
ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರೈತರ ಭೂಮಿ ಕಿತ್ತುಕೊಳ್ಳುವ ಕಾನೂನು ಮಾಡುತ್ತಿದ್ದಾರೆ. ಹಾಗಾಗಿ ಈ ಮಹಾಪಂಚಾಯತ್ ಮೂಲಕ ರೈತರ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಈ ಕಾನೂನುಗಳನ್ನು ವಾಪಸ್ ಪಡೆಯದಿದ್ದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ

ದಕ್ಷಿಣ ಭಾರತದ ಮತ್ತು ಕರ್ನಾಟಕದ ಮೊದಲ ರೈತ ಮಹಾಪಂಚಾಯತ್‌ಗೆ ಇಂದು ಶಿವಮೊಗ್ಗ ಸಾಕ್ಷಿಯಾಯಿತು. ಐತಿಹಾಸಿಕ ಮಹಾಪಂಚಾಯತ್‌ನಲ್ಲಿ ಹತ್ತಾರು ಸಾವಿರ ರೈತರು ನೆರೆದು ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ದೆಹಲಿಯ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯುದುವೀರ್ ಸಿಂಗ್‌ರವರು ಭಾಗವಹಿಸಿ ಹೋರಾಟಕ್ಕೆ ಚಾಲನೆ ನೀಡಿದರು.
ಡಾ.ದರ್ಶನ್ ಪಾಲ್ ಮಾತನಾಡಿ, “ಈ ಮಣ್ಣಿಗೆ ನಾನು ನಮನ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಬಸವಣ್ಣ ಮತ್ತು ಟಿಪ್ಪುಗೆ ಜನ್ಮಕೊಟ್ಟ ಭೂಮಿ ಇದು, ಇಲ್ಲಿನ ಜನರಿಗೆ ನಮನ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ತುಂಗಾ ಮೂಲ ಉಳಿಸಿ ಹೋರಾಟದ ಮೂಲಕ ದಿಟ್ಟ ಹೋರಾಟ ಮಾಡಿದವರು, ನಿಮಗೆ ನಮನ” ಎಂದರು.
ದೆಹಲಿಯ ಗಡಿಗಳಲ್ಲಿ ಕೂತಿರುವ ರೈತರು ದೇಶದ ಎಲ್ಲಾ ಭಾಗದಲ್ಲಿರುವ ರೈತರು ಈ ಆಂದೋಲನದ ಬಗ್ಗೆ ಏನು ಭಾವಿಸುತ್ತಾರೆ ಎಂದು ಯೋಚಿಸುತ್ತಿದ್ದಾರೆ. ನೀವು ಇಲ್ಲಿ ಸಹಸ್ರಾರು ಜನ ಒಟ್ಟು ಸೇರಿ ಆ ರೈತ ಬಂಧುಗಳಿಗೆ ಗಟ್ಟಿ ಸಂದೇಶ ನೀಡಿದ್ದೀರಿ.. ನಾವು ಜೊತೆಗಿದ್ದೇವೆ ಎಂದು ನೀವು ಹೇಳಿದ್ಧೀರಿ ನಿಮಗೆ ಧನ್ಯವಾದ ಎಂದರು.
32 ವರ್ಷಗಳಿಂದ ಎಂಎಸ್‌ಪಿಗಾಗಿ ಹೋರಾಡುತ್ತಿದ್ದೇವೆ. ರೈತರ ಆತ್ಮಹತ್ಯೆಗಳ ವಿರುದ್ಧ ನಾವು ಹೋರಾಡುತ್ತಿರುವಾಗ ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರ ಈ ಕರಾಳ ಕಾನೂನುಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದೆ. ಇದರ ವಿರುದ್ಧ ಕಳೆದ 8 ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದೇವೆ. ನಾವು ಇಡೀ ಪಂಜಾಬ್ ಬಂದ್ ಮಾಡಿದ್ದೇವೆ. ರೈಲು ಸೇವೆ ಸ್ಥಗಿತಗೊಳಿಸಿದ್ದೇವೆ. ರಿಲಾಯನ್ಸ್ ಮತ್ತು ಎಸ್ಸಾರ್ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಿ ಹೋರಾಟ ಮಾಡಿದ್ದೇವೆ ಎಂದು ದರ್ಶನ್ ಪಾಲ್ ಪಂಜಾಬ್ ಹೋರಾಟದ ಕುರಿತು ಮಾಹಿತಿ ನೀಡಿದರು.
