

ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ರ ಜನ್ಮದಿನಾಚರಣೆ ಮತ್ತು ರಾಜ್ಯಸರ್ಕಾರದ ಬ್ರಷ್ಟಾಚಾರದ ಬಗ್ಗೆ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸುವ ಮನವಿ ನೀಡುವ ಕಾರ್ಯಕ್ರಮ ಇಂದು ಸಿದ್ಧಾಪುರದಲ್ಲಿ ನಡೆಯಿತು.
ತಾಲೂಕಾ ಕಾಂಗ್ರೆಸ್ ತಾತ್ಕಾಲಿಕ ಕಛೇರಿಯಲ್ಲಿ ಮಾಜಿಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸುರ ಜನ್ಮದಿನಾಚರಣೆ ನಡೆಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ತಾಲೂಕಾ ಕಾಂಗ್ರೆಸ್ ಘಟಕ ಸ್ಥಳಿಯ ತಹಸಿಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಕರೋನಾ ನಿರ್ವಹಿಸಲು ಅಸಮರ್ಥವಾದ ಯಡಿಯೂರಪ್ಪ ನೇತೃ ತ್ವದ ಸರ್ಕಾರ ಬ್ರಷ್ಟಾಚಾರದಲ್ಲಿ ತೊಡಗಿದೆ. ಭೂಸುಧಾರಣೆ ಕಾನೂನು, ಎ.ಪಿ.ಎಂ.ಸಿ. ಮಸೂದೆ ತಿದ್ದುಪಡಿಗಳಿಂದ ಜನಸಾಮಾನ್ಯರಿಗೆ ಅನ್ಯಾಯ ಮಾಡಿದ್ದು ಜನಸಾಮಾನ್ಯರ ಅಭಿಪ್ರಾಯ, ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಸರ್ಕಾರ ಮುಂದುವರಿಯಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ, ಮನವಿ ಅರ್ಪಣೆಗಳ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ ಸ್ಥಳಿಯ ಶಾಸಕ, ಸಂಸದರು ಬೇಜವಾಬ್ಧಾರಿಯಿಂದ ವರ್ತಿಸುತಿದ್ದಾರೆ. ಅಧಿಕಾರಿಗಳು, ಇಲಾಖೆಗಳ ಮೇಲೆ ಹಿಡಿತ ಸಾಧಿಸದ ಶಾಸಕ, ಸಂಸದರಿಂದಾಗಿ ತಾಲೂಕಿನ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕೆ.ಪಿ.ಸಿ.ಸಿ. ಕಾರ್ಯದರ್ಶಿ ಸುಷ್ಮಾ ರಾಜಗೋಪಾಲರೆಡ್ಡಿ ಮತ್ತು ತಾ.ಪಂ. ಮಾಜಿ ಅಧ್ಯಕ್ಷ ಸಿ.ಆರ್. ನಾಯ್ಕ ಮಾತನಾಡಿ ಕರೋನಾ ಮತ್ತು ಪ್ರವಾಹದ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಜವಾಬ್ಧಾರಿಯಿಂದ ವರ್ತಿಸುತಿದ್ದು ಪ್ರವಾಹ ಪರಿಹಾರ, ಮತ್ತು ಕರೋನಾ ನಿರ್ವಹಣೆ ವಿಫಲತೆಗಳ ವಿರುದ್ಧ ಹೋರಾಟ ಅನಿವಾರ್ಯ ಎಂದರು.




