
ರಾಜ್ಯದ ವಿವಿಧೆಡೆ ವರುಣ ಕೃಪೆ ತೋರಿದ್ದು, ಬಿರುಗಾಳಿ ಸಮೇತ ಭಾರೀ ಮಳೆ ಆಗಿದೆ.

ಬೆಂಗಳೂರು: ರಾಜ್ಯದ ವಿವಿಧೆಡೆ ವರುಣ ಕೃಪೆ ತೋರಿದ್ದು, ಬಿರುಗಾಳಿ ಸಮೇತ ಭಾರೀ ಮಳೆ ಆಗಿದೆ.
ನಿನ್ನೆ ರಾತ್ರಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆಯರಿಬ್ಬರೂ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಸಿಡಿಲು ಬಡಿದು 37 ವರ್ಷದ ಶೋಭಾ ಚಂದ್ರಕಾಂತ ಗೌಡ ಎಂಬುವವರು ಮೃತಪಟ್ಟಿದ್ದು, ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇನ್ನು, ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲು ತೆರಳಿದಾಗ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸನಿಡನೇಗಿಲುವಿನ ರೈತ ಮಹಿಳೆ ಮಲ್ಲವ್ವ ನಾಯ್ಕರ (55) ಸಿಡಿಲಿಗೆ ಬಲಿಯಾಗಿದ್ದಾರೆ.
ಅಲ್ಲದೇ, ಹಿರೇಕೆರೂರು ಪಟ್ಟಣದಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಗಾಳಿ, ಮಳೆಗೆ ಜಿಲ್ಲೆಯ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಗಾವಿ, ಧಾರವಾಡ ಮತ್ತು ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದೆ. ಅಲ್ಲದೇ, ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲೂ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಬಿಸಿಲಿಗೆ ಬಸವಳಿದಿದ್ದ ಜನತೆಗೆ ವರುಣ ತಂಪಾಗಿಸಿದ್ದಾನೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಜಿಲ್ಲಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
