

ಸುಂದರ ಗೋವಾದ ಕರಾಳ ಮನಸ್ಥಿತಿಯ ವಿರುದ್ಧ ಕನ್ನಡ ಮನಸ್ಸುಗಳ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಒಂದು ಜಿಲ್ಲೆಯಂತಿರುವ ಗೋವಾದಲ್ಲಿ ಕನ್ನಡಿಗರ ಬಗ್ಗೆ ಬೆಳೆಯುತ್ತಿರುವ ಅಸಹನೆ ಮತ್ತು ಕನ್ನಡಿಗರ ವಿರುದ್ಧದ ಕೆಟ್ಟ ಮನಸ್ಥಿತಿಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ ಎತ್ತಿದೆ.
ಇಂದು ಕಾರವಾರ ಗೋವಾ ಗಡಿ ಪೋಲಂ ನಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕ ಗೋವಾದಲ್ಲಿ ಕೋವಿಡ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಕನ್ನಡಿಗರು, ಕರ್ನಾಟಕದವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.
ಈ ಮನೋಭಾವ ಬದಲಾಗದಿದ್ದರೆ ನಾವು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರವೇ ನಾರಾಯಣ ಗೌಡ ಬಣ ಎಚ್ಚರಿಸಿದೆ. ಪೊಲೆಂ ನಲ್ಲಿ ನಡೆದ ಕರವೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾಸ್ಕರ್ ಪಟಗಾರ ಮಾತನಾಡಿ ಗೋವಾದ ಬೈನಾ ಬೀಚ್ ವಿಷಯ, ಕರೋನಾ ವಿಚಾರ ಎಲ್ಲದರಲ್ಲೂ ಗೋವಾ ಕನ್ನಡಿಗರು, ಕರ್ನಾಟಕದವರನ್ನು ಹೀನಾಯವಾಗಿ ಕಾಣುತ್ತಿದೆ. ನೆರೆಯ ನಮಗೆ ಕಿರುಕುಳ, ತೊಂದರೆ ಕೊಡುವಷ್ಟು ದೇಶದ ಯಾವ ರಾಜ್ಯಗಳಿಗೂ ತೊಂದರೆ, ರಗಳೆ ಆಗುತ್ತಿಲ್ಲ. ಕನ್ನಡಿಗರು, ಕರ್ನಾಟಕದವರ ಮೇಲೆ ಇದೇ ತಾರತಮ್ಯ, ಅಸಹನೆ, ಅಮಾನವೀಯತೆ ಮುಂದುವರಿದರೆ ಗೋವಾ ರಾಜ್ಯ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಕಾರ್ಯಕರ್ತರು ಮುಖಂಡರು ಪೊಲೆಂ ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ದಾಖಲಿಸಿದರು. ಕರೋನಾ ಕಾರಣ ಇಟ್ಟುಕೊಂಡು ಕನ್ನಡಿಗರಿಂದ ಹಣ ವಸೂಲಿ ಮಾಡುವುದು, ಅನಾವಶ್ಯಕ ಕಟ್ಟುಪಾಡುಗಳನ್ನು ಮಾಡುವುದನ್ನು ಬಿಟ್ಟು ಕನ್ನಡಿಗರು ಕರ್ನಾಟಕದ ಜನತೆಯನ್ನು ಗೌರವದಿಂದ ನಡೆಸಿಕೊಳ್ಳುವ ಬಗ್ಗೆ ಕಾರವಾರದ ಶಾಸಕಿ ಗೋವಾ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಕರವೇ ಗಜಸೇನೆಯ ಕೃಷ್ಣಮೂರ್ತಿ ಮತ್ತು ದಿವಾಕರ ನಾಯ್ಕ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದಿನ ಪ್ರತಿಭಟನೆ ನೇತೃ ತ್ವವನ್ನು ಕರವೇ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್, ಕನ್ನಡ ಸಂಘಟನೆಗಳ ಒಕ್ಕೂಟದ ರಾಘು ನಾಯ್ಕ ವಹಿಸಿದ್ದರು.

