

ಪುಟ್ಟ ಯಜಮಾನ ಸೇರಿದಂತೆ ಕೆಲವು ಕಾದಂಬರಿಗಳು, ಕಥಾಸಂಕಲನಗಳು ಸೇರಿ ಒಟ್ಟೂ ಮೂರು ಡಜನ್ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಗಣೇಶ್ ನಾಡೋರ ಮಕ್ಕಳ ಸಾಹಿತಿ,ಪತ್ರಕರ್ತರಾಗಿ ಪ್ರಸಿದ್ಧರು. ಅವರ ಇತ್ತೀಚಿನ ಪುಟ್ಟ ಯಜಮಾನಕ್ಕೆ ಸಿಕ್ಕಿರುವ ಪ್ರತಿಕ್ರೀಯೆಗಳು ಆ ಕಾದಂಬರಿಯನ್ನು ಪರಿಚಯಿಸುವಂತಿವೆ.




ಕನ್ನಡದ ರಸ್ಕಿನ್ ಬಾಂಡ್!
ಈ ಕಾಲದ ಮಕ್ಕಳು ಸೂಕ್ಷ್ಮ ಮತಿಗಳು. ಕುಟುಂಬ, ಸಮಾಜದ ವಿದ್ಯಮಾನಗಳನ್ನು ಗ್ರಹಿಸಬಲ್ಲವರು. ದೊಡ್ಡವರ ಸಾಕಷ್ಟು ತಪ್ಪುಗಳನ್ನು ಚರ್ಚಿಸಬಲ್ಲರು. ಅವರಲ್ಲಿ ಸಾಮಾಜಿಕ ಅರಿವು ಹೆಚ್ಚಾಗಿಯೇ ಮೂಡುತ್ತಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ದಾಪುಗಾಲಿನ ವೇಗದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ಇಂದಿನ ಮೊಬೈಲ್ ಬಳಕೆ ಸಾಮಾಜಿಕ ಜಾಲತಾಣಗಳ ಪ್ರಭಾವ, ಕಂಪ್ಯೂಟರ್, ಸಿನೇಮಾ, ವಿವಿಧ ಚಾನೆಲ್ ಗಳಲ್ಲಿ ಬರುವ ಧಾರವಾಹಿಗಳು ಕಾರಣವಾಗಿವೆ ಹೀಗಾಗಿ ಮಕ್ಕಳು ಗುಂಪಿನಲ್ಲಿ ಏನೆಲ್ಲವನ್ನೂ ಚರ್ಚಿಸುತ್ತಾರೆ. ಇವೆಲ್ಲಾ ಏಕೆ ಬರೆದೆ ಎಂದರೆ ಇಂಥೆಲ್ಲಾ ಮನೋವಿಚಾರ ಇಟ್ಟುಕೊಂಡೇ ಗಣೇಶ ನಾಡೋರ ‘ನೆಗೆತ’, ‘ಕರಿಮುಖ’,’ಆಟ” ಪೂರ್ವಿ’, ‘ಸಾಯಿಲಕ್ಷೀ ಮನೆಗೆ ಸಾಂತಾಕ್ಲಾಸ ಬಂದ!’, ಹೀಗೆ ಸಾಲು ಸಾಲು ಕಾದಂಬರಿಗಳನ್ನು ನೀಡುತ್ತಾ ಬಂದಿದ್ದಾರೆ. ಮತ್ತೆ ಇದೀಗ ಓದುಗರ ಕೈಯಲ್ಲಿ “ಪುಟ್ಡಯಜಮಾನ” ಎಂಬ ಮತ್ತೊಂದು ಕಾದಂಬರಿ ನೀಡಿದ್ದಾರೆ.
ಇಂಗ್ಲೀಷ ಕಾದಂಬರಿಕಾರ ರಸ್ಕಿನ್ ಬಾಂಡ್ ಅವರಂತೆ ವಾಸ್ತವ ಅಂಶಗಳನ್ನೆ ಮುಂದಿಟ್ಟುಕೊಂಡು ನಾಡೋರ ಅವರು ಕಾದಂಬರಿ ರಚಿಸಿದ್ದಾರೆ. ಕಾದಂಬರಿಯ ಶೀರ್ಷಿಕೆಯಂತೆ ಕುಡಿತದ ದಾಸನಾದ ತಂದೆಯ ಅನಾರೋಗ್ಯದಿಂದಾಗಿ ಗಣಪ ಶಾಲೆ ಬಿಟ್ಟು ಬಾಲಕಾರ್ಮಿಕನಾಗಿ ಮನೆಗೆ ಆಸರೆಯಾಗಬೇಕಾದ ಅನಿವಾರ್ಯತೆ ಬಂದೊದಗುವುದರಿಂದ ಪುಟ್ಟಯಜಮಾನನಾಗಿ ಮೆರೆಯಬೇಕಾಗುತ್ತದೆ. ಇದೊಂದು ಓದುವ ಹಸಿವಿರುವ ಗಣಪನ ದೌರ್ಭಾಗ್ಯವೂ ಹೌದು. ತಾಯಿಯ ಕಠೋರ ನಡುವಳಿಕೆಗಳು, ಸಂಬಂಧಿ ಮಕ್ಕಳೊಂದಿಗಿನ ತಾರತಮ್ಯ, ಅಪ್ಪನ ಅನೈತಿಕ ಸಂಬಂಧಗಳು ಇಲ್ಲಿ ಚಿತ್ರಿತವಾಗಿವೆ. ಕೌಟಂಬಿಕ ವಿಪತ್ತಿನಲ್ಲಿ ಗಣಪನ ತೊಳಲಾಡುವಿಕೆ ಆತನ ಬದುಕಿನ ದಾರುಣ್ಯದ ಚಿತ್ರಣ ಇಲ್ಲಿ ಅನಾವರಣವಾಗಿದೆ. ಇಲ್ಲಿ ಬರಹಗಾರ ಕಥೆ ಸುಖಾಂತವಾಗಿರಬೇಕೆಂಬ ಕಟ್ಟುಪಾಡಿಗೆ ಬೀಳದೆ, ಬದುಕಿನಲ್ಲಿ ಎನೆಲ್ಲಾ ದುರಂತಗಳನ್ನು ಸಹಿಸಬೇಕಾಗುತ್ತದೆ, ಇದು ಅನಿವಾರ್ಯ ಎನ್ನುವ ಅಂಶವನ್ನು ಪ್ರತಿಪಾದಿಸುತ್ತಾರೆ.
ಈ ನಿಟ್ಟಿನಲ್ಲಿ ಗಣೇಶ ನಾಡೋರವರ ಕಾದಂಬರಿಯ ಅಂಶಗಳು ಮಕ್ಕಳಲ್ಲಿ ಗಟ್ಟಿತನ ಮೂಡಿಸುವುದಲ್ಲದೆ. ಬರುವ ,ಕಾಡುವ ಬದುಕಿನ ಕ್ಲಿಷ್ಟತೆಗಳನ್ನು ಎದುರಿಸುವ ಎದೆಗಾರಿಕೆ ಮೂಡಿಸುತ್ತವೆ. ಹೀಗಾಗಿ “ಪುಟ್ಟ ಯಜಮಾನ” ಇತರೆಲ್ಲಾ ಮಕ್ಕಳ ಕಾದಂಬರಿಗಳಂತಿರದೆ ವಿಭಿನ್ನ ಅನುಭವ ಒದಗಿಸುತ್ತದೆ. ಅತ್ಯಂತ ಅಚ್ಚುಕಟ್ಟಾದ ಮುದ್ರಣ, ಮಖಪುಟ, ಕಾದಂಬರಿಯ ಒಳಪುಟಗಳಲ್ಲಿನ ಚಿತ್ರಗಳು ಪುಸ್ತಕದ ಸೌಂದರ್ಯ ಹೆಚ್ಚಿಸಿವೆ. ಬದುಕಿನ ಸಹಜ ಘಟನೆಗಳನ್ನೇ ಕಾದಂಬರಿಯ ವಿಷಯವಸ್ತುಗಳಾಗಿಸುವ ಕಲೆ ಸಹಜವಾಗಿ ಗಣೇಶ ನಾಡೋರ ಅವರಿಗೆ ಒಲಿದು ಬಂದಿದೆ. ಹೀಗಾಗಿ ಅವರನ್ನು “ಕನ್ನಡದ ರಸ್ಕಿನ್ ಬಾಂಡ್” ಎಂದೇ ಕರೆಯಬಹುದು. ಇನ್ನಷ್ಟು ವಿಭಿನ್ನ ವಿಷಯವಸ್ತು ಒಳಗೊಂಡ ಹೊಸ ಕಾದಂಬರಿಗಳು ಅವರ ಲೇಖನಿಯಿಂದ ಬರಲಿ ಎನ್ನುವ ಕಾತರ ಓದುಗರದ್ದಾಗಿದೆ
– ವೈ. ಜಿ. ಭಗವತಿ, ಕಲಘಟಗಿ
ಆಪ್ತನಾಗುವ ‘ಪುಟ್ಟ ಯಜಮಾನ’–
ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳು ಬರುವುದು ಕಡಿಮೆಯಾಗಿದೆ. ಮಕ್ಕಳ ವಾರ ಪತ್ರಿಕೆ, ಮಾಸ ಪತ್ರಿಕೆಗಳೂ ಹೆಚ್ಚು ಕಾಣುತ್ತಿಲ್ಲ. ಒಂದು ವೇಳೆಯಿದ್ದರೂ ಅವು ಮಕ್ಕಳಿಗೆ ತಲುಪುತ್ತಿರುವ ಬಗ್ಗೆ ಖಾತ್ರಿಯಿಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯು ಮಕ್ಕಳ ಸಾಹಿತಿ ಗಣೇಶ ಪಿ. ನಾಡೋರ ಅವರು ಹೊರತಂದಿರುವ ‘ಪುಟ್ಟ ಯಜಮಾನ’ ಮಕ್ಕಳ ಕಾದಂಬರಿಯು ಮಕ್ಕಳ ಸಾಹಿತ್ಯದ ಕುರಿತು ಕೊಂಚ ಆಶಾಭಾವ ಮೂಡಿಸಿದೆ.
