ಮೌಲ್ಯಾಧಾರಿತ ರಾಜಕಾರಣದ ಹರಿಕಾರ ರಾಮಕೃಷ್ಣ ಹೆಗಡೆ ನೆನೆದು…

ರಾಷ್ಟ್ರ ರಾಜಕಾರಣದಲ್ಲಿ ಧ್ರುವ ತಾರೆಯಂತೆ ಮಿನುಗಿ, ಗ್ರಾಮೀಣ ಬದುಕಿಗೆ ಪ್ರಜಾಪ್ರಭುತ್ವದ ಬೇರುಗಳನ್ನು ತಂದು, ಪಂಚಾಯತ್ ವ್ಯವಸ್ಥೆಯಿಂದ ಅಮೂಲಾಗ್ರ ಬದಲಾವಣೆ ಮಾಡಿ, ದೀನದಲಿತರ ಕೈಗೆ ಅಧಿಕಾರ ನೀಡಲು ವಿಕೇಂದ್ರೀಕರಣದ ಮಂತ್ರ ಪಠಿಸಿದ ಮಹಾನ್ ಮಾನವತಾವಾದಿ ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆ ಅವರನ್ನು ಇಂದು ಪುಣ್ಯಸ್ಮರಣೆ ದಿನದ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಳ್ಳಬೇಕೆಂಬ ಹಂಬಲ ಅಕ್ಷರ ನಮನಕ್ಕೆ ಸಾಕ್ಷಿಯಾಯಿತು.

ಮೌಲ್ಯಾಧಾರಿತ ರಾಜಕಾರಣಕ್ಕೆ ಭಾಷ್ಯ ಬರೆದು ಜನತಂತ್ರ ವ್ಯವಸ್ಥೆಗೆ ದಿಕ್ಸೂಚಿ ಯಂತಿದ್ದ ಅವರ ಆಡಳಿತ ವೈಖರಿ ದೇಶದಲ್ಲಿಯೇ ವ್ಯಾಪಕ ಪ್ರಶಂಸೆ ವ್ಯಕ್ತವಾಗಿ ಸಂಚಲನ ಮೂಡಿಸಿದ್ದುಂಟು.ನನ್ನ ಸ್ಮೃತಿಪಟಲದಲ್ಲಿ ಉಳಿದಿರುವ ಹಲವು ವಿಚಾರಗಳನ್ನು ಹಂಚಿಕೊಳ್ಳಬೇಕೆಂಬ ನನ್ನ ತುಡಿತ ತೀವ್ರವಾಗಿ ಕಾಡಿದ್ದು ಅಂದಿನ ಬಾಗಲಕೋಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಷ್ಟ್ರೀಯ ನೇತಾರ ದಿವಂಗತ ರಾಮಕೃಷ್ಣ ಹೆಗಡೆ ಅವರ ಬಗ್ಗೆ ಬರೆಯಲು ಪ್ರೇರೇಪಿಸಿತು.ಕಳೆದ ಮೂವತ್ತು ವರ್ಷಗಳ ಹಿಂದೆ ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಿಂದ ಹೆಗ್ಡೆಯವರು ಸ್ಪರ್ಧೆ ಮಾಡಿದಾಗ ನಾವು ಕಾಲೇಜು ಓದುತ್ತಿದ್ದ ಕಾಲ ಅದು.ಅಂದು ಬಾಗಲಕೋಟ ನಗರದಲ್ಲಿ ಚುನಾವಣಾ ಅಭ್ಯರ್ಥಿಯಾಗಿ ಹೆಗಡೆಯವರು ನಾಮಪತ್ರ ಸಲ್ಲಿಸುವ ದಿನ ನಾನು ಕೂಡ ನಮ್ಮ ತಂದೆಯವರ ಜೊತೆಯಲ್ಲಿ ಸಾಕ್ಷಿಕರಿಸಿದ ನೆನಪು ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಸಂಖ್ಯಾತ ಜನಸಂದಣಿ ನೋಡಿ ಹಾಗೂ ಬಾಗಲಕೋಟ ಜಿಲ್ಲೆಯ ಜನತೆ ಅಭೂತಪೂರ್ವ ಸ್ವಾಗತವನ್ನು ಕೋರಿದ್ದು ನೋಡಿದರೆ ಅವರ ಆಯ್ಕೆ ಖಚಿತ ಎನ್ನುವ ಜನರ ಮಾತು ಎಲ್ಲೆಡೆ ಕೇಳಿ ಬಂದಿತ್ತು .ಆದರೆ ಆ ಉತ್ಸಾಹ ಚುನಾವಣೆ ಸಮೀಪಿಸುತ್ತಿದ್ದಂತೆ ನಿಷ್ಕ್ರಿಯವಾಗಿ ಜನತೆ ಅವರನ್ನು ಸೋಲಿಸುವುದರ ಮೂಲಕ ಪರ್ಯಾವಸಾನವಾದದ್ದು ನಿಜಕ್ಕೂ ಖೇದಕರ ಅನ್ನದೆ ವಿಧಿಯಿಲ್ಲ.

