

ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಗೆ ಬೆಣ್ಣೆ!
Kanneshwar Naik — November 24, 2020 0 comment

ಒಟ್ಟಾರೆ ಈ ಅವ್ಯವಸ್ಥೆ, ದುರಾಡಳಿತಗಳಿಗೆ 25 ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಾ ಸ್ವಜಾತಿ ನೌಕರರನ್ನು ತುಂಬಿಕೊಂಡು ಹಿಂದುತ್ವ, ಧರ್ಮ ರಕ್ಷಿಸುತ್ತಿರುವ ಬ್ರಷ್ಟ-ದುಷ್ಟ ಶಾಸಕರು, ಸಂಸದರೇ ಈ ಕರಾಳತನಗಳ ಪೋಷಕರು ಎನ್ನುವ ಆಕ್ಷೇಪವನ್ನೂ ಸಾರ್ವಜನಿಕ ವಲಯ ಎತ್ತುತ್ತಿರುವುದು ಇಲ್ಲಿಯ ಶಾಸಕರು,ಸಂಸದರ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಯಂತಿದೆ.
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಅಥವಾ ಪಂಚಾಯತ್ ರಾಜ್ ಇಲಾಖೆಗೆ ಬೆಣ್ಣೆ ಎನ್ನುವ ವಿದ್ಯಮಾನ ಇಂದು ನಡೆದಿದೆ. ತಾ.ಪಂ. ಸಭಾಭವನದಲ್ಲಿ ಇಂದು ತಾಲೂಕಾ ಪಂಚಾಯತ್ ಕೆ.ಡಿ.ಪಿ. ಮತ್ತು ಸಾಮಾನ್ಯ ಸಭೆಗಳು ಒಟ್ಟೊಟ್ಟಿಗೇ ನಡೆದವು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರೊಬ್ಬರ ನಡವಳಿಕೆ ಹಿನ್ನೆಲೆಯಲ್ಲಿ ತಾ.ಪಂ.ಸದಸ್ಯ ನಾಶಿರ್ ಖಾನ್ ಆಕ್ಷೇಪಕ್ಕೆ ಸಹಮತ ವ್ಯಕ್ತಪಡಿಸದ ಸ್ಥಾಯೀ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮತ್ತು ವಿವೇಕ ಭಟ್ ಹಾಗೂ ನಾಶಿರ್ ಖಾನ್ ನಡುವೆ ವಾಗ್ವಾದ ನಡೆದು ಸಭೆ ಕೆಲವು ಕಾಲ ಬಿಸಿಯ ವಾತಾವರಣ ನಿರ್ಮಿಸಿತು.
ನಂತರ ಸದಸ್ಯ ವಿವೇಕ ಭಟ್ ತಮ್ಮ ಭಾಗದ ಕಂದಾಯ ನಿರೀಕ್ಷಕರೊಬ್ಬರ ಪ್ರಜಾಪೀಡನೆ ಬಗ್ಗೆ ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿ ಕೂಡಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ನಮ್ಮ ಸಹಕಾರಿ ಸಂಘದ ಜಾಗವೊಂದರ ನೋಂದಣಿಗೆ ಲಂಚಕ್ಕಾಗಿ ಕೆಲಸ ವಿಳಂಬ ಮಾಡಿದರು. ಎಂದರು.
