

arun naik <arun.naik333@gmail.com> | 8:38 AM (9 hours ago) |
ಸೊರಬಾ ತಾಲ್ಲೂಕು ಚಂದ್ರಗುತ್ತಿ ಹೋಬಳಿಯ ಭದ್ರಾಪುರ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಒಂದು ದೈವ ಸನ್ನಿಧಿ. ಹಾಲು ಮರದ ಅಡಿಯಲ್ಲಿ ಒಂದು ದೊಡ್ಡದಾದ ಕಲ್ಲಿನ ಶಕ್ತಿ ಅಪಾರ. ಅನೇಕ ಆಧುನಿಕತೆ ಹಾಗೂ ತಂತ್ರಜ್ಞಾನದ ನಡುವೆಯು ನಾವೊಮ್ಮೆ ದೇವರ ಮೊರೆ ಹೋಗುತ್ತೇವೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ರೈತ ಸಮುದಾಯದ ವ್ಯವಸ್ಥೆಯಲ್ಲಿ ಒಂದು ನಂಬಿಕೆಯ ಆಚರಣೆ ಸಂಪ್ರಧಾಯ ಒಂದಷ್ಟು ಭಯ ಭಕ್ತಿ ಹೆಚ್ಚಿಸಿದ್ದಂತೂ ಸುಳ್ಳಲ್ಲ.
ಹೌದು ಇಲ್ಲಿ ಚಂದ್ರಗುತ್ತಿಯಿಂದ ಬನವಾಸಿ ಹೋಗುವ ಬೆನ್ನೂರು ಕಮರೂರು ಹೋಗುವ ಮಾರ್ಗದಲ್ಲಿ ಒಂದು ಶಕ್ತಿ ಸ್ಥಳವಿದೆ. ಖುದ್ದು ನಾವೇ ಭೇಟಿ ಕೊಟ್ಟಾಗ ಇಲ್ಲಿ ತಮ್ಮ ಸಂಕಲ್ಪದ ಈಡೇರಿಕೆಯ ಫಲವಾಗಿ ಪೂಜೆ ಪುನಸ್ಕಾರ ಮಾಡಿಸುವವರು ಅಪಾರ. ಕೋಳಿ ಕುರಿ ಬಲಿ ಇಲ್ಲಿಯ ವಿಶೇಷ ಶಕ್ತಿಯ ಪ್ರತೀಕ ಎನ್ನುತ್ತಾರೆ ಪೂಜಾರಿ ಪುಟ್ಟಪ್ಪ
ಒಕ್ಕಲಿಗ ಸಮುದಾಯದ ಒಂದು ಕುಟುಂಬ ತಲೆತಲಾಂತರದ ಪೂಜೆ ನಡೆಸಿಕೊಂಡು ಬಂದಿದೆ. ಹೀಗೆ ನಾವು ಕೇಳಿದ ಕುತೂಹಲಕಾರಿ ಪ್ರಶ್ನೆಗೆ ಅವರು ಹಲವಾರು ಮಾಹಿತಿ ನೀಡಿದರು. ರೈತಾಪಿ ವರ್ಗ ಹಾಗೂ ಹೆಚ್ಚಾಗಿ ಹೈನುಗಾರಿಕೆ ಇರುವ ಕೆಲ ದಶಕಗಳ ಹಿಂದೆ ಹಸು ಎತ್ತುಗಳ ಕಳ್ಳತನ ನಡೆಯುತ್ತಿದ್ದವು. ಆಗ ರೈತರು ತಮ್ಮ ದನಕರು ಸಿಗಲೆಂದು ಕಳೆದ ದನವಿನ ಹಗ್ಗ ದಾಬ ತಂದು ,ದೇವರ ಕಲ್ಲಿನ ಎದುರು ಮರಕ್ಕೆ ಕಟ್ಟಿ ಸಂಕಲ್ಪ ಮಾಡಿಕೊಂಡರೆ ಕೆಲ ಗಂಟೆಯ ಒಳಗೆ ದನ ಮರಳಿ ಮನೆ ಸೇರುತ್ತಿದ್ದವಂತೆ
ಇನ್ನೊಂದೇನೆಂದರೆ ಇನ್ನು ಪೇಟೆ ಪಟ್ಟಣದ ಮಹಿಳೆಯರು ತಮ್ಮ ಒಡವೆ, ದುಡ್ಡು ಕಾಸು ಕಳೆದುಕೊಂಡು ದೇವರಿಗೆ ಮೊರೆ ಹೋಗುತ್ತಿದ್ದರು. ಹರಕೆ ಇಲ್ಲಿಯ ವಿಶೇಷ.ಇನ್ನೂ ಇದೇ ಶಕ್ತಿ ಇಲ್ಲಿ ಮುಂದುವರಿಯುತ್ತಿದೆ ಎನ್ನುತ್ತಾರೆ ಪೂಜಾರಿ ಪುಟ್ಟಪ್ಪ.
ಪ್ರಾಣಿ ಪಕ್ಷಿ ಬಲಿಯ ನಂತರ ಅದರ ಕತ್ತು ಅಲ್ಲೇ ಇಟ್ಟು ಹೋಗುವ ಪ್ರತೀತಿ ಇದ್ದು, ಕಳವು ಮಾಡಿದವರು ತಾವೇ ಸ್ವ ಪರಿವರ್ತನೆ ಆಗುವದಂತೂ ಸುಳ್ಳಲ್ಲ ಎನ್ನುತ್ತಾರೆ ಸ್ಥಳೀಯರು.