ದೃಶ್ಯ ಮಾಧ್ಯಮಗಳು ಇಲ್ಲದ ಕಾಲದಲ್ಲಿ ದೇಶದೆಲ್ಲೆಡೆ ಹೆಗಡೆಯವರನ್ನು ಸೋಲಿಸಿದ ವ್ಯಕ್ತಿ ಸಿದ್ದು ನ್ಯಾಮಗೌಡರು ದಿಢೀರನೇ ರಾಜಕೀಯ ಉತ್ತುಂಗಕ್ಕೇರಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರಿಗೆ ಬಾಗಲಕೋಟ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿತ್ತು.ತಮ್ಮ ರಾಜಕಾರಣದುದ್ದಕ್ಕೂ ರಾಜಕೀಯ ವೈರಿಯಾಗಿರುವ ಹೆಗಡೆಯವರನ್ನು ಸೋಲಿಸಬೇಕೆಂಬ ಉದ್ದೇಶದಿಂದಲೇ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಬಾಗಲಕೋಟ ಕ್ಷೇತ್ರದಲ್ಲಿಯೇ ಬಿಡಾರ ಹೂಡಿ, ಚುನಾವಣೆಯ ಎಲ್ಲ ತಂತ್ರಗಳನ್ನು ಬಳಸಿ, ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಮಾಡಿದ್ದನ್ನು ಕ್ಷೇತ್ರದ ಜನತೆ ಮರೆತಿಲ್ಲ.ಹೆಗಡೆಯವರು ಆಯ್ಕೆಯಾದರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಹಾಗೂ ರಾಷ್ಟ್ರ ನಾಯಕನೆನಿಸಿರುವ ಅವರನ್ನು ರಾಜಕಾರಣದಲ್ಲಿ ಇರುವ ಎಲ್ಲ ವಾಮಮಾರ್ಗಗಳನ್ನು ಬಳಸಿಕೊಂಡು ಅವರನ್ನು ಸೋಲಿಸುವದರ ಮುಖಾಂತರ ಐತಿಹಾಸಿಕ ದಾಖಲೆಗೆ ಕಾರಣವಾಗಿದ್ದಲ್ಲದೆ ನಮ್ಮ ಭಾಗದ ಅಭಿವೃದ್ಧಿಯ ದೃಷ್ಟಿಗೆ ಮರಣ ಶಾಸನ ಬರೆದಂತಿತ್ತು.

ರಾಷ್ಟ್ರೀಯ ನೇತಾರನಾಗಿ ಹೆಗಡೆಯವರು ಅತ್ಯಂತ ಸುರಕ್ಷಿತ ಮತಕ್ಷೇತ್ರ ಎಂದು ತಿಳಿದು ಬಾಗಲಕೋಟ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಮ್ಮ ರಾಜಕೀಯ ಬದುಕಿನಲ್ಲಿ ಹಿನ್ನಡೆ ಅನುಭವಿಸುವಂತಾಗಿದ್ದು ಅತ್ಯಂತ ನೋವಿನ ಸಂಗತಿ. ದಿವಂಗತ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಅವರ ಅನುಕಂಪದ ಅಲೆ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಹೆಗಡೆಯವರಿಗೆ ಬಾಗಲಕೋಟ ಮತಕ್ಷೇತ್ರ ಮುಳುವಾಗಿ ಪರಿಣಮಿಸಿದ್ದು ದುರದೃಷ್ಟಕರ. ಜಾತಿ ಬಲವಿಲ್ಲದೆ, ಕೃತಕ ಇಮೇಜ್ ಸೃಷ್ಟಿಸುವ ಗೋಜಿಗೆ ಹೋಗದೆ, ಕೇವಲ ರಾಜಕೀಯ ಜಾಣ್ಮೆ ಮತ್ತು ಆಡಳಿತಾತ್ಮಕ ಕೈಚಳಕದಿಂದಲೇ ರಾಜಕೀಯ ಸವಾಲುಗಳನ್ನು ಮಾತ್ರವಲ್ಲ, ಚುನಾವಣೆಯನ್ನು ಜಯಿಸಬಹುದು ಎಂಬುದಕ್ಕೆ ಹೆಗಡೆ ಅವರ ಕಾಲಘಟ್ಟ ಒಂದು ಉತ್ತಮ ಉದಾಹರಣೆಯಾಗಬಲ್ಲದು.ರಾಮಕೃಷ್ಣ ಹೆಗಡೆ ಅವರ ಬಗ್ಗೆ ಬರೆಯಬೇಕೆಂದರೆ ಅದೊಂದು ನನ್ನ ದೃಷ್ಟಿಯಲ್ಲಿ ಸುಲಭವಾದ ಕೆಲಸವಲ್ಲ ಎಂಬುದು ಸ್ಮೃತಿ ಪಟಲದಲ್ಲಿ ಬಂದರೂ ರಾಜ್ಯ ರಾಜಕಾರಣದಲ್ಲಿ ಮೂರುವರೆ ದಶಕಗಳ ಹಿಂದೆ ನಡೆದ ರಾಜ್ಯಭಾರ, ಕರ್ನಾಟಕದ ರಾಜಕಾರಣ ಇತಿಹಾಸದ ಪುಟಗಳಲ್ಲಿ ಸೇರುವಂಥಾದ್ದು ಎಂಬುದು ಉತ್ಪ್ರೇಕ್ಷೆ ಮಾತಲ್ಲ.ಲೋಕಸಭಾ ಕ್ಷೇತ್ರದ ಚುನಾವಣೆಯ ಸಾರಥ್ಯ ವಹಿಸಿಕೊಂಡಿದ್ದ ಅವರ ಪರಮಾಪ್ತ ಡಾ ಎಂಪಿ ನಾಡಗೌಡರು ಹೆಗಡೆಯವರ ಮಾರ್ಗದರ್ಶನದಲ್ಲಿ ನಮ್ಮ ಭಾಗದ ಪಳಗಿದ ನಾಯಕರಾಗಿದ್ದರು.ಅಷ್ಟೇ ಅಲ್ಲ ತಮ್ಮ ರಾಜಕೀಯ ಬದುಕಿಗೆ ಶ್ರೀಕಾರ ಹಾಕಿದ ಗುರುಗಳೆಂದು ಭಾವಿಸಿದ ಜಿಲ್ಲೆಯ ಹಲವಾರು ಯುವನಾಯಕರು ಮುಂಚೂಣಿಗೆ ಬಂದಿದ್ದವರಲ್ಲಿ ಈಗಿನ ಸರ್ಕಾರದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ್ ಅವರೂ ಒಬ್ಬರು.ಅವರು ರಾಜ್ಯ ರಾಜಕಾರಣದಲ್ಲಿ ಉತ್ತುಂಗಕ್ಕೇರಿ ಸ್ಥಾನಮಾನ ಪಡೆದ ನಂತರವೂ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳುತ್ತಾರೆ ಎಂದು ರಾಜ್ಯದ ಜನತೆ ಎಂದೂ ಭಾವಿಸಿಲ್ಲ.ಹಾಗಾಗಿ ಕಷ್ಟಕಾಲದಲ್ಲಿ ಬೆಳೆಸಿದವರನ್ನು ಸ್ಮರಿಸಿಕೊಳ್ಳುವುದು ಈಗಿನ ರಾಜಕಾರಣದಲ್ಲಿಲ್ಲ ಎಂಬುದನ್ನು ಮಾತ್ರ ವಿಷಾದದಿಂದ ಹೇಳಬೇಕಾಗಿದೆ.

