನ್ನು ತೋರಿಸಿ, ನಗದು ಬಹುಮಾನ ಗೆಲ್ಲಿ!” ಎಂಬ ಜಾಹೀರಾತು ಭಿತ್ತಿಪತ್ರಗಳು ಅಲ್ಲಲ್ಲಿ ಕಾಣುತ್ತಿದ್ದವು.
1975ರಲ್ಲಿ ಅದೇ ತಾನೇ ತುರ್ತು ಪರಿಸ್ಥಿತಿಯನ್ನು ತೆರವು ಮಾಡಿ, ಇಂದಿರಾ ಗಾಂಧಿ ಸರಕಾರ ಚುನಾವಣೆಯನ್ನು ಘೋಷಿಸಿತ್ತು. ಜಗಜೀವನ್ ರಾಮ್, ಮೋಹನ್ ಧಾರಿಯಾ, ಚಂದ್ರಶೇಖರ್ ಮುಂತಾದ ಘನನಾಯಕರೂ ಕಾಂಗ್ರೆಸ್ ಪಕ್ಷ ಬಿಟ್ಟು ಹೊಸ ಜನತಾ ಪಕ್ಷವನ್ನು ಸೇರಿದರು. ಅಂದಿನ ದಿನಗಳಲ್ಲಿ ಇದೇ ಸಿಡುಬಿನ ಜಾಹೀರಾತಿನ ಮಿಮಿಕ್ರಿ ಮಾಡಿ “ಕಾಂಗ್ರೆಸ್ಸಿನ ಒಬ್ಬ ಬೆಂಬಲಿಗನನ್ನು ತೋರಿಸಿ, ನಗದು ಬಹುಮಾನ ಗೆಲ್ಲಿ” ಎಂಬ ಭಿತ್ತಿಪತ್ರಗಳು ಅಲ್ಲಲ್ಲಿ ಕಾಣುತ್ತಿದ್ದವು.
1980ರ ಮೇ 8ರಂದು ಇಡೀ ಜಗತ್ತೇ “ಸಿಡುಬು ಮುಕ್ತ” ಎಂದು ವಿ.ಸ್ವಾ.ಸಂ. ಘೋಷಿಸಿತು. ಸಿಡುಬಿನ ವೈರಾಣು ಇರುವ ಎರಡು ಪುಟ್ಟ ಶೀಶೆಗಳನ್ನು ದ್ರವರೂಪಿ ಸಾರಜನಕದ ಡಬ್ಬಿಯಲ್ಲಿ ಭಾರೀ ಭದ್ರತೆಯಲ್ಲಿಟ್ಟು ಒಂದನ್ನು ಅಮರಿಕದ ಅಟ್ಲಾಂಟಾದಲ್ಲಿ ಹಾಗೂ ಇನ್ನೊಂದನ್ನು ರಷ್ಯದ ಸೈಬೀರಿಯಾದ ಒಂದು ಲ್ಯಾಬಿನಲ್ಲಿ ಇಟ್ಟಿತು. ಆಗೆಲ್ಲ ಸೋವಿಯತ್ ರಷ್ಯ ಮತ್ತು ಅಮೆರಿಕದ ನಡುವೆ ಶೀತಲ ಸಮರ ನಡೆಯುತ್ತಿತ್ತು. ಅವರಿಗೆ ಬೇಕಿದ್ದುದು ಇವರಿಗೂ ಬೇಕಿತ್ತು.