ಇಂದಿಗೆ ದೆಹಲಿಯ ರೈತ ಹೋರಾಟಕ್ಕೆ 115 ದಿನಗಳಾಗಿವೆ. ಸರ್ಕಾರ ಈ ಆಂದೋಲನ ಮುರಿಯಲು ಪ್ರಯತ್ನಿಸಿತು. ಆದರೆ ಮೀನಾ ಮುತ್ತು ಗುಜ್ಜರ್ ರೈತರು ಒಂದೂಗೂಡಿ ರಾಜಸ್ಥಾನದಲ್ಲಿ ಹೋರಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹಿಂದೂ ಮುಸ್ಲಿಮರು ಒಂದುಗೂಡಿ ಹೋರಾಡುತ್ತಿದ್ದಾರೆ. ಅಂದರೆ ಈ ರೈತ ಹೋರಾಟ ದಿನೇ ದಿನೇ ಗಟ್ಟಿಗೊಳ್ಳುತ್ತಿದೆ ಮತ್ತು ದೇಶಕ್ಕೆ ವಿಸ್ತರಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ನೀವು ಐಕ್ಯ ಹೋರಾಟ ಮಾಡುತ್ತಿದ್ದೀರಿ. ಸಂಯುಕ್ತ ಹೋರಾಟ ನಡೆಸುತ್ತಿದ್ದಾರೆ. ನಾವು ಪಂಜಾಬ್‌ನಲ್ಲಿ 31 ಸಂಘಟನೆಗಳು ಒಂದುಗೂಡಿದ್ದಕ್ಕೆ ದೆಹಲಿಯ ಗಡಿಗಳಲ್ಲಿ ಗಟ್ಟಿ ಹೋರಾಟ ನಡೆಸಲು ಸಾಧ್ಯವಾಯಿತು. ಅದೇ ರೀತಿ ನೀವು ಸಹ ಒಂದುಗೂಡಿ ಹೋರಾಡುತ್ತೀರಿ ಎಂದು ನಂಬಿದ್ದೇವೆ. ಈ ಕಾರ್ಪೋರೇಟ್‌ಗಳ ವಿರುದ್ದದ ಹೋರಾಟದಲ್ಲಿ ನೀವು ಕೈ ಜೋಡಿಸುತ್ತೀರಿ ಅಲ್ಲವೇ ಎಂದು ಪಾಲ್ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್‌ರವರು ಮಾತನಾಡಿ “ಶಿವಮೊಗ್ಗ ಸಮಾಜವಾದಿ ಚಳವಳಿಯ ತವರೂರು. ರೈತ ಚಳವಳಿಯ ನೆಲೆ. ಕೇಂದ್ರದ ಈ ಕರಾಳ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮೊದಲ ರೈತ ಮಹಾಪಂಚಾಯತ್‌ಗೂ ಇದು ಸಾಕ್ಷಿಯಾಗಿದೆ. ಮೋದಿ ಸರ್ಕಾರ ಹಿಂದೆ ಸರಿಯುವವರೆಗೂ, ಎಂಎಸ್‌ಪಿಗಾಗಿ ಕಾನೂನು ಜಾರಿಗೊಳಿಸುವವರೆಗೂ ನಾವು ವಿರಮಿಸುವುದಿಲ್ಲ ಎಂದರು.
ಎಂಎಸ್‌ಪಿ ಇದೆ ಎಂದು ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರೈತರ ಭೂಮಿ ಕಿತ್ತುಕೊಳ್ಳುವ ಕಾನೂನು ಮಾಡುತ್ತಿದ್ದಾರೆ. ಹಾಗಾಗಿ ಈ ಮಹಾಪಂಚಾಯತ್ ಮೂಲಕ ರೈತರ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಈ ಕಾನೂನುಗಳನ್ನು ವಾಪಸ್ ಪಡೆಯದಿದ್ದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಸವಾಲು ಹಾಕಿದರು. (ಗೌರಿಡಾಟ್.ಕಾಂ)


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