ಲೋಕಸಭಾ ಚುನಾವಣೆಗೆ ಅವರು ಪ್ರಚಾರಾರ್ಥ ನಮ್ಮೂರು ಕರಡಿಗೆ ಬಂದಾಗ ಸಾಯಂಕಾಲ ಸೂರ್ಯಾಸ್ತದ ಸಮಯವಾಗಿತ್ತು.ಅಂದು ಪ್ರಚಾರ ಮಾಡಲು ಅವರು ತೆರೆದ ಬಸ್ಸಿನಲ್ಲಿ ಆಗಮಿಸಿ ಭಾಷಣ ಮಾಡುವ, ಮೃದು ಮಾತಿನ ಶೈಲಿಗೆ ಜನತೆ ಮೋಡಿ ಹೋಗಿದ್ದರು.ಅವರನ್ನು ನೋಡಲು ಗ್ರಾಮೀಣ ಪ್ರದೇಶದ ಜನತೆ ಕಾತರದಿಂದ ಹಾತೊರೆದು ಹಬ್ಬದ ಸಡಗರದಂತೆ ಮಂಗಳ ವಾದ್ಯಗಳ ಮುಖಾಂತರ ಅವರನ್ನು ಬರಮಾಡಿಕೊಂಡ ರೀತಿ ಇಂದಿನ ಯಾವ ರಾಜಕಾರಣಿಗೂ ಅಂಥ ಸೌಭಾಗ್ಯ ಸಿಗುವುದಿಲ್ಲ.ನಮ್ಮೂರಿನಲ್ಲಿ ಕೇವಲ ಅರ್ಧ ಗಂಟೆಯಲ್ಲಿ ತಮ್ಮ ಮಾತಿನ ಹೂರಣದಲ್ಲಿಯೇ ಜನತೆಗೆ ಅದಮ್ಯ ಉತ್ಸಾಹ ತುಂಬಿದ್ದನ್ನು ನಾವೆಂದಿಗೂ ಮರೆಯುವಂತಿಲ್ಲ.ನಮ್ಮೂರಿನ ರಾಮಕೃಷ್ಣ ಹೆಗಡೆಯವರ ಕಟ್ಟಾ ಅಭಿಮಾನಿಗಳಾಗಿದ್ದ ಶಾಂತಕುಮಾರ್ ಕರಡಿ, ರೈತಮುಖಂಡ ದಿ. ಮಲಕಾಜಗೌಡ್ರು,ಮಹೇಶ್ ಗಣಾಚಾರಿ ಅಷ್ಟೇ ಅಲ್ಲ ಹುನಗುಂದ ತಾಲ್ಲೂಕಿನ ಹಿರಿಯ ನಾಯಕರಾದ ಬಸವರಾಜ ಕಡಪಟ್ಟಿ,ನಮ್ಮೂರಿನ ಅಂದಿನ ಜನತಾ ದಳದ ಮುಂಚೂಣಿ ನಾಯಕರಾದ ಕರವೀರಯ್ಯ ಹಾಲಗಂಗಾಧರಮಠ,ಕೃಷ್ಣಾಜಿ ಕುಲಕರ್ಣಿ,ಹೆಗ್ಡೆಯವರ ಕಟ್ಟಾ ಅನುಯಾಯಿಗಳಾದ ಗಂಗಯ್ಯ ತೆಗ್ಗಿನಮಠ ವಕೀಲರು,ಮಹಾಂತೇಶ ಅವಾರಿ, ಇಮಾಮಸಾಬ್ ಗಡೇದ,ಅಲ್ಲಿಸಾಬ್ ತಾಳಿಕೋಟಿ,ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಜಾಕೀರ್ ಹುಸೇನ್ ತಾಳಿಕೋಟಿ,ಶಿವಯೋಗಿ ,ಎ ಆರ್ ನಡುವಿನಮನಿ,ಸಂಗಣ್ಣ ಚಿನಿವಾಲ್,ಈಗಿನ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ವಿಜಯಮಹಾಂತೇಶ ಗದ್ದನಕೇರಿ,ಮಲ್ಲಣ್ಣ ಹವಾಲ್ದಾರ್ ಮುಂತಾದವರ ಅಮೋಘ ಸೇವೆಯೂ ಸ್ಮರಣೀಯವಾದದ್ದು ಎಂದು ಹೇಳಲಿಕ್ಕೆ ಹೆಮ್ಮೆ ಎನಿಸುತ್ತದೆ.