

ದಾರಿಯಲ್ಲಿ ಸಿಕ್ಕ ಬೇಳೂರು ಮತ್ತು ಆ ಕುಟುಂಬ…
ಕಳೆದ 20 ವರ್ಷದ ನನ್ನ ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ, ಪತ್ರಕರ್ತನಾಗಿ ನಾನು ತಾಲ್ಲೂಕಿನಲ್ಲಿ ಶಾಸಕರಾಗಿ ಆಯ್ಕೆ ಆದವರಲ್ಲಿ ಬೇಳೂರು ಗೋಪಾಲಕೃಷ್ಣರವರನ್ನ ಎತ್ತರದ ನಿಲುವಲ್ಲಿ ನನಗೆ ಕಾಣ ಸಿಗುವುದು ಅವರ ಮಾನವೀಯ ನೆಲೆಯ ನಡವಳಿಕೆಯಲ್ಲಿ. ಅವರ ರಾಜಕೀಯ ನಡೆಗಳು, ಹೇಳಿಕೆಗಳು, ಪಕ್ಷ ಬದಲಾವಣೆ ಇತ್ಯಾದಿ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದವರು ಕೂಡ ಬೇಳೂರು ಒಳಗಿನ ಮನುಷ್ಯಪರ ಕಾಳಜಿಯನ್ನು, ವಯಕ್ತಿಕವಾದ ಆಪ್ತ ನಡವಳಿಕೆಯನ್ನ ಮೆಚ್ಚುತ್ತಾರೆ. ಬೇಳೂರು ಗೆ ಅವರ ರಾಜಕೀಯ ನಿಲುವು, ಹೀರೊಯಿಸಂ ಧಿರಿಸು, ಪ್ಯಾಂಟಸಿ ಸೃಷ್ಟಿಸುವ ಅವರ ಹೊರ ನಡವಳಿಕೆ ಅವರನ್ನು ಎಷ್ಟು ಜನರ ಬಳಿ ಕರೆ ತರುತ್ತದೋ ಅದಕ್ಕಿಂತ ಜಾಸ್ತಿ ಅವರ ಹೃದಯವಂತಿಕೆ ಜನರ ಆಳಕ್ಕೆ ಇಳಿದಿದೆ. ಬೇಳೂರು ಎಂದ್ರೆ ಗತ್ತು ಗೈರತ್ತು ಇಲ್ಲದ ನಮ್ಮವ ಎಂಬ ಭಾವ ಅದು.ಇದಕ್ಕೆ ಪೂರಕವಾಗಿ ಅಧಿಕಾರದಲ್ಲಿ ಇದ್ದಾಗ ಇಲ್ಲದಿದ್ದಾಗಲೂ ಬೇಳೂರು ನಡವಳಿಕೆ ಇದೆ. ಒಂದು ಕಾಲದಲ್ಲಿ ಕರೂರಿಗೆ ಬೇಳೂರು ಬರುತ್ತಾರೆ ಎಂದರೆ ದಲಿತ ಚೌಡಜ್ಜ, ಅಂಧವ್ಯಕ್ತಿ ರಾಜಣ್ಣ, ಇಳಿ ವಯದ ಒಂಟಿ ಜೀವನ ನಡೆಸುತ್ತ ಇದ್ದ ಪಾಯಪ್ಪ ಶೆಟ್ಟರು ಹೀಗೆ ಬದುಕಿನ ಸವಾಲುಗಳ ನಡುವೆ ಇದ್ದ ಜನ ಕಾಯುತ್ತ ಇರುತ್ತಿದ್ದರು. ಅವರಿಗೆ ಬೇಳೂರು ಪ್ರೀತಿ ಮಾತುಕತೆ, ಒಂದು ಆಲಿಂಗನ ಜತೆ ಕನಿಷ್ಠ ನಾಲ್ಕೈದು ನೂರು ಹಣ ಅವರಿಗೆ ದಕ್ಕುತ್ತಾ ಇತ್ತು. ಅವರಿಗೆ ಅದು ದೊಡ್ಡದೇ ಆಗಿರುತ್ತಿತ್ತು. ಸತ್ತವರು, ಹುಟ್ಟಿದವರು, ಮದುವೆ, ಚೌತಿ ಗಣಪತಿ, ಕ್ರಿಕೆಟ್ ಟೂರ್ನಿ ಹೀಗೆ ಅದರ ವಿಸ್ತಾರ ಇರುತ್ತಿತ್ತು. ಬೇಳೂರು ಈ ಕಾರಣಕ್ಕೆ ನನಗೆ ತುಂಬಾ ಇಷ್ಟ. ಕಣ್ಣೀರಿಗೆ ಬಂಧು ಆಗುವ ಮೇರು ಗುಣ ಅದು. ರಾಜಕಾರಣದಲ್ಲಿ ಇವೆಲ್ಲಾ ಅಗತ್ಯವಾ ಇತ್ಯಾದಿ ವಿಮರ್ಶೆ ಆಚೆಗೂ ಬೇಳೂರು ಈ ಕಾರಣದಿಂದ ಜನ ಸಾಮಾನ್ಯರ ಹತ್ತಿರ ಆಗಿದ್ದು ಅನ್ನೋದು ಸತ್ಯ.
