ಅದೆಷ್ಟೋ ಹಳ್ಳಿ ಯುವಕ, ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಜೀವನದಲ್ಲಿ ಹಲವಾರು ಕನಸುಗಳು ಹಾಗೂ ಮನೆಯ ಜವಾಬ್ದಾರಿಗಳನ್ನು ಹೊತ್ತು ಕೆಲಸವನ್ನು ಅರಸಿ ಬೆಂಗಳೂರಿನತ್ತ ಮುಖ ಮಾಡಿದ್ದರು. ತಮ್ಮ ತಮ್ಮ ಕೌಶಲ್ಯಗಳಿಗನುಸಾರವಾಗಿ ಕೆಲಸವನ್ನು ಪಡೆದುಕೊಂಡಿದ್ದರು. ಕಷ್ಟಪಟ್ಟು ರಾತ್ರಿ ಹಗಲು ದುಡಿದು ಸಂಬಳವನ್ನು ತಿಂಗಳ ಕೊನೆಯಲ್ಲಿ ಕಾದು ಅದನ್ನು ಪಡೆದು ಮನೆಯ ಖರ್ಚುಗಳನ್ನು ಹಾಗೂ ತಮ್ಮ ಖರ್ಚುಗಳನ್ನು ನಿಭಾಯಿಸುತ್ತಿದ್ದರು. ಕೆಲವರಿಗೆ ಒಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ಇದ್ದಾನೆ ಎಂದರೆ ಸಾಕು ಅವನೇನು ಅರಾಮಿದ್ದಾನೆ ಒಳ್ಳೆಯ ಕೆಲಸ, ಒಳ್ಳೆಯ ಸಂಬಳ ಅಂತೆಲ್ಲ ಅಂದುಕೊಳ್ಳುತ್ತಾರೆ. ಆದರೆ ಅವನು ಎಲ್ಲಾ ಜಂಜಾಟಗಳ ಮಧ್ಯೆ ರಾತ್ರಿ ಹಗಲು ಪಡುವ ಕಷ್ಟ ಅವನಿಗೆ ಮಾತ್ರ ಗೊತ್ತಿರತ್ತೆ, ನೋಡೋಕೆ ಚೆನ್ನಾಗಿ ಕಾಣುತ್ತಿರಬಹುದು ಅಷ್ಟೇ. ಕೆಲವರು ಅವನಿಗೆ ಇರುವ ಸಂಬಳದ ಇಮ್ಮಡಿ ಸಂಬಳ ಇದೆ ಎಂದುಕೊಂಡಿರುತ್ತಾರೆ. ಜನರ ಯೋಚನೆಗೆ ತಡೆ ಎಲ್ಲಿರತ್ತೆಸುಮ್ಮನೆ ಉಪಮೇಯ ಅಲಂಕಾರಗಳನ್ನು ಹಚ್ಚಿ ಹೊಗಳುತ್ತಾರೆ . ಬರುವ ಸಂಬಳದಲ್ಲಿ ಇರುವ ಖರ್ಚುಗಳನ್ನು ಕಳೆದು ಸೌಲ್ಪ ಹಣವನ್ನು ತಮ್ಮ ಮುಂದಿನ ಭವಿಷ್ಯಕ್ಕೆ ಉಳಿಸಿಕೊಳ್ಳುವುದು ಅವರ ತಲೆಯಲ್ಲಿ ಸದಾ ಇರುತ್ತದೆ. ಇವೆಲ್ಲದರ ಮಧ್ಯೆ ಹೇಗೋ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ಆದರೆ ಕೆಲ ತಿಂಗಳುಗಳಿಂದ ಹರಡುತ್ತಿರುವ ಮಾರಕ ಕೊರೊನಾ ರೋಗದಿಂದ ಹಲವಾರು ಕುಟುಂಬಗಳ, ಯುವಕರ, ಯುವತಿಯರ ಬದುಕು ಅತೀ ಕ್ಲಿಷ್ಟಕರವಾಗಿದೆ. ಹೇಗೋ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತಿದ್ದವರ ಸ್ಥಿತಿ ಕೆಲಸವಿಲ್ಲದೇ ಪರದಾಡುವಂತಾಗಿದೆ. ಅವರು ಕೆಲಸ ಮಾಡುತ್ತಿದ್ದ ಹಲವಾರು ಖಾಸಗಿ ಕಂಪನಿಗಳು ಈ ಕೊರೊನ ರೋಗದ ಪರಿಣಾಮದಿಂದ ಮುಚ್ಚಿರುವ ಕಾರಣ ಹೆಚ್ಚಿನ ನಿರುದ್ಯೋಗ ಉಂಟಾಗಿದೆ. ಎಲ್ಲರೂ ದಾರಿ ತೋಚದೆ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮೊದಲೆಲ್ಲ ಬೆಂಗಳೂರಿನಿಂದ ಊರಿಗೆ ಬಂದವರನ್ನು ಚೆನ್ನಾಗಿ ಮಾತನಾಡಿಸಿ ಸ್ವಾಗತಿಸುತ್ತಿದ್ದ ಜನ ಇವಾಗ ಅಲ್ಲಿಂದ ಯಾಕಾದರೂ ಬರುತ್ತಾರೋ ಅನ್ನೋ ಮಟ್ಟಿಗೆ ಬಂದು ತಲುಪಿದೆ.