ಹೆಗಡೆಯವರ ಮಾತಿನ ಕೊನೆಗಳಿಗೆಯಲ್ಲಿ ಅಬ್ಬಾ.. “ಪರಮಾತ್ಮ” ಎಂಬ ಉದ್ಗಾರ ತೆಗೆದ ಮಲಕಾಜಗೌಡರ ಕಂಠಸಿರಿ ಅಂದು ಜನಸಂದಣಿಯ ಮಧ್ಯೆ ಮುಕುಟಮಣಿಯಂತಿತ್ತು.ಹೆಗಡೆ ಅವರ ಮಾತಿನ ಮೋಡಿಗೆ ಗ್ರಾಮೀಣ ಜನತೆ ತಮ್ಮ ಅಭಿಮಾನದ ಸಿರಿಯಲ್ಲಿ ಸಂಭ್ರಮದಿಂದ ಮಿಂದಿದ್ದನ್ನು ಕಣ್ಣಾರೆ ಕಂಡ ನನಗೆ ಅಂಥ ಧೀಮಂತ ನಾಯಕರನ್ನು ಕಂಡದ್ದೇ ಜಗತ್ತಿನ ಎಂಟನೇ ಅದ್ಭುತವೆನಿಸುವಂತಿತ್ತು.ಹೀಗಾಗಿ ಉತ್ತರ ಕರ್ನಾಟಕದ ಜನತೆ ಹೆಗಡೆಯವರ ಮೇಲಿಟ್ಟ ಅಭಿಮಾನ ಎಂಥಾದ್ದು ಎಂಬುದು ವೇದ್ಯವಾಗುತ್ತದೆ.ಮೊದಲ ಬಾರಿ ರಾಜ್ಯದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಕ್ರಾಂತಿಕಾರಕ ಹೆಜ್ಜೆಯಿಟ್ಟು ಮಾಡಿದ ಸುಧಾರಣೆಗಳು ಹತ್ತು ಹಲವಾರು. ಅದಕ್ಕಾಗಿಯೇ ರಾಮಕೃಷ್ಣ ಹೆಗಡೆ ಅವರ ಕಾಲದ ರಾಜಕೀಯ ನೆನಪುಗಳು ಇವತ್ತಿಗೂ ಮನಸ್ಸಿನಲ್ಲಿ ಹಸಿರಾಗಿ ಉಳಿದುಕೊಂಡಿದೆ .ಆ ಕಾಲದಲ್ಲಿ ಹೆಗಡೆ ಅಂದ್ರೆ ಸಾಕು ಅವರ ಭಾಷಣ ಕೇಳಲು ತುದಿಗಾಲ ಮೇಲೆ ನಿಲ್ಲುವ ಕಾಲ ಅದಾಗಿತ್ತು .ಹಳ್ಳಿಯಲ್ಲಿ ಯಾರಾದರೂ ರಾಜಕೀಯ ಮಾತನಾಡುವ ಚುರುಕು ಬುದ್ಧಿಯವರಿಗೆ “ಹೆಗ್ಡೆ ಅವರ ತಲೆ “ಎಂಬ ನಾಮಧೇಯ ಸವೆ೯ ಸಾಮಾನ್ಯವಾಗಿತ್ತು.ಆ ಕಾಲದ ರಾಜಕೀಯ ಏರಿಳಿತಗಳ ವಿಚಾರ ಏನೇ ಇರಲಿ ಅವರ ಆಡಳಿತದ ಛಾಪನ್ನು ಮಾತ್ರ ಅಳಿಸಲು ಸಾಧ್ಯವಿಲ್ಲ. ಅವರ ಕುಡಿ ನೋಟದಲ್ಲಿಯೇ ಒಂಥರಾ ಸೆಳೆತವಿತ್ತು.ಕಿರುನಗೆ,ಮನಮೋಹಕ ನೋಟ,ಕುರುಚಲು ಗಡ್ಡ ,ನಿಧಾನಗತಿಯಾದರೂ ಖಚಿತವಾದ ಮಾತು, ಒಂದು ವಿಷಯ ಮಾತನಾಡುವ ಹೊತ್ತಿಗೆ ಮನಸ್ಸಿನಲ್ಲಿ ಹತ್ತಾರು ವಿಚಾರ ಹಲವಾರು ನೋಟಗಳು ಹಾದುಹೋಗುವ ವೇಗ,ಅದೇ ಕಾರಣಕ್ಕೆ ಇರಬೇಕು ಒಮ್ಮೆ ಹೆಗಡೆ ಅವರ ಸೆಳೆತಕ್ಕೆ ಸಿಕ್ಕ ಕಾರ್ಯಕರ್ತರು ಮುಂದೆ ಸದಾ ಅವರ ಅಭಿಮಾನಿಗಳಾಗುತ್ತಿದ್ದರು.