

ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
ಉತ್ತರ ಕನ್ನಡದ ಶಿರಸಿಯ ಸೋಂದಾ ಬಳಿ ಇರುವ ಮುಂಡಿಗೆಕೆರೆ ಸಣ್ಣ ಸರೋವರವಾಗಿದ್ದು, ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ಸ್ಥಳೀಯ ಪಂಚಾಯತ್ ನಲ್ಲಿ 3 ತಿಂಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಈಗಾಗಲೇ ಈ ಪ್ರದೇಶವನ್ನು ಪಕ್ಷಿಧಾಮ ಎಂದು ಗುರುತಿಸಲಾಗಿದ್ದು, ಇದೇ ಸರಣಿಯಲ್ಲಿ ಇನ್ನೂ 10 ಸರೋವರಗಳನ್ನು ರಕ್ಷಿಸಲು ಮಂಡಳಿ ನಿರ್ಧರಿಸಿದೆ.
ಜೀವವೈವಿಧ್ಯ ಮಂಡಳಿಯ ಸದಸ್ಯರು ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ, ರಾಮನಗರ, ಚಿಕ್ಕಮಗಳೂರಿನ ಗುಡ್ಡಗಳನ್ನು ಪಾರಂಪರಿಕ ತಾಣಗಳಿಗೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ.
ಬೋರ್ಡ್ ನ ಅಧ್ಯಕ್ಷ ಅನಂತ್ ಹೆಗ್ಡೆ ಈ ಬಗ್ಗೆ ಮಾತನಾಡಿದ್ದು, ಈ ಎಲ್ಲಾ ಪ್ರದೇಶಗಳನ್ನು ಪಾರಂಪರಿಕ ಸ್ಥಳಗಳನ್ನಾಗಿ ಘೋಷಿಸುವವರೆಗೂ ಸ್ಥಳೀಯ ಆಡಳಿತಕ್ಕೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದ ಅಂಬರಗುಡ್ಡ, ಬೆಂಗಳೂರಿನ ಗಾಂಧಿ ಜಿಕೆವಿಕೆ, ದೇವನಹಳ್ಳಿಯ ನಲ್ಲೂರು ಹುಣಸೆ ತೋಪು, ಚಿಕ್ಕಮಗಳೂರಿನ ಹೊಗ್ರೆಕನ್ ಗಳನ್ನು ಈಗಾಗಲೇ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡಲಾಗಿದೆ.

