

ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಸಾಮೆ ಹನುಮಂತ್ ನಾಯ್ಕ ರವಿವಾರ ನಿಧನರಾದರು. ಕಾಂಗ್ರೆಸ್ ಹಿಂದುಳಿದ ವರ್ಗ ಗಳ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಹನುಮಂತ ಮಾರ್ಯ ನಾಯ್ಕ ಸಾಮೆಯವರನ್ನು ಎರಡು ದಿವಸಗಳ ಕೆಳಗೆ ಕೋವಿಡ್ ಚಿಕಿತ್ಸೆಗೆ ಸಿದ್ದಾಪುರ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಮುತುವರ್ಜಿಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲದ ವೇಳೆ ಕೊನೆ ಉಸಿರೆಳೆದರು.
ತುಸು ಹುಂಬುತನ, ಧಾಡಸಿತನಗಳಿಂದಲೇ ಮುಖಂಡರಾಗಿ ಗ್ರಾ.ಪಂ., ಪ.ಪಂ. ಗಳ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್, ಪಟ್ಟಣ ಪಂಚಾಯತ್ ಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹನುಮಂತ ನಾಯ್ಕ ಮಾಜಿ ಶಾಸಕ ದಿ.ಗೋಪಾಲ ಕಾನಡೆಯವರ ಸಹವರ್ತಿಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಕಾಂಗ್ರೆಸ್ ನ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹನುಮಂತನಾಯ್ಕ ಜನಪರವಾಗಿ ಕೆಲಸ ಮಾಡುತ್ತ ಜನರ ವಿಶ್ವಾಸ ಗಳಿಸಿದ್ದರು.ಸ್ವಂತದ್ದಕ್ಕೆ ಏನನ್ನೂ ಮಾಡಿಕೊಳ್ಳದ ಹನುಮಂತ ನಾಯ್ಕ ಪಡೆದದ್ದರಲ್ಲಿ ಹೆಚ್ಚಿನದನ್ನು ಹಂಚಿ ಬರಿಗೈಯಲ್ಲಿ ರಾಜಕಾರಣ ಮಾಡುತ್ತಲೇ 50 ವರ್ಷ ಪ್ರಸ್ತುತರಾಗಿದ್ದುದು ಅವರ ಸಾಹಸ.


