

ಸೈನಿಕರನ್ನು ಬಳಸಿ ರೈತರನ್ನು ನಿಯಂತ್ರಿಸುವ ದುರಾಡಳಿತವನ್ನು ಭಾರತ ಹಿಂದೆಂದೂ ಕಂಡಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ರೈತಸಂಘದ ಮುಖಂಡ ಮಂಜುನಾಥ ಗೌಡ ಸೈನಿಕರು, ರೈತರು ಈ ದೇಶದ ಆಸ್ತಿ ಇಂಥ ದೇಶದ ಸಂಪತ್ತಿನ ನಡುವೆ ಪರಸ್ಫರ ದ್ವೇಶ ಬಿತ್ತುವ ಮೂಲಕ ಕೇಂದ್ರಸರ್ಕಾರ ಬಿ.ಜೆ.ಪಿ.ಯ ಗುಪ್ತ ಕಾರ್ಯಸೂಚಿಯನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಪರವಾಗಿ ರಸ್ತೆ ತಡೆ ನಡೆಸುವ ಮೂಲಕ ಬೆಂಬಲ ಸೂಚಿಸಲು ಸಿದ್ಧಾಪುರದಲ್ಲಿ ನಡೆಸಿದ ಸಭೆ ಮತ್ತು ರಸ್ತೆ ತಡೆ ವೇಳೆ ಮಾತನಾಡಿದ ಗೌಡ ಈಗಿನ ಕೇಂದ್ರ- ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾರ್ಯಾಚರಣೆ ನಡೆಸುತ್ತಿವೆ. ಮಾಧ್ಯಮಗಳು, ವ್ಯವಸ್ಥೆಯನ್ನೇ ಖರೀದಿಸಿರುವ ಈಗಿನ ಸರ್ಕಾರಗಳು ಜನಸಾಮಾನ್ಯರ ಪ್ರತಿರೋಧ, ಪ್ರತಿಭಟನೆಯನ್ನು ಹತ್ತಿಕ್ಕುತ್ತಿವೆ. ರೈತ ವಿರೋಧಿ ಮಸೂದೆಗಳನ್ನು ಜಾರಿ ಮಾಡಿ ಉದ್ಯಮಿಗಳು,ಶ್ರೀಮಂತರ ಹಿತ ಕಾಪಾಡುತ್ತಿರುವ ಈ ಸರ್ಕಾರಗಳ ರೈತ ವಿರೋಧಿ ನೀತಿ ಅವರ ಸರ್ಕಾರಗಳನ್ನೇ ಬಲಿಪಡಿಯಲಿವೆ ಎಂದು ಎಚ್ಚರಿಸಿದರು.
ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆದ ರೈತಸಂಘ ಮತ್ತು ಹಸಿರುಸೇನೆಯ ಪದಾಧಿಕಾರಿಗಳ ನೇಮಕಾತಿ ಘೋಷಣೆ ನಂತರ ನಗರದ ತಿಮ್ಮಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಘೋಶಿಸಿತು. ಈ ರಸ್ತೆ ತಡೆ ಪ್ರತಿಭಟನೆ ವೇಳೆ ಮಾತನಾಡಿದ ರೈತ ಮುಖಂಡರು ರಾಜ್ಯ ಮತ್ತು ಕೇಂದ್ರಗಳ ಬಿ.ಜೆ.ಪಿ. ಸರ್ಕಾರಗಳ ರೈತವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.



