
*
ಪ್ರೇಮಿಸುವುದಾದರೆ
ಪ್ರೇಮಿಸುವುದಕ್ಕಾಗಿ ನೀವು
ಇಲಿಯನ್ನು ಆರಿಸಿಕೊಳ್ಳಬಾರದು;
ನೀವು ಬಿಲದೊಳಗಿನ
ಕತ್ತಲನ್ನಷ್ಟೇ ಕಾಣುವಿರಿ.
ಪ್ರೇಮಿಸುವುದಕ್ಕಾಗಿ ನೀವು
ಕಪ್ಪೆಯನ್ನು ಕಂಡು ಹಿಡಿಯಬಾರದು;
ಆಳದ ಬಾವಿಯಲ್ಲಿ ತೊಟ್ಟು
ನೀರಿಗಾಗಿ ನೀವು ದಾಹಿಸುವಿರಿ.
ನೀವು ಜೇಡದೊಂದಿಗೆ
ಪ್ರೇಮವಿಟ್ಟುಕೊಳ್ಳಬಾರದು;
ಅದು ತನ್ನ ನಿಲುವುಗಳನ್ನು ಕಾಲಿನಿಂದ
ಕಾಲಿಗೆ ಬದಲಾಯಿಸುತ್ತಿರುತ್ತದೆ.
ಏಡಿಯನ್ನು
ಪ್ರೇಮಿಸಲೇ ಬಾರದು;
ಅದು ನಿಮ್ಮನ್ನು
ಬಿಗಿಹಿಡಿದು ಕೊಲ್ಲುತ್ತದೆ.
ಪ್ರೇಮಿಸುವುದಕ್ಕಾಗಿ
ನೀವೆಂದಿಗೂ ಧನಮೋಹಿಯನ್ನು
ಆರಿಸಿಕೊಳ್ಳಬಾರದು;
ಕೊರಳಿಗೆ ಕುಣಿಕೆ ಹಾಕಿ, ಹೊತ್ತು ಹೊತ್ತಿಗೆ
ಹಾಲು ಹಿಂಡುವ ಹಸುವಾಗಿ
ನೀವು ಬದಲಾಗುವಿರಿ.
ಸ್ವಾರ್ಥಿಯನ್ನು ನೀವು ಪ್ರೇಮಿಸಬಾರದು;
ಅದು, ನೀವೇ ನಿಮ್ಮ ರಾಜ್ಯವನ್ನು
ಕಡಿದು ಕಿರಿದುಗೊಳಿಸಿ
ಸರಹದ್ದಿಗೆ ಒಳಪಡಿಸಿದಂತಾಗುತ್ತದೆ.
ಸಂಕುಚಿತ ಮನೋಭಾವದವನನ್ನು
ನೀವು ತೊರೆಯಬೇಕು;
ಅದು, ಹೂತೋಟದ ಮಧ್ಯದಲ್ಲಿರುವ
ಶಿಲೆಯ ಸುರಂಗದೊಳಗೆ ಸಿಲುಕಿಕೊಂಡಂತಾಗುತ್ತದೆ.
ಪ್ರೇಮಿಸುವುದಾದರೆ
ನೀವೊಂದು ಆಶಯವನ್ನು ಪ್ರೇಮಿಸಿ;
ಮುಳ್ಳುಬೇಲಿಗಳನ್ನು ಉರುಳಿಸುತ್ತ
ಅದು ನಿಮ್ಮನ್ನು
ಕಡಲ ವಿಸ್ತಾರದ ಮೇಲೆ ಮುನ್ನಡೆಸುತ್ತ
ಗಡಿಗಳಿಲ್ಲದ
ಆಕಾಶಕ್ಕೇರಿಸುತ್ತದೆ.
--ಮಲಯಾಳಂ ಮೂಲ :#ಸುನಿತಾ_ಗಣೇಶ್
--ಅನುವಾದ :#ತೇರಳಿ_ಎನ್_ಶೇಖರ್
