

ನನ್ನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬೆಂಬಲವಾಗಿದ್ದರು, ನನ್ನನ್ನು ಬೆಳೆಸಿದ ಧೀಮಂತ ನಾಯಕರಾಗಿದ್ದ ಅವರಿಗೆ ಯುವಕರನ್ನು ಸೆಳೆಯುವ ಶಕ್ತಿ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ನನ್ನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬೆಂಬಲವಾಗಿದ್ದರು, ನನ್ನನ್ನು ಬೆಳೆಸಿದ ಧೀಮಂತ ನಾಯಕರಾಗಿದ್ದ ಅವರಿಗೆ ಯುವಕರನ್ನು ಸೆಳೆಯುವ ಶಕ್ತಿ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಕಟ್ಟುವಲ್ಲಿ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಂಗಾರಪ್ಪ ಕೂಡ ಪ್ರಮುಖರು. ನನ್ನಂತ ಅನೇಕ ಜನರನ್ನ ಬಂಗಾರಪ್ಪ ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಬಂಗಾರಪ್ಪ ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು, ಅವರ ಮಗ ಮಧು ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗಿದೆ. ಎಐಸಿಸಿಯಿಂದ ಸೂಚನೆ ಬಂದ ಕೂಡಲೆ ಅವನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಬಂಗಾರಪ್ಪ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ಅಭಿಪ್ರಾಯ ಪಡೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನದ ಫಲವಾಗಿ ಜೆಡಿಎಸ್ ನಿಂದ ಮಾತ್ರವಲ್ಲ ಬೇರೆ ಯಾವ ಪಕ್ಷದಿಂದ, ಯಾವುದೆೇ ನಾಯಕರು ಬಂದರೂ ಅವರೆಲ್ಲರಿಗೂ ಕಾಂಗ್ರೆಸ್ ಬಾಗಿಲು ಸದಾ ತೆಗೆದಿರುತ್ತದೆ, ಸದಾ ಸ್ವಾಗತವೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಗೋಡು ತಿಮ್ಮಪ್ಪ, ಜನಾರ್ಧನ ಪೂಜಾರಿ, ಬಂಗಾರಪ್ಪ ಅವರಂತಹ ಮೇಧಾವಿ ನಾಯಕರು ಪಕ್ಷಕ್ಕೆ ನೀಡಿರುವ ಕೊಡುಗೆ ಮರೆಯುವಂತಿಲ್ಲ. ಪಕ್ಷದ ತತ್ವ, ಸಿದ್ದಾಂತ ಒಪ್ಪಿ ಬಂದರೆ ರಾಜ್ಯಾಧ್ಯಕ್ಷನಾಗಿ ಸ್ವಾಗತ ಮಾಡುತ್ತೇನೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ. (kpc)