ಲಡಾಯಿ ಪ್ರಕಾಶನ ಹೊರ ತಂದಿರುವ ಈ ಕಾದಂಬರಿಯು ಮಕ್ಕಳ ಮನಸ್ಥಿತಿಯನ್ನು ಅತ್ಯಂತ ಸಹಜ ಮತ್ತು ನೇರವಾಗಿ ಪ್ರಸ್ತುತಡಿಸಿದೆ. ಬಡತನ, ಕೌಟಂಬಿಕ ಸಮಸ್ಯೆ, ಓದುವ ಹಂಬಲ, ದುಡಿಯಲೇಬೇಕಾದ ಅನಿವಾರ್ಯತೆ ಎಲ್ಲವನ್ನೂ ಹಂತಹಂತವಾಗಿ ಅನಾವರಣಗೊಳಿಸಿರುವ ‘ಪುಟ್ಟ ಯಜಮಾನ’ ಕೃತಿಯು ಬದಲಾಗದ ಸಾಮಾಜಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ಮನಸ್ಸು, ಅವರೊಳಗಿನ ಮುಗ್ಧತೆ, ಧೈರ್ಯ ತೆರೆದಿಟ್ಟಿದೆ.
ಉತ್ತಮ ರೀತಿಯಲ್ಲಿ ಓದಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ಮಕ್ಕಳು ದುಡಿಮೆಯಂತಹ ಸುಳಿಗೆ ಸಿಲುಕುವ ಮುನ್ನ ಯಾವುದೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ತುಂಟಾಟ ಮತ್ತು ಕನಸುಗಳನ್ನು ಬದಿಗಿಟ್ಟು ಹೇಗೆ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂಬುದು ಸರಳ ನಿರೂಪಣೆಯಲ್ಲಿ ಮೂಡಿ ಬಂದಿದೆ. ತಾಯಿಯ ಮಮತೆ, ತಂದೆಯ ಒತ್ತಾಯ, ಸಹೋದರರ ಪ್ರೀತಿ, ಸ್ನೇಹಿತನ ಸಹಕಾರ, ದುಡಿಸಿಕೊಳ್ಳುವವನ ದುರಾಸೆ ಎಲ್ಲವೂ ಇಲ್ಲಿದೆ.
ಗಂಭೀರವಾದ ವಿಷಯವನ್ನು ಗಣೇಶ ಪಿ.ನಾಡೋರ ಅವರು ಮಕ್ಕಳ ಮತ್ತು ಪೋಷಕರ ಮನ ಮುಟ್ಟುವಂತೆ ಬರೆದಿದ್ದಾರೆ. ಕೆಲ ಕಡೆ ತಮಾಷೆ, ಇನ್ನೂ ಕೆಲ ಕಡೆ ಭಾವನಾತ್ಮಕ ಸ್ಪರ್ಶ, ಕಚಗುಳಿಯಿಡುವ ಭಾಷೆ ಎಲ್ಲವೂ ಮುದ ನೀಡುತ್ತದೆ. -ರಾಹುಲ್ ಬೆಳಗಲಿ ಪತ್ರಕರ್ತರು ಕಲಬುರ್ಗಿ
ಪುಟ್ಟ ಯಜಮಾನ’ನನ್ನು ಶಾಲೆಗೆ ಸೇರಿಸಿ!