ಆ ಎರಡು ಸ್ಯಾಂಪಲ್ಗಳನ್ನು ಉಳಿಸಿಕೊಳ್ಳಬೇಕೆ, ನಾಶ ಮಾಡಬೇಕೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ವಿ.ಸ್ವಾಸಂ ಜಾಗತಿಕ ಸಮ್ಮೇಳನದಲ್ಲಿ ಜಟಾಪಟಿ ಆಗುತ್ತಿವೆ. ನಾಶ ಮಾಡಬೇಕು ಎನ್ನುವವರ ವಾದ ಏನೆಂದರೆ, ಅದನ್ನೊಂದು ಯುದ್ಧಾಸ್ತ್ರವಾಗಿ ರೂಪಿಸಲು ಯಾರಿಗಾದರೂ ಆಸೆ ಬರಬಹುದು. ಅವರ ಕೈಗೆ ಅದು ಸಿಗದಂತೆ ಮಾಡಲು ಬಾಂಬ್ ನಿರೋಧಕ ಭಾರೀ ಭದ್ರತಾ ವ್ಯವಸ್ಥೆ ಇದ್ದರೂ ಅದಕ್ಕೆಂದು ಅನಗತ್ಯವಾಗಿ ತುಂಬ ಹಣ ವೆಚ್ಚವಾಗುತ್ತಿದೆ. ಆ ಭದ್ರತೆಯನ್ನೇ ಒಂದು ಸವಾಲಿನಂತೆ ಪರಿಗಣಿಸಿ ಉಗ್ರರು ಅಥವಾ ಮಿಲಿಟರಿಯವರು ಅದನ್ನು ಎಂದಾದರೂ ಎಗರಿಸಬಹುದು. ಅದು ಇಲ್ಲದಂತೆ ಮಾಡುವುದೇ ಲೇಸು.
ಅದನ್ನು ಉಳಿಸಿಕೊಳ್ಳಬೇಕು ಎನ್ನುವವರ ವಾದ ಏನೆಂದರೆ, ಅಕಸ್ಮಾತ್ ಸಿಡುಬು ಮತ್ತೆಲ್ಲಾದರೂ ಕಾಣಿಸಿಕೊಂಡರೆ ಅದಕ್ಕೆ ತುರ್ತಾಗಿ ವ್ಯಾಕ್ಸೀನ್ ತಯಾರಿಸಲು ವೇರಿಯೊಲಾ ವೈರಾಣುವಿನ ಒಂದು ಮೂಲ ಸ್ಯಾಂಪಲ್ ಬೇಕಾಗುತ್ತದೆ. ಇನ್ನೊಂದು ಕಾರಣ ಏನೆಂದರೆ ಈ ವಿಚಿತ್ರ ವೈರಾಣು ಜೀವಲೋಕದ ಒಂದು ಅದ್ಭುತ. ಪರಮಾಣು ಬಾಂಬಿಗಿಂತ ಭಿನ್ನವಾದ ವಿರಾಟ್ ತಾಕತ್ತನ್ನು ತನ್ನ ಜೀವಾಣು ನಕ್ಷೆಯಲ್ಲಿ ಬಚ್ಚಿಟ್ಟುಕೊಂಡಿದೆ. ಅದನ್ನೇ ಮನುಕುಲಕ್ಕೆ ವರದಾನವಾಗಿ ಪರಿವರ್ತಿಸಲು ಇಂದಲ್ಲ ನಾಳೆ ಸಾಧ್ಯವಾದರೂ ಆದೀತು. ಅದಕ್ಕಿಂತ ಮುಖ್ಯವಾಗಿ ನೈತಿಕ ಕಾರಣವೂ ಇದೆ: ಮನುಷ್ಯ ಇದುವರೆಗೆ ತಾನಾಗಿ ಯಾವ ಜೀವವನ್ನೂ ಸಮೂಲಾಗ್ರವಾಗಿ ಕೈಯಾರೆ ಹೊಸಕಿ ಹಾಕಿಲ್ಲ. ಸದ್ಯಕ್ಕಂತೂ ಕ್ವಾರಂಟೈನ್ ಸ್ಥಿತಿಯಲ್ಲಿ, ಮನುಷ್ಯನ ನಿಯಂತ್ರಣದಲ್ಲಿ ತೀರ ಅಸಹಾಯಕ ಸ್ಥಿತಿಯಲ್ಲಿರುವ ನಿಷ್ಪಾಪಿ ಅದು. ಹೊಸಕಿ ಹಾಕಬೇಕೇಕೆ ಅದನ್ನು? -nagesh hegde
