

ಇನ್ನೇನು ನಮ್ಮ ಮನೆಗಳಲ್ಲಿ ಬಲಿ ರಾಜ ಬಂದು ಕೂರಲಿದ್ದಾನೆ. (ಮಣ್ಣಿನ ಮಡಕೆ, ಅದರ ಮೇಲೆ ಹಣತೆಯ ರೂಪದಲ್ಲಿ) ಅವನು ಬರುವಾಗ ರೈತಾಪಿಗಳ ಬೇಸಾಯದ ಪರಿಕರಗಳನ್ನೆಲ್ಲಾ ಜೋಡಿಸಿ ಇಡಲಾಗುತ್ತದೆ.
ವೈದಿಕರ ಪುರಾಣದಲ್ಲಿ ನಮ್ಮ ಬಲಿ ಚಕ್ರವರ್ತಿ ಒಬ್ಬ ದುರಹಂಕಾರಿಯಂತೆ. ವಾಮನ ಎಂಬ ಕುಬ್ಜ ವಂಚಕ ಬಂದು ಬಲಿರಾಜನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಬಲಿಚಕ್ರವರ್ತಿಯ ಸಾಮ್ರಾಜ್ಯವನ್ನು ಕಿತ್ತುಕೊಂಡು ಮೋಸದಿಂದ ಕೊಲೆಮಾಡುತ್ತಾನೆ.
ಇಂದು ಪುರಾಣದ ಐತಿಹ್ಯದ ಸ್ವರೂಪದಲ್ಲಿ ಚಾಲ್ತಿಯಲ್ಲಿರುವ ಬಲಿರಾಜನ ಕತೆ ನಮಗೆ ನಮ್ಮ ನೆಲದ, ನಮ್ಮ ಜನರ ಇತಿಹಾಸದಲ್ಲಿ ನಡೆದಿರುವ ವಂಚನೆ, ಕುತಂತ್ರದ ಕತೆಯನ್ನು ಹೇಳುತ್ತದೆ. ದ್ರಾವಿಡ ನಾಡಿನ ಮೂಲನಿವಾಸಿಗಳು ತಮ್ಮ ನೆಲವನ್ನು ಕಳೆದುಕೊಂಡು, ಪರಕೀಯರ ದಾಳಿಗೆ ತುತ್ತಾದ ಕತೆಯನ್ನೂ ಇದು ಹೇಳುತ್ತದೆ
ಆದರೆ ಬಲೀಂದ್ರನನ್ನು ಪ್ರತಿವರ್ಷ ಕರೆತರುವ ನಮ್ಮ ರೈತಾಪಿ ಸಂಸ್ಕೃತಿಯಲ್ಲಿ ಬಲೀಂದ್ರ ಜೀವಂತವಾಗಿದ್ದಾನೆ. ಇದೇ ಸಂಸ್ಕೃತಿಯ ಭಾಗವಾಗಿ ನಮ್ಮ ಕಡೆಯ ಜಾನಪದ ಹಾಡುಗಳಲ್ಲಿ ಬಲೀಂದ್ರನನ್ನು ಜನಪದರು ನೆನೆಸಿಕೊಳ್ಳುವ ಪರಿಯ ನೋಡಿ.
ಬಲ್ಲೇಳ ಬಲೀಂದ್ರರಾಯ
ಬಂದಾನೋ ತನ ರಾಜ್ಯಕೆ
ಬಲೀಂದ್ರರಾಜ ಬಂದು
ಬಾಗಿಲಾಗೆ ಕುಂತಾರೆ
ಕಲ್ಲಂತ ಮಳೆಯೆ ಕರೆದಾವೆ
ಕಲ್ಲಂತ ಮಳೆಯೆ ಕರದಾವೆ ಈ ಊರ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ ಈ ಊರ
ಗೊಡ್ಡ ದನಗಳೆಲ್ಲ ಕರಹಾಕಿ
ಹಂಡೆ ಹಂಡೆ ನೂರು ಹಂಡೆಯ ಕರ ನೂರು
ಹಂಡೆವ್ವ ನಿನ್ನ ದಯ ನೂರು
ಹಂಡೆಯ ಹಾಲ ಕರೆದು ಪಾಸೆ ಮಾಡಿ
ಬಂದ ಬಲೀಂದ್ರಸ್ವಾಮಿಗೆ ಎಡೆ ಮಾಡಿ
(ದೀವರ ಹಾಡುಗಳು, ಸಂಗ್ರಹ: Jayaram Kh ಜಯರಾಮ ಕೆ.ಎಚ್.)
ನಮ್ಮ ಜನಮಾನಸದ ದೊರೆ ಬಲೀಂದ್ರ ರಾಜ ಜನರ ನೆನಪುಗಳಲ್ಲಿ ಚಿರಾಯುವಾಗಲಿ.
- ಹರ್ಷಕುಮಾರ್ ಕುಗ್ವೆ
- https://www.youtube.com/watch?v=VIM4Lqp_4pY&t=36s



