

ಕಾಂಗ್ರೆಸ್ ನಲ್ಲಿ ಬಣಗಳ ಮೇಲಾಟ, ಬಿ.ಜೆ.ಪಿ.ಯಲ್ಲಿ ಹಿಂದುತ್ವವಾದಿಗಳ ಜಾತಿ ಪ್ರೇಮ, ಪ್ರಾಮಾಣಿಕ ಕಾರ್ಯಕರ್ತರ ಉಪೇಕ್ಷೆ ಗಳು ಸುದ್ದಿಮಾಡುತ್ತಿರುವಂತೆ ಜನತಾದಳದಲ್ಲಿ ಪಕ್ಷದ ಅಳಿವು ಉಳಿವಿನ ವಿಚಾರ ಈಗ ಚರ್ಚೆಯ ವಿಷಯಗಳಾಗಿವೆ.

ಶಿರಸಿಯಲ್ಲಿ ಬಿ.ಜೆ.ಪಿ ಯೊಂದಿಗೆ ರಾತ್ರಿ ಸ್ನೇಹ ಇಟ್ಟುಕೊಂಡಿದ್ದ ಕೆಲವು ವಲಸಿಗರು ಈಗ ತಮ್ಮ ನಾಯಕಿಯೊಬ್ಬರನ್ನು ಕರೆತರುವ ಮೂಲಕ ಬಿ.ಜೆ.ಪಿಗೆ ನೆರವಾಗಲು ಟೊಂಕಕಟ್ಟಿ ನಿಂತಿದ್ದಾರೆ ಎನ್ನುವ ವಿದ್ಯಮಾನ ಚರ್ಚೆಯಾಗುತ್ತಿರುವಂತೆ ವಲಸೆ ಅಭ್ಯರ್ಥಿಗಳ ಆಗಮನದ ಸುದ್ದಿ ತಿಳಿದ ಕೆಲವು ಕಾಂಗ್ರೆಸ್ ಮುಖಂಡರು ಬಿ.ಜೆ.ಪಿ. ಸೇರಲಿದ್ದಾರೆ ಎನ್ನುವ ಗಾಳಿಸುದ್ದಿ ಹಾರಾಡುತ್ತಿದೆ. ಈ ಬಹಿರಂಗ ವಿದ್ಯಮಾನಗಳ ನಡುವೆ ಮತ್ತೊಂದು ಪ್ರಮುಖ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ.
ಅದೆಂದರೆ…… ಅದೂ ಕೂಡಾ ಕಾಂಗ್ರೆಸ್ ವಿಚಾರವೇ. ನಿರೀಕ್ಷೆಯಂತೆ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ತಮ್ಮ ಮೂರು ಅವಧಿಯ ನಿರಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಯ ಕುರ್ಚಿ ಬಿಡುತಿದ್ದಾರೆ. ಭೀಮಣ್ಣ ಅವಧಿ ಮುಕ್ತಾಯದನಂತರ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ವಿಚಾರ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ರವೀಂದ್ರ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ್ ದೊಡ್ಡೂರು, ವಿ,ಎನ್. ನಾಯ್ಕ, ಕೆ.ಜಿ. ನಾಗರಾಜ್ ಇವರಲ್ಲಿ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ.
ಸಿದ್ಧಾಪುರದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ,ಇನ್ನೊಬ್ಬ ಜಿ.ಪಂ ಮಾಜಿ ಸದಸ್ಯ ವೆಂಕಟೇಶ್ ಹೆಗಡೆ ಹೊಸಬಾಳೆ ಶಿರಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಪ್ರಯತ್ನಿಸುತಿದ್ದು ವಿ.ಎನ್. ನಾಯ್ಕ ಕೆ.ಪಿ.ಸಿ.ಸಿ. ಶಿರಸಿ ಉಸ್ತುವಾರಿ ಸುಷ್ಮಾ ರೆಡ್ಡಿಯವರ ಅಭ್ಯರ್ಥಿಯಾಗಿದ್ದರೆ, ವೆಂಕಟೇಶ್ ಹೆಗಡೆ ಕಾಂಗ್ರೆಸ್ ರಾಜ್ಯಮುಖಂಡರ ಸಂಪರ್ಕದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರೊಬ್ಬರ ಅಭ್ಯರ್ಥಿ ಎನ್ನಲಾಗುತ್ತಿದೆ.!
ಶಿರಸಿಯ ದೀಪಕ್ ದೊಡ್ಡೂರು,ಸಿದ್ಧಾಪುರದ ಮಾಜಿ ಬ್ಲಾಕ್ ಅಧ್ಯಕ್ಷ ಕೆ.ಜಿ. ನಾಗರಾಜ್ ದೇಶಪಾಂಡೆಯವರ ಅಭ್ಯರ್ಥಿಗಳಾಗಿದ್ದು ಇವರಿಗೆ ಈಗಿನ ಅಧ್ಯಕ್ಷರ ಭೀಮಬಲದ ಅಭಯವಿದೆ ಎನ್ನಲಾಗುತ್ತಿದೆ.
ಈ ಹೆಸರುಗಳ ಮಧ್ಯೆ ತೇಲಿಬರುತ್ತಿರುವ ಇನ್ನೊಂದು ಹೆಸರು ಎ. ರವೀಂದ್ರ ಯಾನೆ ರವೀಂದ್ರನಾಥ್ ನಾಯ್ಕ ಈ ಬಣಗಳ ಬೆಂಬಲವಿಲ್ಲದೆ ನೇರವಾಗಿ ರಾಜ್ಯ ಮುಖಂಡರ ಅಭಯದಿಂದ ಡಿ.ಸಿ.ಸಿ. ಅಧ್ಯಕ್ಷರಾಗುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಬಿ.ಕೆ. ಹರಿಪ್ರಸಾದ್, ಕಾಗೋಡು ತಿಮ್ಮಪ್ಪ ಸೇರಿದಂತೆ ಕೆಲವು ಪ್ರಮುಖ ನಾಯಕರು ರವೀಂದ್ರರ ಬೆನ್ನಿಗೆ ನಿಂತಿದ್ದು ಉತ್ತರ ಕನ್ನಡ ಜಿಲ್ಲೆಯ ಜಮೀನ್ಧಾರಿ ರಾಜಕಾರಣ ಮತ್ತು ಚುನಾವಣೆ ವೇಳೆಯ ವಲಸೆ ರಾಜಕಾರಣಕ್ಕೆ ವಿರುದ್ಧವಾಗಿ ಅವಿರತ ಹೋರಾಟಗಾರ, ಜನಪರ ಚಿಂತನೆಗಳ ರವೀಂದ್ರ ನಾಯ್ಕ ರೆಡ್ಡಿ ಮತ್ತು ದೇಶಪಾಂಡೆ ಗಳ ಹಣದ ರಾಜಕೀಯಕ್ಕೆ ವಿರುದ್ಧವಾಗಿ ಗುಣದ ರಾಜಕೀಯದ ಮೂಲಕ ಸೊರಗಿರುವ ಡಿ.ಸಿ.ಸಿ. ಗೆ ಜೀವತುಂಬುವ ಜವಾಬ್ಧಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.


