

ಕೊಪ್ಪಳ, ಬಳ್ಳಾರಿ ಭಾಗದ ಹೈದರಾಬಾದ್ ಕರ್ನಾಟಕದಲ್ಲಿ ಪೂಜಿಸುವ ಗಂಡುಗಲಿ ಕುಮಾರರಾಮನನ್ನು ಮಲೆನಾಡಿನ ಬಹುತೇಕ ಕಡೆ ಆರಿದ್ರಮಳೆ ಹಬ್ಬದಲ್ಲಿ ಪೂಜಿಸುವ ವಿಚಾರ ಹೆಚ್ಚು ಪ್ರಚಾರವಾಗಿಲ್ಲ. ಆದರೆ ದೀವರನ್ನು ಸೇರಿ ಮಲೆನಾಡಿನ ಹಿಂದುಳಿದ ವರ್ಗಗಳು ಬೇಡರ ದೊರೆ ಕುಮಾರರಾಮನನ್ನು ವರ್ಷಕ್ಕೊಂದಾವರ್ತಿ ಪ್ರತಿವರ್ಷ ಆರಿದ್ರಮಳೆ ಹಬ್ಬದಲ್ಲಿ ಆರಾಧಿಸುತ್ತಾರೆ. ಗಾಮ, ರಾಮ ಎನ್ನಲಾಗುವ ದೇವಸ್ಥಾನಗಳು, ಮರದ ಮುಖಗಳನ್ನು ಪೂಜಿಸುವ ಹಿಂದೆ ಒಂದು ಮಹತ್ವದ ಇತಿಹಾಸ, ಚರಿತ್ರೆಗಳಿರುವುದು ಶಾಸನಗಳು ಮತ್ತು ಐತಿಹಾಸಿಕ ದಾಖಲೆಗಳಲ್ಲಿ ಸಿದ್ಧವಾಗುತ್ತದೆ.
ಹೊಸನಗರದ ಒಂದು ಶಾಸನ ಸೇರಿ ಹಲವು ಶಾಸನಗಳಲ್ಲಿ ಉಲ್ಲೇಖವಾಗಿರುವ ಗಂಡುಗಲಿ ಕುಮಾರರಾಮ ವಿಜಯನಗರದ ಅರಸರ ಮೂಲ ಪುರುಷ ಎನ್ನಲಾಗುತ್ತದೆ.ಕಂಪಿಲ ಮತ್ತು ಹರಿಹರ ದೇವಿಯ ಮಗನಾದ ವೀರ ಕುಮಾರರಾಮ ಸುರದ್ರೂಪಿಯೂ ಶೂರನೂ ಆಗಿ ದೆಹಲಿಯ ದೊರೆ ಮಹಮ್ಮದ್ ಬಿನ್ ತುಘಲಕ್ ನ ಸೇನೆಯನ್ನು ಎರಡು ಬಾರಿ ಹಿಮ್ಮೆಟ್ಟಿಸಿದ್ದ ಎನ್ನುವ ಐತಿಹಾಸಿಕ ದಾಖಲೆಗಳಲ್ಲಿ ಕುಮಾರರಾಮನನ್ನು ಸ್ಮರಿಸಲಾಗಿದೆ.
ಗಂಡುಗಲಿ ಕುಮಾರರಾಮ ವೀರನೂ, ಧೀರನೂ ಆಗಿದ್ದು ಮಹಿಳೆಯರಿಗೆ ವಿಶೇಶ ಗೌರವಕೊಡುತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ದಾಖಲೆ, ಹಳೆಗನ್ನಡ ಕಾವ್ಯಗಳಲ್ಲಿ ಕೂಡಾ ಕುಮಾರರಾಮನ ಧೀರತನವನ್ನು ಚಿತ್ರಿಸಲಾಗಿದೆ.
ಈ ಕುಮಾರರಾಮ ಯೋಧರಾಗಿದ್ದ ಮಲೆನಾಡಿನ ದೀವರ ಆರಾಧ್ಯಪುರುಷನಾಗುವ ಹಿಂದೆ ದೀವರ ವಿಜಯನಗರದ ಕಾಲದ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಬುