

ನಮ್ಮವರ ಜತೆ ಭೂಮಿ ಹಕ್ಕಿನ ಪಯಣ….
ಈಗ ಒಂದು ವರ್ಷಕೂ ಹಿಂದೆ 94 ಸಿ ಅಡಿಯಲ್ಲಿ ನಮ್ಮ ಊರಿನ ಹನುಮ ಲಮಾಣಿ ಸೇರಿ 7 ಕುಟುಂಬಗಳು ಅರ್ಜಿ ಸಲ್ಲಿಸಿದ್ದರು. ಅವರಿಗೆ ಹಕ್ಕು ಪತ್ರ ದೊರಕಿರಲಿಲ್ಲ. ಆದರೆ ಈಚೆಗೆ ವಿಲೇವಾರಿಯಾಗದೇ ಉಳಿದಿದ್ದ ಸಾಕಷ್ಟು ಕಡತಗಳನ್ನು ಸಾಗರದ ನೂತನ ತಹಸೀಲ್ದಾರ್ ಚಂದ್ರಶೇಖರ್ ಸಹಿ ಹಾಕಿ ವಿಲೇವಾರಿ ಮಾಡಿದ್ದಾರೆ. ಸಾಗರ ಶಾಸಕರು ಹಕ್ಕು ಪತ್ರ ವಿತರಣೆಗೆ ಕೋವಿಡ್ ಕಾರಣಕ್ಕೆ ಮೊನ್ನೆ ಮೊನ್ನೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದರು.
ಮಾಹಿತಿ ತಿಳಿದುಕೊಂಡು ನಾನು ನಮ್ಮೂರಿನ ಈ ಕುಟುಂಬಗಳಿಗೆ ಮಾಹಿತಿ ನೀಡಿ ಈ ದಿನ ಸಮಯ ನಿಗದಿ ಮಾಡಿಕೊಂಡು ಅಧಿಕಾರಿಗಳಿಗೆ ಮುನ್ನ ಮಾಹಿತಿ ನೀಡಿ ಈಗ ಹಕ್ಕು ಪತ್ರವನ್ನ ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆದರು. ಈ ಹಕ್ಕು ಪತ್ರ ಪಟ್ಟಿಯಲ್ಲಿ ನನ್ನದೂ ಒಂದು ಇತ್ತು ಎನ್ನುವುದು ಸತ್ಯ.ಒಂದು ಅಡಿ ಭೂಮಿಯ ಒಡೆತನ ಹೊಂದಿರದ ಹನುಮ ಲಮಾಣಿ, ಗಣಪತಿ, ಮಹಾಬಲೇಶ್ವರ, ಜಯಮ್ಮ, ಶಿವರಾಮ, ಫಿಲಿಪ್ ರವರಿಗೆ ತಮ್ಮ ವಾಸದ ಮನೆ ಹಕ್ಕು ಪತ್ರ ಪಡೆದ ಖುಷಿಗೆ ಜತೆಯಾದ ಸಾಕ್ಷಿಯಾದ ಕ್ಷಣ ಇದು. ನಮ್ಮ ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗರಾದ ರಾಘವೇಂದ್ರ ಮತ್ತು ಸಹಾಯಕರಾದ ಶ್ರೀಕಾಂತ್ ಮತ್ತು ಬಸವರಾಜ ಈ ಸೇವೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿರುವುದು ನಮಗೆ ಖುಷಿ ತಂದಿದೆ.
ಮಾನ್ಯ ಶಾಶಕರು ಹಕ್ಕು ಪತ್ರ ಶೀಘ್ರ ವಿಲೇವಾರಿಗೆ ಸೂಚನೆ ನೀಡಿರುವುದು ಇಲ್ಲಿ ಕೆಲಸ ಮಾಡಿದೆ. ಶಾಸಕರನ್ನ ಅಭಿನಂದಿಸುವೆ. ಮಾನ್ಯ ಶಾಸಕರಿಗೆ ನನ್ನದೊಂದು ವಿಶೇಷ ವಿನಂತಿ. ಶರಾವತಿ ನದಿ ದಂಡೆಯ ಬಹುತೇಕ ಗ್ರಾಮಗಳಲ್ಲಿ 94 ಸಿ ಹಕ್ಕು ಪತ್ರ ಕೊಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇಯ ಅಗತ್ಯ ಇದೆ. ಉದಾಹರಣೆಗೆ ತುಮರಿ ಗ್ರಾಮ ಪಂಚಾಯಿತಿಯ ವಳಗೆರೆ, ಕಳೂರು, ಚದರವಳ್ಳಿ ಗ್ರಾಮಗಳ ಸುಮಾರು 550 ಅರ್ಜಿ ವಿಲೇವಾರಿ ಆಗದೇ ಉಳಿದಿದೆ. ಇದಕ್ಕೆ ಕಾರಣ 1970 ರಲ್ಲಿ ಮಾಡಿರುವ ವನ್ಯಜೀವಿ ವಲಯ ನೋಟಿಫಿಕೇಶನ್ ತೊಡಕಗಳು. ಒಂದು ಗ್ರಾಮದಲ್ಲಿ ಒಂದಿಷ್ಟು ಭಾಗ ಅರಣ್ಯ ಬಂದರೂ ಜಂಟಿ ಸರ್ವೇ ಕಾರಣ ನೀಡಿ ಕಡತಗಳು ಬಾಕಿ ಉಳಿಸಲಾಗಿದೆ. ಜಂಟಿ ಸರ್ವೇ ಆಗುವುದಿಲ್ಲ. ಇವರಿಗೆ ಹಕ್ಕು ಪತ್ರ ಬರುವುದಿಲ್ಲ ಎನ್ನುವ ಹಾಗಿದೆ ಈ ಸ್ಥಿತಿ. ಜಂಟಿ ಸರ್ವೇ ಮಾಡಿ ಅರ್ಹರಿಗೆ ಹಕ್ಕು ಪತ್ರ ನೀಡಿ ಉಳಿದಂತೆ ಜನವಸತಿ ಪ್ರದೇಶ ಹೊರಗೆ ಇಡುವ ನೋಟಿಫಿಕೇಶನ್ ತಿದ್ದುಪಡಿಯ ಹೆಜ್ಜೆಯನ್ನು ಇಡಲು ಶಾಸಕರು ಮುಂದಾಗಬೇಕು ಎಂದು ವಿನಂತಿಸುವೆ.
ಹಕ್ಕು ಪತ್ರ ಪಡೆದ ಈ ಹೊತ್ತಲಿ
ಮಹತ್ತರ ಕಾನೂನು ಜಾರಿ ಮಾಡಿದ ಮತ್ತು ತಿದ್ದುಪಡಿ ಮಾಡಿದ ಸಿದ್ದರಾಮಯ್ಯ ಮತ್ತು ಕಾಗೋಡು ರವರನ್ನು ನೆನೆಯುತ್ತಾ ವಿರಮಿಸುವೆ. ಚೋಮನಿಗೆ ಇಂದು ಆತನ ವಾಸಿಸುವ ಮನೆಗೆ ಹಕ್ಕು ಬಂತು.
ಅಧಿಕಾರ ಗುರಿಯಲ್ಲ ಮಾರ್ಗ ಮಾತ್ರ
ಅದು ಇರಲಿ ಬಿಡಲಿ ನಾವು ಜನರ ಜತೆ
-ಜಿ. ಟಿ ಸತ್ಯನಾರಾಯಣ ಕರೂರು.
16-04-2021