“ಹೇಳಿ ಕೇಳಿ ಆತ ಪುಟ್ಟ ಯಜಮಾನ. ಕಾಡು ಹೊಕ್ಕು ಬಿಳೆ ಮುಳ್ಳೆ ಹಣ್ಣು, ನೇರಳೆ ಹಣ್ಣು, ಗುಡ್ಡಗೇರ ಹಣ್ಣು ಎಲ್ಲ ತಂದು ಬಿಡುತ್ತಾನೆ, ನಾವೂ ಚಿಕ್ಕವರಿದ್ದಾಗ ಕಾಲಿಗೆ ಚುಚ್ಚುವ ಮುಳ್ಳನ್ನೂ ಲೆಕ್ಕಿಸದೆ ಬೆಟ್ಟ ಅಲೆಯುವಂತೆ. ಜೀಪಕಾತ್ರಿ ಹಣ್ಣು ತಿಂದು ನಮ್ಮ ಬಾಯಲ್ಲೂ ಚಿಳ್ಳನೆ ನೀರು ಚಿಮ್ಮಿಸಿ ಬಿಡುತ್ತಾನೆ. ಕುತ್ತಿಗೆ ಹತ್ತಿರ ಸ್ವಲ್ಪ ಚರ್ಮ ಕೊಯ್ದು ಕೈ ಮುಷ್ಟಿಯಲ್ಲಿ ಚರ್ಮ ಹಿಡಿದೆಳೆದು ಸುಲಿದು ಅಡ್ಡ ಮಣೆಯ ಮೇಲಿಟ್ಟು ಸಣ್ಣ ಸಣ್ಣ ತುಂಡಾಗಿ ಹೆಚ್ಚಿ ಕಲಿಜವನ್ನು ಕೈಯಲ್ಲಿ ಹಿಡಿದು ‘ಇದು ಭಾಳ ರುಚಿ ಇರ್ತದಲ್ಲ’ ಎಂದು ಕೋಳಿ ಪ್ರಿಯರ ಹೊಟ್ಟೆ ಉರಿಸುತ್ತಾನೆ. ತಪ್ಪಲೆಯಲ್ಲಿದ್ದ ಬಿಳಿ ಬಿಳಿ ಗಟ್ಟಿ ಗಿಣ್ಣವನ್ನು ಚಾಕುವಿನಿಂದ ಕತ್ತರಿಸಿ ಬಾಯಲ್ಲಿಟ್ಟು ಎಲ್ಲರಲ್ಲೂ ಚಪ್ನೀರು ಹರಿಸುತ್ತಾನೆ.
ಎಲ್ಲ ಮುಗಿದ ಮೇಲೂ ಅಮ್ಮ ಸುಮ್ಮನಿರಬಾರದೆ? ಎಂದು ಮನದಲ್ಲೇ ಅಪ್ಪನ ಪರ ವಾಲಿದರೂ ಅಪ್ಪ ಅಮ್ಮನ ಮೇಲೆ ಕೈ ಎತ್ತಿದರೆ ಆತ ಖಂಡಿತ ಸಹಿಸಲಾರ. ಕಷ್ಟದ ಬದುಕಿದೆ, ಸಾಮಾಜಿಕ ತಾರತಮ್ಯದ ಬೇಗೆ ಇದೆ, ಅಕ್ಷರದ ಹಂಬಲವಿದೆ, ‘ಮನೆಯ ಕೂಳಿಗಾಗಿ ಶಾಲೆ ಬಿಡುವ ಪರಿಸ್ಥಿತಿ ಮತ್ಯಾವ ಮಕ್ಕಳಿಗೂ ಬಾರದಿರಲಿ’ ಎಂಬ ಸನ್ಮನಸ್ಸಿದೆ. ನೀವೆಲ್ಲ ಸೇರಿ ಹೇಗಾದರೂ ಮಾಡಿ ಈ ಪುಟ್ಟ ಯಜಮಾನನನ್ನು ಶಾಲೆಗೆ ಸೇರಿಸಿಬಿಡಿ. ಮುಂದೊಂದು ದಿನ ಆತ ಖಂಡಿತ ದೊಡ್ಡ ಯಜಮಾನನೇ ಆಗುತ್ತಾನೆ. ಓದುವ ನನ್ನನ್ನೂ ಪುಟ್ಟ ಯಜಮಾನಿಯಾಗಿಸಿದ ಗಣೇಶ್ ನಾಡೋರರಿಗೆ ಧನ್ಯವಾದಗಳು”
– ಮಾಧವಿ ಭಂಡಾರಿ
