

ಸಿದ್ಧಾಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಸಂಘಟನಾ ಸಭೆ ಯಶಸ್ವಿಯಾಗಿ ನಡೆದಿದ್ದು ಹೆಚ್ಚಿನ ಕಾರ್ಯಕರ್ತರು ಸೇರಿದ್ದು ವಿಶೇಶ ಎನಿಸಿದೆ. ಕಾಂಗ್ರೆಸ್ ಬಣ ಭೇದ, ಹಳೆ ತಂಡದ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈಗಿನ ವ್ಯವಸ್ಥೆ, ಈಗಿರುವ ಶಾಸಕರು,ಸಂಸದರ ಕಾರ್ಯವೈಖರಿಗೆ ವಿರೋಧ ವ್ಯಕ್ತವಾಗಿದ್ದು ಹೊಸ ಬೆಳವಣಿಗೆ ಎನಿಸಿತು.

ಕಾಂಗ್ರೆಸ್ ಸಭೆ ನಡೆಯುತಿದ್ದ ಸಂದರ್ಭದಲ್ಲಿ ವೇದಿಕೆಗೆ ಬಂದು ಮಾತನಾಡಿದ ಹೆಜನಿಯ ರಾಜು ನಾಯ್ಕ ಕರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ಪಾಠ ಪ್ರಾರಂಭಿಸಲಾಗಿದೆ. ಮೊಬೈಲ್ ಇಲ್ಲದ, ಸಿಗನಲ್ ಜಾಲ ಸಿಗದ ಸಿದ್ಧಾಪುರದಂಥ ತಾಲೂಕಿನಲ್ಲಿ ಆನ್ಲೈನ್ ಶಿಕ್ಷಣದ ಉದ್ದೇಶ ಸಫಲವಾಗುತ್ತಿಲ್ಲ. ಪಕ್ಷ ಇಂಥ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕಾರ್ಯಕರ್ತರು ಸೇರಿದ್ದ ವೇದಿಕೆ ಮುಂಭಾಗದಿಂದ ಮಾತನಾಡಿದ ಎಂ.ಜಿ. ನಾಯ್ಕ ಸಣ್ಣೆಕೊಪ್ಪ ಸಿದ್ಧಾಪುರದಲ್ಲಿ ಯಾರದ್ದೋ ಹಿತಕ್ಕೆ ಸರ್ಕಾರಿ ಮಹಾವಿದ್ಯಾಲಯವನ್ನು ದೂರದಲ್ಲಿ ಮಾಡಿ ತಾಲೂಕಿನ ಜನಸಾಮಾನ್ಯರು, ವಿದ್ಯಾರ್ಥಿ ವೃಂದಕ್ಕೆ ಅನ್ಯಾಯ ಎಸಗಲಾಗಿದೆ. ತಾಲೂಕಿನಲ್ಲಿ ಇಂಥ ಅನೇಕ ತೊಂದರೆ, ತಾಪತ್ರ್ಯಯಗಳಿಗೆ ಈಗಿರುವ ಪ್ರತಿನಿಧಿಗಳು ಕಾರಣ ಅವರ ವಿರುದ್ಧ ಜನ ಸಂಘಟಿತರಾಗಬೇಕು ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸಂತ ನಾಯ್ಕ ಮಳಲವಳ್ಳಿ ಮಾತನಾಡಿ ಜನರ ಸಮಸ್ಯೆ ಕೇಳದೆ, ಜನಪರ ಕೆಲಸ ಮಾಡದೆ ಹಿಂದುತ್ವದ ಬಾವುಟ ಹಾರಿಸುತ್ತೇವೆನ್ನುವ ಶಾಸಕ, ಸಂಸದರು ಇದ್ದೂ ಇಲ್ಲದಂತಾಗಿದೆ. ಜನಸಾಮಾನ್ಯರಿಗೆ ಮಾರಕವಾಗಿ ಪರಿಣಮಿಸಿರುವ ಈ ಹಿಂದೂ ಬಾವುಟ ಹಾರಿಸುವ ರಾಜಕಾರಣಿಗಳನ್ನೇ ಚುನಾವಣೆಯಲ್ಲಿ ಹಾರಿಸುವ ಮೂಲಕ ತಾಲೂಕಿನ ಜನರಿಗೆ ಸ್ಫಂದಿಸುವ ಜನಪ್ರತಿನಿಧಿಗಳಿಗಾಗಿ ಸಂಘಟಿತವಾಗಿ ಹೋರಾಡುವ ಅನಿವಾರ್ಯತೆ ಇದೆ ಎಂದರು.