ಇಲ್ಲಿ ಸಾವಿರಾರು ಘಂಟೆವಳಿವೆ. ಸಾವಿರಾರು ದನ ಕಟ್ಟುವ ಹಗ್ಗಗಳು ಇರುವದನ್ನು ನೋಡಿದರೆ ಇಲ್ಲಿಯ ಶಕ್ತಿ ಹಾಗೂ ಬಡ ರೈತವರ್ಗದ ನಂಬಿಕೆ ವ್ಯಕ್ತವಾಗುತ್ತದೆ.ವಾಹನ ಸೌಕರ್ಯವಿಲ್ಲದ ಆ ಕಾಲದಲ್ಲಿ ಬಡತನದ ಜೊತೆ ಇಂತಹ ನಂಬಿಕೆಗಳಿಗೆ ,ಆಚರಣೆಗಳಿಗೆ ಶ್ರೀಮಂತಿಕೆ ಇತ್ತು ಎನ್ನಬಹುದು.
ಇನ್ನು ಇಲ್ಲಿನ ದೇವರ ಕಟ್ಟೆಯ ಎದುರು ಹಾದು ಹೋದ ಡಾಂಬರು ರಸ್ತೆ ,ಮುಂದೆ ಗದ್ದೆ ಬಯಲು, ಹಕ್ಕಿಗಳ ಕಲರವ ಸಾಕ್ಷಾತ್ ಗ್ರಾಮೀಣ ಸೊಗಸಿಗೆ ಒಪ್ಪಿ ಉಳಿಯುವಂತಿದೆ. ಇನ್ನು ಇಲ್ಲಿ ನಾಗರ ಹಾವುಗಳು ಸದ್ರಶ್ಯವಾಗಿ ಕಾಣುತ್ತಿರುತ್ತವೆ. ಇಲ್ಲೇ ಎದುರು ಭೂತರಾಜನಿದ್ದು ಮರಕ್ಕೆ ಬೊಟ್ಟು ಮಾಡಿ ಅಸಂಖ್ಯಾತ ಜೇನುಗಳನ್ನು ತೋರಿಸುವಾಗ ಮೈ ಝಲ್ ಎನ್ನುತ್ತದೆ.
ದೇವರ ಎದುರು ಹಾದು ಹೋಗುವ ಚಂದ್ರಗುತ್ತಿ-ಬನವಾಸಿ ರಸ್ತೆಯನ್ನು ಮಾಡುವ ಇತ್ತೀಚಿಗಿನ ಕಾಲದಲ್ಲೇ ಇಲಾಖೆ ಅಡ್ಡಲಾಗಿ ಬಂದ ಮರ ಕಡಿಯಲು ಮುಂದಾದಾಗ ಸ್ವತಃ ನಾಗರ ಪ್ರತ್ಯಕ್ಷವಾಗಿದ್ದನ್ನು ಪೂಜಾರಿ ಪುಟ್ಟಪ್ಪ ವಿವರಿಸಿದರು.
ಗ್ರಾಮೀಣ ಭಾಗದಿಂದ ನೆಲೆಸಿದ ವಿದೇಶಿಗರು, ಮಕ್ಕಳಿಲ್ಲದವರು, ಹೀಗೆ ಹತ್ತು ಹಲವು ವಿಶೇಷವಾಗಿ ಕಳುವು ಇಲ್ಲಿಯ ಮಹತ್ವ ಎಂದು ವಿವರಿಸಿದರು. ಮಿಂಚಿನಂತೆ ಹೋದ ಹೋರಿ ಹಬ್ಬದ ಹೋರಿಗಳು ಇಲ್ಲಿಯ ಕೃಪಾ ಕಟಾಕ್ಷದಿಂದ ಸಿಕ್ಕಿವೆ ಎನ್ನುತ್ತಾರೆ ಅನೇಕ ರೈತರು .ಏನೇ ಆದರೂ ಮುಂದುವರಿದ ಯುಗದಲ್ಲೂ ಇಂತಹ ಅಚ್ಚರಿಗಳು,ಶಕ್ತಿಗಳು, ಸಾಮಾಜಿಕ ಸ್ವಾಸ್ತ್ಯದ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಿರುವದಂತೂ ಸುಳ್ಳಲ್ಲ.
ಇಂತಹ ಅನೇಕ ಧಾರ್ಮಿಕ ಶಕ್ತಿಗಳಿಗೆ ಮೂಢ ನಂಬಿಕೆಯ ತುಪ್ಪ ಸವರದೆ ಪರಿಮಿತ ಪ್ರಮಾಣದಲ್ಲಿ ಜೀರ್ಣೋದ್ಧಾರ ಹಾಗೂ ಮುಖ್ಯವಾಹಿನಿಗೆ ತರುವದು ಅವಶ್ಯಕವಾಗಿದೆ ಅಲ್ಲವೇ. ರೈತ ವರ್ಗದ ಹಿತಾಸಕ್ತಿಯಿಂದ ಈ ಕಿರು ಲೇಖನ. -ಅರುಣ್ ಕೊಪ್ಪ (ಈ ಲೇಖನದ ಅಭಿಪ್ರಾಯ,ಅನುಭವ,ನಂಬಿಕೆ ಲೇಖಕರಿಗೆ ಸಂಬಂಧಿಸಿದ್ದು-ಸಂ)