ಮೊನ್ನೆ ಬೇಳೂರು ನೆನಪಾದರು. ವಾಟೆಮಕ್ಕಿ ಶ್ರೀಕಾಂತ್ ಮನೆಯಲ್ಲಿ ಮತ್ತು ಕಳ್ಳತನ ಆಗಿದ್ದ ಚಕ್ಕೋಡು ವಿಜಯಕ್ಕ ಮನೆಯ ಜಗುಲಿಯಲ್ಲಿ. ಶ್ರೀಕಾಂತ್ ಕುಟುಂಬಕ್ಕೆ ಸಹಾಯ ಮಾಡಿ ಎಂದು ಫೋನಾಯಿಸಿದೆ. ಒಪ್ಪಿಕೊಂಡರು. ವಿಜಯಕ್ಕ ಮನೆ ಎದುರು ನೆನಪಾಗಿದ್ದು ಬೇರೆಯದೇ ಕಾರಣಕ್ಕೆ.ನಮ್ಮ ಊರಿನ ಚಕ್ಕೋಡು ಕುಟುಂಬ ಭೂ ರಹಿತ ಬಡ ದೀವಕುಟುಂಬ. ನನ್ನ truth ಮಾಲಿಕೆಯಲ್ಲಿ ಈ ಕುಟುಂಬದ ಕೊನೆ ಮಗ ರಘುಪತಿಯ ಇಬ್ಬರು ಮಕ್ಕಳು sslc ಮತ್ತು puc ಯಲ್ಲಿ ಟಾಪರ್ ಆಗಿರುವ ಕುರಿತು ನಾನು ಮಾತಾಡಿದ್ದೆ. ನನ್ನ ಸ್ನೇಹಿತರು ಈ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಅಕ್ಷರ ಹಾರೈಕೆ ನೀಡಿದ್ದರು. ಅದಾದ ಕೆಲವೇ ದಿನದಲ್ಲಿ ರಘುಪತಿ ಅಣ್ಣ (ಕ್ಯಾನ್ಸರ್ ನಿಂದ ತೀರಿ ಹೋಗಿದ್ದಾರೆ) ನ ಮನೆಯಲ್ಲಿ ಕಳ್ಳತನ ನಡೆದು ಹೋಗಿದೆ. ಬಡ ಕುಟುಂಬ ನಲುಗಿ ಹೋಯ್ತು. ನಮ್ಮ ವಿಜಯಕ್ಕ ಸಿಗಂದೂರು ದೇವಸ್ಥಾನದಲ್ಲಿ ಭೋಜನ ಶಾಲೆಗೆ ಕೂಲಿ ಕೆಲಸಕ್ಕೆ ಹೋಗುತ್ತ ಇದ್ದಾರೆ ಒಂದು ವರ್ಷದಿಂದ. ಮೊನ್ನೆ ಕಳ್ಳತನ ಆದ ಮಾರನೇ ದಿನ ಬೆಳಿಗ್ಗೆ ಪೊಲೀಸ್ ಮಾಜುರು ಬಂದಾಗ ನಾನೂ ಕೂಡ ಅಲ್ಲಿ ಇದ್ದೆ. Fir ಕಾಪಿಗೆ ಸಹಿ ಹಾಕಲು ಕಾರ್ಗಲ್ ಬರಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುಷ್ಪ ಮೇಡಂ ಸೂಚಿಸಿದರು. ವಿಜಯಕ್ಕ ಮತ್ತು ಅವರ ಮಗ ಪೇಚಿಗೆ ಸಿಕ್ಕಿದರು. ಕೈಲಿ ಒಂದು ರೂ ಕಾಸಿಲ್ಲ. ತಮಗೆ ಆಸರೆ ಆಗಿರುವ ಭಟ್ರ ಮನೆಗೆ ಓಡಿದರು. ಗೆಳೆಯನಿಗೆ ಫೋನ್ ಮಾಡಿ ದುಡ್ಡು ನಾಳೆ ಕೊಡ್ತೀನಿ ಒಮಿನಿ ತಗೋ ಬಾ ಎಂದು ವಿಜಯಕ್ಕ ಮಗ ಸತ್ಯ ಕರೆ ಮಾಡುತ್ತಾ ಇದ್ದ.ಬೇಸರವಾಗಿದ್ದು…..ಅವತ್ತಿನ ದಿನ ಬೆಳಿಗ್ಗೆ ನಮ್ಮ ಸಿಗಂದೂರು ರವಿಕುಮಾರ್ ಆ ಮನೆಗೆ ಭೇಟಿ ನೀಡಿದ್ದರು. 5 ನಿಮಿಷಗಳ ಕಾಲ ಗಡಿಬಿಡಿಯಲ್ಲಿ ಬಂದು ಏನಾಯ್ತು ಎಂದು ಕೇಳಿ ಹೊರಟು ಹೋಗಿದ್ದಾರೆ ಎಂದು ತಿಳಿದ ಮೇಲೆ. ನಾನು ಗೆಳೆಯ ರವಿಕುಮಾರ್ ರವರಿಂದ ಬೇಳೂರರ ನಡವಳಿಕೆ ನಿರೀಕ್ಷೆ ಮಾಡಿದ್ದೆ. ತಮ್ಮ ದೇವಾಲಯದ ಕೆಲಸ ಮಾಡುವ, ಜಾತಿಯಲ್ಲಿ ಕೂಡ ನಮ್ಮವರೇ ಆದ, ಕಣ್ಣೆದುರು ಅವರ ಅಸಹಾಯಕ ಸ್ಥಿತಿ ಇರುವಾಗ ನೊಂದ ಮನಸಿಗೆ ದೈರ್ಯ ತುಂಬುವುದೇ ನಿಜದ ಧರ್ಮ ಅಲ್ಲವೇ…?
