ರಾಜಕೀಯ ಪ್ರತಿಷ್ಠೆ, ಸ್ವಜಾತಿ ಪ್ರೇಮ, ರಾಜಕೀಯ ಸೇಡಿಗೆ ಸ್ಥಳೀಯ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದರೆ ಮುಟ್ಟಿ ನೋಡಿಕೊಳ್ಳುವಂಥ ಜೀವನದಲ್ಲಿ ಮರೆಯದ ಕೊಡುಗೆ ಕೊಡಬೇಕಾಗುತ್ತದೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಯವರಿಗೆ ಪರೋಕ್ಷವಾಗಿ ಎಚ್ಚರಿಸಿರುವ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಜಿ. ನಾಯ್ಕ ಹಣಜಿಬೈಲ್ ಸಮಯ, ಸಂದರ್ಭ ನೋಡಿ ತಮ್ಮ ಅಸಮಾಧಾನ ಹೊರ ಹಾಕುವ ಸುಳಿವು ನೀಡಿದ್ದಾರೆ.
ಇಂದು ಸಿದ್ಧಾಪುರ ಪ. ಪಂ. ನಲ್ಲಿ ಕರೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ. ಜಿ. ನಾ. ಶಿರಸಿ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ರಸ್ತೆ, ನೀರು, ಗಟಾರದಂಥ ಸಾರ್ವಜನಿಕ ಸಮಸ್ಯೆ ಕೇಳದ ಇಲ್ಲಿಯ ಆಡಳಿತ ಕೆಲವರ,ಕೆಲವು ಕೆಲಸಗಳಿಗೆ ಮಾತ್ರ ಆದ್ಯತೆ ನೀಡುವ ಪ್ರಮುಖರ ಆಸಕ್ತಿ ಏನು? ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಹೆಸರು ಹೇಳದೆ ಪರೋಕ್ಷ ವಾಗಿ ಆರೋಪ ಮಾಡಿದ ಅವರು ಪಟ್ಟಣ ಪಂಚಾಯತ್ ಆಸ್ತಿಯನ್ನು ಇತರರಿಗೆ ನೀಡುವ ತರಾತುರಿ ಇತರ ಕೆಲಸಗಳ ವಿಚಾರದಲ್ಲ್ಯಾಕೆ ಆಗುತ್ತಿಲ್ಲ ಎಂದು ಹರಿಹಾಯ್ದರು.
ನಗರದ ರವೀಂದ್ರನಗರ ಸ.ನಂ.267 ಬ2 (ಬಾಲಿಕೊಪ್ಪ) ಪ್ರದೇಶದ ಅರ್ಧ ಎಕರೆ ಭೂಮಿಯನ್ನು ಪ.ಪಂ. ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಂಜೂರು ಮಾಡಿರುವ ಜಿಲ್ಲಾಡಳಿತದ ತರಾತುರಿಯ ಕ್ರಮದ ಹಿಂದೆ ಕಾಣದ ಕೈ ಇದೆ. ಅದು ರಾಜಕೀಯ ಸೇಡು, ವೈಯಕ್ತಿಕ ಹಿತಾಸಕ್ತಿ ಪರವಾಗಿ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧವಿದೆ. ಈ ವಿಚಾರದಲ್ಲಿ ನ್ಯಾಯಾಂಗ ಹೋರಾಟ ಮತ್ತು ನೇರ ಪ್ರತಿಭಟನೆಗೆ ಸಿದ್ಧವಿದ್ದು ಸಂಬಂಧಿಸಿದವರ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಬಾಲಿಕೊಪ್ಪ ಸಮಾಜಮಂದಿರದ ಪ್ರದೇಶ ಸೇರಿದಂತೆ ನಗರದ ಸಾರ್ವಜನಿಕ ಆಸ್ತಿ, ಪಟ್ಟಣಪಂಚಾಯತ್ ಆಸ್ತಿ ವಿಚಾರದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ನ್ಯಾಯ ಒದಗಿಸಿದ್ದೇನೆ ಎಂದ ನಾಯ್ಕ ನಮಗೆ ಪರೋಕ್ಷ ಬೆದರಿಕೆ, ರಾಜಕೀಯ ಹೆದರಿಕೆ ಕೊಟ್ಟು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದರೆ ಅದಕ್ಕೂ ಸಿದ್ಧ ಆದರೆ ಪರಿಣಾಮ ಘೋರವಾಗಿರಲಿದೆ ಎಂದು ಎಚ್ಚರಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಪ.ಪಂ. ಆಸ್ತಿ, ಸಾರ್ವಜನಿಕ ಸ್ವತ್ತು ರಕ್ಷಣೆಗಾಗಿ ಹೋರಾಡಿ ಅನೇಕರ ವಿರೋಧ ಕಟ್ಟಿಕೊಂಡಿದ್ದೇನೆ ಈ ವಿಚಾರದಲ್ಲಿ ರಾಜಿ ಇಲ್ಲ, ಕೆಲವು ವಿಷಯಗಳಲ್ಲಿ ನಾನೆಷ್ಟು ಕಠಿಣ ಎಂದರೆ ಒಂದು ಕಾರಣಕ್ಕೆ ವರ್ಷಪೂರ್ತಿ ಶಿಕ್ಷಕರೊಂದಿಗೆ ಮಾತು ಬಿಟ್ಟ ವಿದ್ಯಾರ್ಥಿ ನಾನು, ಎನೂ ಇಲ್ಲದಿದ್ದಾಗಲೇ ಏನೇನೋ ಮಾಡಿದ್ದೇವೆ ಈಗ ತಲೆತಗ್ಗಿಸುವ ಪ್ರಶ್ನೆಯೇ ಇಲ್ಲ – ಕೆ.ಜಿ. ನಾಯ್ಕ
ಸಿದ್ಧಾಪುರ ನಗರದ ಬಾಲಿಕೊಪ್ಪ ಸಮಾಜಮಂದಿರದ ಪ.ಪಂ. ಆಸ್ತಿ ವಿಚಾರದಲ್ಲಿ ಹಿಂದೆ ಕಾಂಗ್ರೆಸ್ ವಿರೋಧ ಕಟ್ಟಿಕೊಂಡಿದ್ದ ಕೆ.ಜಿ.ನಾಯ್ಕ ಈಗ ಜಿಲ್ಲಾಡಳಿತ,ವಿಧಾನಸಭಾಅಧ್ಯಕ್ಷರ ವಿರೋಧ ಕಟ್ಟಿಕೊಳ್ಳುತಿದ್ದಾರೆ. ಈ ವಿಚಾರ ಸೇರಿದಂತೆ ಕೆ.ಜಿ.ನಾಯ್ಕರ ರಾಜಕೀಯ ನಡೆಗೆ ಸ್ಥಳಿಯ ಬಿ.ಜೆ.ಪಿ. ತಾಲೂಕು ಘಟಕ ಮತ್ತು ಪ.ಪಂ. ಸದಸ್ಯರು ಷರತ್ತುರಹಿತ ಬೆಂಬಲ ವ್ಯಕ್ತಪಡಿಸುತ್ತಿರುವುದು ವಿಶೇಶವಾಗಿದೆ.