

ಹಿರಿಯ ನ್ಯಾಯವಾದಿ ಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಕುಮಟಾದಲ್ಲಿ ಮೂರು ಕುಟುಂಬಗಳು ನ್ಯಾಯವಾದಿಗಳ ಕುಟುಂಬ ಎಂದೇ ಪ್ರಸಿದ್ಧಿ ಪಡೆದಿತ್ತು.ಅದರಲ್ಲಿ ದಿವಂಗತ ವೆಂಕಟೇಶ ಶಾನಭಾಗರ ಕುಟುಂಬ, ಶಾಸ್ತ್ರೀ ಕುಟುಂಬ, ಹಾಗೂ ಇಂದು ಮೃತರಾದ ಎಚ್. ವಿ.ಹೆಗಡೆ. ಕುಟುಂಬ. ನಾನು ಎಚ್.ವಿ.ಹೆಗಡೆಯವರನ್ನು ನೋಡಿದ್ದು, ಅವರು ಕುರಿತು ಅವರು ಕುಟುಂಬದ ಕುರಿತು ಕೇಳಿದ್ದು.ನನ್ನ ತಂದೆ ಯವರಿಂದ ಮತ್ತು ದೊಡ್ಡಪ್ಪನವರಿಂದ . ಕಾರಣ ಇಷ್ಟೇ. ಹಿಂದೆ ಕೆಲವು ಕುಟುಂಬಕ್ಕೆ ಕುಲಪುರೋಹಿತರು ಇರುವುದನ್ನು ಕೇಳಿರಬಹುದು. ನಮ್ಮಕೂಜಳ್ಳಿಯ ಕುಪ್ಪನೇರಿ ಕುಟುಂಬಕ್ಕೆ ಎಚ್. ವಿ.ಹೆಗಡೆಯವರು ಹಾಗೂ ಅವರ ತಂದೆಯವರು ವಿ.ಟಿ. ಹೆಗಡೆ (ಅವರಿಗೆ ಮೂರೂರು ಹೆಗಡೆ ವಕೀಲರು ಅಂತಾ ಕರೆಯುತ್ತಿದ್ದರಂತೆ )ಖಾಯಂ ವಕೀಲರು . ವಕೀಲರಿಗೂ ನಮ್ಮ ಕುಟುಂಬದ ಬಹುತೇಕರ ಹೆಸರು ಚಿರಪರಿಚಿತ ವಾಗಿತ್ತು. ಇವರು ಖಾಯಂ ನಮ್ಮ ವಕೀಲರು ಆಗಿರಲೂ ಕಾರಣ ವೃತ್ತಿಪರತೆ, ಕಕ್ಷೀದಾರರ ಪರ ನಿಲ್ಲುವ ಬದ್ಧತೆ. ಅಪಾರವಾದ ಕಾನೂನಿನ ಜ್ಞಾನ.ಇವರ ಗುಣಗಳು ಈ ರೀತಿ ಇದ್ದವಂತೆ. ಎಂದೂ ಇವರು ಫೀ ಗಾಗಿ ಒತ್ತಡ ಮಾಡುವುದಿಲ್ಲವಾಗಿತ್ತಂತೆ. ಹಣವನ್ನು ಆರಂಭದಲ್ಲಿ ತೆಗೆದುಕೊಂಡು ನಂತರ ಕೇಸು ಮುಗಿದ ಮೇಲೆ ಉಳಿದ ಖರ್ಚು ತೆಗೆದು ಕೊಳ್ಳುವುದು. ಅದೂ ಅವರ ಆಫೀಸಿನಲ್ಲಿ ಮಾತ್ರ ಹಣ ತೆಗೆದು ಕೊಳ್ಳುವುದು. ಸಿಕ್ಕ ಸಿಕ್ಕಲ್ಲಿ ಕೋರ್ಟ್ ಆವರಣದಲ್ಲಿ ಫೀ ತೆಗೆದು ಕೊಳ್ಳುತ್ತಿರಲಿಲ್ಲವಂತೆ.
ಕೇಸು ವಿಚಾರಣೆ ಗೆ ಬರುವ ದಿನಾಂಕದ ಮೊದಲು ಅಂಚೆ ಕಾರ್ಡ್ ಬರೆಯುತ್ತಿದ್ದರು. ಅದರಲ್ಲಿ ಕೇಸಿನ ದಿನಾಂಕ ನಮೂದಿಸಿ ಬೆಳಿಗ್ಗೆ ಆಫೀಸಿಗೆ ಬಂದು ಭೇಟಿಯಾಗುವುದು ಅಂತಾ ಇರುತ್ತಿತ್ತು.ನಮ್ಮ ತಂದೆಯವರು ಪಂಚೆ ಮತ್ತು ಆಕಾಶ ನೀಲಿ ಬಣ್ಣದ ಅಂಗಿ ತೊಟ್ಟು ನಡೆದು ಕುಮಟಾಕ್ಕೆ ಹೊರಟರು ಎಂದರೆ,ನಮ್ಮ ದೊಡ್ಡಪ್ಪ ರುಮಾಲು ಸುತ್ತಿ ಹಳದಿ ಷರಟು ಧರಿಸಿ ಕುಮಟಾಕ್ಕೆ ಹೊರಟರೆಂದರೆ ಬಹುತೇಕ ಸಾರಿ ಅದು ವಕೀಲರ ಮನೆಗೆ ಆಗಿರುತ್ತಿತ್ತು. ದಿವಂಗತರ ಬಗ್ಗೆ, ಅವರ ಕಾನೂನಿನ ಜ್ಞಾನ ದ ಬಗ್ಗೆ ಅಪಾರ ಗೌರವ ವಿಶ್ವಾಸವಿತ್ತು. ಅವರು ಕೇಸು ಹಿಡಿದರೆಂದರೆ ಗೆಲುವು ಖಚಿತ. ಎಲ್ಲಾ ಸಿವಿಲ್ ಕೇಸುಗಳನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ಯಾವುದೇ ಕಾರಣಕ್ಕೂ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೋಲಿಸ್ ಸ್ಟೇಷನ್ ಗೆ ಬರುತ್ತಿರಲಿಲ್ಲವಾಗಿತ್ತಂತೆ. ಇದೇ ಸಂದರ್ಭದಲ್ಲಿ ಅವರ ಆತ್ಮೀಯ ಸಹಾಯಕ ನನ್ನು ನೆನಪಿಸಲೇ ಬೇಕು. ಕಾಗದ ಪತ್ರಗಳನ್ನು ತಯಾರಿ ಮಾಡುವವನು ಅಳ್ವೇಕೋಡಿಯ ಬೀರಪ್ಪ ನಾಯ್ಕ. ಅವರ ನಂಬಿಗಸ್ತ ಸಹಾಯಕ. ಆತನು ಸಹ ಅದ್ಭುತ ಕಾನೂನಿನ ಜ್ಞಾನ ಹೊಂದಿದ್ದ. ಆತನು ಬರೆದ ದಸ್ತಾವೇಜು ನಾನು ಓದಿದ್ದೇನೆ. ಆಗ ದಸ್ತಾವೇಜು ಕೈ ಬರಹದಲ್ಲಿ ಇರುತ್ತಿತ್ತು. ಕೆಲವು ಮಾತ್ರ ಟೈಪ್ ಮಾಡಲಾಗುತ್ತಿತ್ತು.ಬೀರಪ್ಪ ನಾಯ್ಕಅವರ ಅಕ್ಷರ ಅಷ್ಟು ಸುಂದರ ಇರುತ್ತಿತ್ತು. ಛಾಪ ಕಾಗದದ ಮೇಲೆ ತಿದ್ದಿದ ಬರಹ ಇರಬಾರದು .ದಸ್ತಾವೇಜಿನಲ್ಲಿ ಅಥವಾ ವಿಲ್ಲ್ ನಾಮೆಯಲ್ಲಿ ದಸ್ತೂರು ಬೀರಪ್ಪ ನಾಯ್ಕ ಅಂತಾ ಇದ್ದರೆ ಅಲ್ಲಿ ದೋಷ ಇಲ್ಲ ಅಂತಾ ಅರ್ಥ. ಅಷ್ಟೊಂದು ಕರಾರುವಕ್ಕಾಗಿರುವ ಕರಾರು ಪತ್ರ. ವಾಂಟಣೀ ದಸ್ತಾವೇಜು. ಸಬ್ ರಿಜಿಸ್ಟ್ರಾರ್ ಸಂಬಂಧಿಸಿದ ಕಾಗದ ಪತ್ರಕ್ಕೆ ಬಹುತೇಕರು ನೇರವಾಗಿ ಅಳ್ವೇಕೋಡಿಯ ಬೀರಪ್ಪ ನಾಯ್ಕರನ್ನು ಭೇಟಿಯಾಗಿ ವ್ಯವಹರಿಸುತ್ತಿದ್ದರು.

ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೀರಪ್ಪ ನಾಯ್ಕ ರು ವಕೀಲರು ಭೇಟಿಯಾಗಿ ಅಂದರೆ ಮಾತ್ರ ವಕೀಲರನ್ನು ಬೇಟಿಯಾಗುವದು. ಕಾಗದ ಪತ್ರಗಳ ವ್ಯವಾಹಾರ ಬೀರಪ್ಪನ ಹಂತದಲ್ಲಿ ಮುಗಿದು ಬಿಡುತ್ತಿತ್ತು. ಎಚ್. ವಿ. ಹೆಗಡೆಯವರು ಸಹ ಕೆಲವು ಕಾಗದ ಪತ್ರಗಳ ಬರವಣಿಗೆಗೆ ಬೀರಪ್ಪನ ಹತ್ತಿರ ಹೋಗಿ ಅನ್ನುತ್ತಿದ್ದರು. ಅವರಿಗೂ ಸಹ ಅವರ ಸಹಾಯಕನ ಬರವಣಿಗೆ ಯ ಬಗ್ಗೆ ಅಷ್ಟು ವಿಶ್ವಾಸ ಇತ್ತು. ನಮ್ಮ ಕುಟುಂಬದ ಬಹುತೇಕರಿಗೆ ಕಾನೂನಿನ ಜ್ಞಾನ, ಕಾನೂನಿನ ಭಾಷೆ, ಪರಿಚಿತವಾಗಿದ್ದು ದಿವಂಗತ ಎಚ್. ವಿ. ಹೆಗಡೆ ಮತ್ತು ಅವರ ಕುಟುಂಬದ ಕೊಡುಗೆ ಅಂದರೆ ಖಂಡಿತ ಅತಿಶಯೋಕ್ತಿಯಲ್ಲ. ಈ ಸಂದರ್ಭದಲ್ಲಿ ದಿವಂಗತ ರನ್ನು ನೆನಪಿಸಿ ಕೊಳ್ಳುವುದರ ಮೂಲಕ ವೈಯಕ್ತಿಕವಾಗಿ ನಮ್ಮ ಕುಟುಂಬದ ಪರವಾಗಿ ಹಾಗೂ ಅವರ ಎಲ್ಲಾ ಕಕ್ಷಿದಾರರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಬಂಧುಗಳಿಗೆ ಹಾಗೂ ಅವರ ಕಕ್ಷಿದಾರರಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಡಾ.ಶ್ರೀಧರ ನಾಯ್ಕ ಕೂಜಳ್ಳಿ.