ಅನಿವಾರ್ಯದ ಸ್ಥಿತಿ ಕೆಲಸವು ಇಲ್ಲದೆ ಯಾವುದೇ ಆದಾಯವಿಲ್ಲದೆ ಬೆಂಗಳೂರಿನಲ್ಲಿ ಅಥವಾ ಯಾವುದೇ ಪಟ್ಟಣದಲ್ಲಿ ಇರಲು ಸಾಧ್ಯವೇ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಊರಿನ ಕಡೆ ಬಂದಿರುತ್ತಾರೆಯೇ ಹೊರತು ಈ ಕೊರೊನ ಸೋಂಕನ್ನು ಹಳ್ಳಿಗಳಿಗೆ ಅಲ್ಲಿರುವ ಜನರಿಗೆ ಹರಡಬೇಕೆಂಬ ಉದ್ದೇಶ ಅವರದಾಗಿರುವುದಿಲ್ಲ. ಇಷ್ಟಾದರೂ ಅವರಿಗೆ ನಮ್ಮ ಮುಂದಿನ ಭವಿಷ್ಯವೇನು, ನನ್ನ ಜೀವನ ಹೇಗೆ ಎಂಬ ಚಿಂತೆ ಕಾಡುತ್ತದೆ. ಮೊದಲಿನಿಂದ ಊರಿನಲ್ಲಿದ್ದ ಯುವಕರು ಸಣ್ಣ ಪುಟ್ಟ ಕೆಲಸ ಮಾಡುತ್ತಿರುತ್ತಾರೆ. ಆದರೆ ಇವರು ಊರಿನಲ್ಲಿ ಏನು ಮಾಡುವುದೆಂದು ತೋಚದೆ ಅದರ ಬಗ್ಗೆಯೇ ಆಲೋಚಿಸುತ್ತಿರುತ್ತಾರೆ. ಗಾರೆ ಕೆಲಸ ಹಾಗೂ ಇನ್ನಿತರ ಕೆಲ್ಸಕ್ಕೆ ಕೆಲವರು ಹೋಗುತ್ತಿದ್ದಾರೆ, ಈ ಕೆಲಸ ಮಾಡಲು ಇಷ್ಟೆಲ್ಲ ಓದಿ ಪಟ್ಟಣಕ್ಕೆ ಹೋಗಿ ಬರಬೇಕಿತ್ತ ಎಂದು ಅಣುಕಿಸುವ ಕೆಲವು ಜನರು. ಇದೆಲ್ಲ ಬಿಟ್ಟು ಏನಾದರು ವ್ಯಾಪಾರ ಮಾಡೋಣ ಎಂದುಕೊಂಡರೆ ಈಗಾಗಲೇ ಎಲ್ಲಾ ಕ್ಷೇತ್ರದ ವ್ಯಾಪಾರಗಳು ಸ್ಪರ್ಧಾತ್ಮಕವಾಗಿವೆ. ಅವರೆಲ್ಲರಿಗಿಂತ ದೊಡ್ಡದಾಗಿ ವ್ಯಾಪಾರ ಮಾಡಲು ಬಂಡವಾಳದ ಕೊರತೆ ಎದುರಾಗುತ್ತದೆ. ಈ ಮಹಾಮಾರಿಯಿಂದ ಹಲವಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿಗೆ ಬಂದು ತಲುಪಿವೆ. ಬಹುಬೇಗ ಈ ಸೋಂಕು ನಮ್ಮ ರಾಜ್ಯದಿಂದ, ದೇಶದಿಂದ, ಪ್ರಪಂಚದಿಂದ ದೂರವಾಗಿ ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ತಲುಪುವಂತಾಗಲಿ. ಇದಕ್ಕೆ ಎಲ್ಲರ ಸಹಕಾರ ಬಹುಮುಖ್ಯವಾಗಿರುತ್ತದೆ. ಸರ್ಕಾರದ ಆದೇಶಗಳನ್ನು ಪಾಲಿಸಿ ಈ ಸೋಂಕನ್ನು ಓಡಿಸಲು ಎಲ್ಲರೂ ಹೋರಾಡಬೇಕಾಗಿದೆ.
✍✍ ಗೋಪಾಲ್ ನಾಯ್ಕ್ ಮನಮನೆ