ಅವರು ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಮುತ್ಸದ್ದಿ ಅಂತ ಗುರುತಿಸಿಕೊಂಡದ್ದು ಗಮನ ಸೆಳೆಯುವ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದು ಈಗ ಇತಿಹಾಸ .

ಆನಂತರ ಎದುರಾದ ರಾಜಕೀಯ ಸ್ಥಿತ್ಯಂತರಗಳನ್ನು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದು,ಇವೆಲ್ಲವೂ ಅವರ ಸ್ವ ಸಾಮರ್ಥ್ಯ ಬುದ್ಧಿವಂತಿಕೆಯಿಂದ ಮಾತ್ರ .ಅವರಲ್ಲಿನ ಅದಮ್ಯ ಉತ್ಸಾಹ, ಆತ್ಮವಿಶ್ವಾಸ, ಅಗುಹೋಗುಗಳನ್ನು ಮುಂಚಿತವಾಗಿ ಗ್ರಹಿಸುವ ತಿ಼ೕಕ್ಷಮತಿಯನ್ನು ಬಿಟ್ಟರೆ ಸಾಂಪ್ರದಾಯಿಕವಾಗಿ ರಾಜಕಾರಣಗಳಿಗಿರುವ ಬೇರಾವ ಹಿನ್ನೆಲೆ ಮುನ್ನೆಲೆ ಅವರಿಗಿರಲಿಲ್ಲ.ಆದರೂ ಒಬ್ಬ ರಾಜಕಾರಣಿಯಾಗಿ ಹೆಗಡೆಯವರನ್ನು ಈಗಲೂ ಜನತೆ ನೆನೆಯುವುದು ಅಂದು ಅವರು ನಡೆಸಿದ ಆಡಳಿತ ವೈಖರಿ, ಮೂಡಿಸಿದ ಹೊಸ ಸಂಚಲನ, ಆಡಳಿತಾತ್ಮಕವಾಗಿ ತೆಗೆದುಕೊಂಡ ಕೆಲ ಕ್ರಾಂತಿಕಾರಕ ಹೆಜ್ಜೆಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ .ಅಂದಿನ ಕಾಲದಲ್ಲಿ ಲೋಕಪಾಲ್ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ಹೆಗಡೆಯವರು ಲೋಕಾಯುಕ್ತ ಸಂಸ್ಥೆ ಸ್ಥಾಪಿಸುವುದರ ಮೂಲಕ ಪಾರದರ್ಶಕ ಆಡಳಿತ ನೀಡಬೇಕೆಂಬ ಸಸಿಗೆ ನೀರೆರದವರು. ಗ್ರಾಮರಾಜ್ಯ, ರಾಮರಾಜ್ಯ ಆಡಳಿತದ ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಜನರ ಕೈಗೆ ಅಧಿಕಾರ ಕೊಡುವುದು ಅವರ ಮೂಲ ಮಂತ್ರವಾಗಿತ್ತು. ಕರ್ನಾಟಕದಲ್ಲಿ ಪಂಚಾಯತ್ ಕಾಯ್ದೆಗೆ ತಿದ್ದುಪಡಿ ತಂದು, ಅಮೂಲಾಗ್ರ ಬದಲಾವಣೆ ಮಾಡಿದ್ದನ್ನು