ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿರಿಯ ಸದಸ್ಯ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದ ಸಿದ್ಧಾಪುರ ಹಸ್ವಂತೆಯ ಪ್ರಭಾಕರ ನಾಯ್ಕ ಇಂದು ನಿಧನರಾಗಿದ್ದಾರೆ.
ಹಸ್ವಂತೆಯ ಪ್ರತಿಷ್ಠಿತ ಮನೆತನದ ಪ್ರಭಾಕರ ನಾಯ್ಕ ಬಂಗಾರಪ್ಪನವರ ಜೀವಿತಾವಧಿಯುದ್ದಕ್ಕೂ ಅವರ ಕಟ್ಟಾ ಅನುಯಾಯಿಯಾಗಿ ಕೆಲಸ ಮಾಡಿದ್ದರು. ಸಿದ್ಧಾಪುರ-ಶಿರಸಿ ಕ್ಷೇತ್ರದ ಹಿಂದಿನ ಶಾಸಕ ಗೋಪಾಲಕಾನಡೆಯವರೊಂದಿಗೆ ತಾಲೂಕು, ಕ್ಷೇತ್ರ, ಜಿಲ್ಲೆಯ ಪ್ರಗತಿಗೆ ಕೆಲಸಮಾಡಿದ್ದ ಪ್ರಭಾಕರ ನಾಯ್ಕ ಹಸ್ವಂತೆ ಓರ್ವ ಪುತ್ರಿ, ಎರಡು ಜನರು ಗಂಡು ಮಕ್ಕಳೊಂದಿಗೆ ಪತ್ನಿ ಪ್ರಗತಿಪರ ಕೃಷಿ ಮಹಿಳೆ, ಜಾನಪದ ಕಲಾವಿದೆ ಕಮಲಮ್ಮ ನವರೊಂದಿಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
70-80 ರ ದಶಕದ ಪದವಿಧರರಾಗಿದ್ದ ಪ್ರಭಾಕರ ನಾಯ್ಕ ಸಾಮಾಜಿಕ, ರಾಜಕೀಯ ಬದುಕಿಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದರೂ ಅಧಿಕಾರದ ಆಸೆ, ಹುದ್ದೆ ಇಷ್ಟಪಟ್ಟವರಲ್ಲ. ಒಂದು ದಶಕ ತಾಲೂಕಾ ಕಾಂಗ್ರೆಸ್ ಪದಾಧಿಕಾರಿ, 15 ವರ್ಷ ಮೂರು ಅವಧಿಗಳ ಗ್ರಾ.ಪಂ. ಸದಸ್ಯತ್ವ ಬಿಟ್ಟರೆ ಅವರು ಯಾವುದೇ ಲಾಭದಾಯಕ ಹುದ್ದೆ,ಸ್ಥಾನಮಾನ ಅಲಂಕರಿಸಿದವರಲ್ಲ. ಜೀವನದುದ್ದಕ್ಕೂ ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿ ಕಾಂಗ್ರೆಸ್ ಸದಸ್ಯರು, ಮುಖಂಡರಾಗಿ ಕೆಲಸ ಮಾಡಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದ ಕಾರಣಕ್ಕೆ ಮನೆ ಉಪಚಾರದಲ್ಲಿದ್ದರು. ಇಂದು ಸಾಯಂಕಾಲದ ಸಮಯಕ್ಕೆ ಹಟಾತ್ ನಿಧನರಾದ ಪ್ರಭಾಕರ ನಾಯ್ಕರ ಸಾವಿಗೆ ಸಿದ್ಧಾಪುರ, ಉತ್ತರ ಕನ್ನಡದ ಅನೇಕ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.