

ಎಸ್. ನಿತ್ಯಾನಂದ ಗೌಡ ಇಂದಿನ ಹಾಗೂ ಈ ತಿಂಗಳ ಹೆಚ್ಚು ಪ್ರಚಾರದ ವ್ಯಕ್ತಿ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವಿಭಾಗದ ಸಿದ್ಧಾಪುರ ಠಾಣೆಯ ಉಪ ನಿರೀಕ್ಷಕರಾಗಿದ್ದ ಇವರು ಉತ್ತಮ ಹೆಸರು ಮಾಡಿ ನಂತರ ಕಳಂಕಿತರಾಗಿ ಇಲ್ಲಿಂದ ವರ್ಗಾವಣೆಯಾಗಿದ್ದರು. ಇವರನ್ನು ಇಲ್ಲಿಂದ ಎತ್ತಂಗಡಿ ಮಾಡಲು ಅನೇಕ ಸಂಘಟನೆಗಳು,ವ್ಯಕ್ತಿಗಳೂ ಪ್ರಯತ್ನಿಸಿದ್ದಾರಾದರೂ ಅದರ ಹಿಂದಿನ ಕಾರಣ ಬಹಳಷ್ಟಿದ್ದವು. ಆದರೆ ಇಂದು ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ದಲಿತ ಮುಖಂಡ ಎಚ್.ಕೆ.ಶಿವಾನಂದ, ವಿಕ್ಟರ್ ಫರ್ನಾಂಡೀಸ್ ಹಾಗೂ ವೀರಭದ್ರನಾಯ್ಕ ಸ್ಥಳಿಯರು, ಜನತೆಯ ವಿರೋಧದಿಂದ ವರ್ಗಾವಣೆಯಾಗಿದ್ದ psi ನಿತ್ಯಾನಂದ ಗೌಡ ಮರಳಿ ಬಂದರೆ ಅವರ ವಿರುದ್ಧ ಮತ್ತು ಅವರನ್ನು ಬರಲು ಅವಕಾಶ ಮಾಡಿದ ಸ್ಥಳಿಯರ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಹೊರಗಿದ್ದ ಪ್ರೇಕ್ಷಕರ ಗ್ಯಾಲರಿಯಿಂದ ಮಾತನಾಡಿದ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಬ್ರಷ್ಟ-ಜನವಿರೋಧಿ ನಿತ್ಯಾನಂದ ಗೌಡರನ್ನು ಸಿದ್ಧಾಪುರಕ್ಕೆ ಕರೆತರುವ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಇದರ ಸೂತ್ರದಾರ ಯಾರೆಂಬುದೂ ನಮಗೆ ಗೊತ್ತು. ಇಂಥ ರಾಜಕಾರಣ ಹೆಚ್ಚುದಿವಸ ನಡೆಯುವುದಿಲ್ಲ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷರಿಗೇ ಪರೋಕ್ಷ ಟಾಂಗ್ ನೀಡಿದರು.
ಈ ಬಗ್ಗೆ ವಿವರಿಸುತ್ತಾ… ಹಿಂದೆ ನಿತ್ಯಾನಂದ ಗೌಡ ಸಿದ್ಧಾಪುರದಲ್ಲಿದ್ದಾಗ ತಮ್ಮ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಷಡ್ಯಂತ್ರದಿಂದ ಜಿಲ್ಲಾಧಿಕಾರಿಗಳ ಅನುಮತಿ ಪಡೆದಿದ್ದರು. ನಂತರ ಹಿರಿಯ ಅಧಿಕಾರಿಗಳು ಆ ದಾಖಲೆಯನ್ನೇ ಹರಿದು ಹಾಕಿದ್ದರು. ಜನರನ್ನು ಸುಲಿಯುವುದು, ಸ್ತ್ರೀಯರನ್ನು ಪೀಡಿಸುವುದು ಮಾಡಿ ರಾಜ್ಯದ ಯಾವ ಪೊಲೀಸ್ ಠಾಣೆಗೂ ನಿತ್ಯಾನಂದ ಗೌಡ ಬೇಡ ಎಂದು ಸಾರ್ವಜನಿಕ ಅಭಿಪ್ರಾಯ ಇರುವಾಗ ಸ್ಥಳಿಯ ಪ್ರಮುಖರೊಬ್ಬರು ಅವರನ್ನೇ ಮತ್ತೆ ಕರೆತರುವ ಹಿಂದೆ ಅವರ ಲೆಕ್ಕಾಚಾರ, ಲಾಭದ ವ್ಯವಹಾರ ಕೂಡಾ ಇರಬಹುದು ಆದರೆ ಮತ್ತೆ ನಿತ್ಯಾನಂದ ಗೌಡ ಸಿದ್ದಾಪುರಕ್ಕೆ ಬಂದರೆ ಅವರ ವಿರುದ್ಧ, ಅವರನ್ನು ಕರೆತರುವವರ ವಿರುದ್ಧ ಕೂಡಾ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