ಕೇಳಿದ ಅಂದಿನ ಪ್ರಧಾನಿ ದಿ ರಾಜೀವ್ ಗಾಂಧಿಯವರು ಅವರ ಸಲಹೆಗಾರರಾದ ಸ್ಯಾಮ್ ಪಿತ್ರೋಡಾ ಹಾಗೂ ಅವರ ಅಧ್ಯಯನ ಸಮಿತಿಯನ್ನು ಕಳಿಸಿ ಪಂಚಾಯತ್ ರಾಜ್ಯದ ಮೂಲ ಪರಿಕಲ್ಪನೆಯನ್ನು ದೇಶದಾದ್ಯಂತ ವಿಸ್ತರಿಸಬೇಕೆಂಬ ಅವರ ಕನಸಿಗೆ ಇಂಬು ಕೊಟ್ಟಿತ್ತು.

ಮೊದಲ ಬಾರಿ ಜಿಲ್ಲಾ ಪರಿಷತ್ತು ಅಸ್ತಿತ್ವಕ್ಕೆ ಬಂದಾಗ ಉಂಟಾದ ಸಂಚಲನವೇ ಬೇರೆ. ಹೆಗಡೆ ಅವರ ಭಾಷಣ ಕೇಳಲು ರಾಜ್ಯದುದ್ದಕ್ಕೂ ಜನರು ದಿನಗಟ್ಟಲೆ ಕಾಯುತ್ತಿದ್ದರು. ಜನಪರ ಕಾರ್ಯಕ್ರಮಗಳು ಮಾತ್ರವಲ್ಲ ಒಬ್ಬ ನಿಜವಾದ ಜನನಾಯಕನಲ್ಲಿರಬೇಕಾದ ಎಲ್ಲ ಸಾತ್ವಿಕ ಗುಣಗಳು ಹೆಗಡೆ ಅವರಲ್ಲಿದ್ದವು.ಒಬ್ಬ ನಾಯಕ ಜಯಶೀಲರಾಗುವುದು ತಾನೊಬ್ಬ ಕೆಲಸ ಮಾಡುವುದರಿಂದಲ್ಲ,ತನ್ನ ಹಾಗೇ ಕೆಲಸ ಮಾಡುವವರ ಪಡೆ ಕಟ್ಟುವುದರಿಂದ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಹೆಗಡೆಯವರು ಹೇಳದೇ ಮಾಡಿ ತೋರಿಸಿದ್ದರು.ಇಂಥ ಕಾಯ೯ದಿಂದಲೇ ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಮಾರ್ಗದರ್ಶನ ಮಾಡಿ ಬೆಳೆಸಿದ ರೀತಿ ಇಂದು ವಿಜ್ರಂಭಿಸುವ ಎಲ್ಲ ನಾಯಕ ಮಣಿಗಳು ಅವರ ಗರಡಿಯಲ್ಲಿ ಪಳಗಿದವರೇ. ಕೊನೆಯದಾಗಿ ಒಂದು ಮಾತು ಹೆಗಡೆಯವರು ಹೇಗೆ ಬದುಕಿದ್ದರು ಎಂಬುದಕ್ಕೆ ಸಾಕ್ಷಿಯಂತಿದೆ .ಅವರು ಕೊನೆಗಳಿಗೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದಾಗ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಊರಿನಲ್ಲಿರುವ ತೋಟವನ್ನು ಮಾರಾಟ ಮಾಡಲು ಮುಂದಾದಾಗ ಆಗ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮಾಡಿ ಸಮಕಾಲೀನ ರಾಜಕಾರಣದಲ್ಲಿ ಆದರ್ಶ ಮೆರೆದರು.