ಆ ಕುಟುಂಬದ ಕೈಲಿ ಹತ್ತು ಸಾವಿರವಾದರೂ ಇತ್ತು, ಸ್ಟೇಷನ್ ಗೆ ಹೋಗಲು ವಾಹನ ಕಳಿಸಿ, ದೇವಾಲಯದ ಗೋದಾಮಿನಿಂದ ಎರಡು ಚೀಲ ಅಕ್ಕಿ ಕಳಿಸಿದ್ದರೆ…?ಆ ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಕ್ಷೇತ್ರ ಭರಿಸುತ್ತೆ, ಅಂದಿದ್ದರೆ….?
ದ್ವೀಪದಲ್ಲಿ ಹೋರಾಟ ಸಂಘಟನೆ ಮಾಡುವ ಉತ್ಸಾಹಿ ಸ್ನೇಹಿತರುಗಳು ಆ ಮನೆಗೆ ಭೇಟಿ ನೀಡಿ ನೈತಿಕ ಬೆಂಬಲ ನೀಡಿದ್ದರೆ…? ದೇವಾಲಯದಿಂದ ಸಹಕಾರ ನೀಡಿಸಿದ್ದರೆ…?ನಾನು ಕಾಯುತ್ತಾ ಇದ್ದ ರವಿ ಉದಯ ಈ ರೀತಿಯದು. ಸಿಗಂದೂರು ವಿಚಾರದಲ್ಲಿ ನಮ್ಮ ಬೇಳೂರು ಮೊನ್ನೆಯಿಂದ ಪ್ರವೇಶ ಮಾಡಿದ್ದಾರೆ. ಹೋರಾಟದ ಮಾತುಗಳನ್ನು ಆಡಿದ್ದಾರೆ. ನಾಳೆ ಹೋರಾಟದ ಸಂಘಟನೆ ಭಾಗವಾಗಿ “ನಾವು ದೀವರು” “ನಾವು ಈಡಿಗರು” “ನಾವು ಹಿಂದುಳಿದವರು” ” ” “ದೇವಾಲಯ ನಮ್ಮದು” ಎಂದು ವಿಜಯಕ್ಕನ ಮನೆ ಬಾಗಿಲಿಗೆ ಹೋಗುವುದು ಹೇಗೆ..? ಹೊಳೆಬಾಗಿಲು ಮಂಡಕ್ಕಿ ಅಂಗಡಿಯ ಚಕ್ಕೋಡು ರಘುಪತಿ ತನ್ನ ಮಕ್ಕಳು ಓದಲು ಯಾಕೆ ಸಹಕಾರ ನೀಡಿಲ್ಲ ಎಂದು ಮೌನ ಮುರಿದರೆ…? ಬೇಳೂರು ಸಿಗಂದೂರು ವಿಚಾರದಲ್ಲಿ ಹೋರಾಟದ ಬಯಲಿಗೆ ಇಳಿಯುತ್ತಾರ ಇಲ್ಲವಾ ಗೊತ್ತಿಲ್ಲ. ಆದರೆ ಎದೆಯ ಒಳಗೆ ಹದ ಕಾಯ್ದುಕೊಂಡು ಸುತ್ತಲ ಜಗತ್ತಿನ ನೋವಿಗೆ ಕಣ್ಣೀರಿಗೆ ಮಿಡಿಯುವ ಪಾಠವನ್ನು ಸಿಗಂದೂರು ಆಡಳಿತಕ್ಕೆ ಹೇಳಲೇ ಬೇಕಾಗುತ್ತದೆ. ಬದಲಾದ ಆ ದಿನಕ್ಕೆ.. ಕ್ಷಣಕ್ಕೆ… ಕಾಯುತ್ತಾ ಇರುವೆ. ನಾನು ಮತ್ತು ನಮ್ಮ ನೆಲ ಕೂಡ.
– ಸತ್ಯನಾರಾಯಣ ಜಿ. ಟಿ ಕರೂರು.