ಎಸ್ಎಂ ಕೃಷ್ಣ ಮತ್ತು ಹೆಗಡೆ ವಿಭಿನ್ನ ಪಕ್ಷಗಳಲ್ಲಿದ್ದು ಸಕ್ರಿಯ ರಾಜಕಾರಣದಲ್ಲಿದ್ದರೂ ವ್ಯಕ್ತಿಗತವಾಗಿ ಹೆಗಡೆಯವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಇಟ್ಟುಕೊಂಡವರಾಗಿದ್ದರು.ಅವರು ನಿಧನರಾದಾಗ ಕೃಷ್ಣ ಅವರು ತೋರಿದ ಕಾಳಜಿ,ಒಬ್ಬ ರಾಷ್ಟ್ರನಾಯಕನಿಗೆ ಸಲ್ಲಬೇಕಾದ ಎಲ್ಲ ಗೌರವವನ್ನು ಘನ ಸರ್ಕಾರದಿಂದ ನೀಡಿದ ಸಂದರ್ಭವನ್ನು ಮರೆಯಲಾಗದು.ಧೀಮಂತ ರಾಷ್ಟ್ರನಾಯಕ ಅಸ್ತಂಗತರಾಗಿ ೧೭ ವರ್ಷ ಕಳೆದವು.ಒಬ್ಬ ರಾಷ್ಟ್ರನೇತಾರನ ಬಗ್ಗೆ ರಾಜ್ಯವೂ ಸೇರಿದಂತೆ ದೇಶದಲ್ಲಿ ಅವರ ತತ್ವ ಸಿದ್ಧಾಂತಗಳು ಹಾಗೂ ಅವರ ಬದುಕಿನ ಆದರ್ಶಗಳು ನಮ್ಮೆಲ್ಲರಿಗೆ ಸ್ಫೂರ್ತಿ ತುಂಬುವಂತಾಗಬೇಕು.ಕರ್ನಾಟಕದ ಕಣ್ಮಣಿಯಾಗಿ ದೇಶಾದ್ಯಂತ ಬೆಳಗಿದ ಹೆಗಡೆ ಅವರ ಬದುಕು ತೆರೆದ ಪುಸ್ತಕದಂತೆ. ಜಾತಿ ಹಾಗೂ ಕುಟುಂಬ ರಾಜಕಾರಣವೇ ಪ್ರಮುಖ ಅಜೆಂಡಾವಾಗಿರುವ ಇಂದಿನ ರಾಜಕಾರಣಿಗಳಿಗೆ ಅವರ ತತ್ತ್ವ ,ಸಿದ್ಧಾಂತ ಹಾಗೂ ಬದುಕಿನ ಪರಿ ಎಚ್ಚರಿಕೆ ಗಂಟೆಯೂ ಹೌದು.ಅವರ ಪುಣ್ಯಸ್ಮರಣೆ ನಿಮಿತ್ಯವಾಗಿ ಬರಹ ಸುದೀರ್ಘವಾದರೂ ರಾಷ್ಟ್ರನಾಯಕನ ಗೌರವ ಸಮರ್ಪಣೆಗಾಗಿ ಪ್ರಸ್ತುತ ಸಂದರ್ಭದಲ್ಲಿ ಭಾವಪೂರ್ಣ ನುಡಿನಮನ ಸಲ್ಲಿಸಬೇಕೆಂಬ ನನ್ನ ಹಂಬಲ ಹೃದಯಾಂತರಾಳದ್ದು.

-ಮಲ್ಲಿಕಾರ್ಜುನ್ ಕರಡಿ ಹುನಗುಂದ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *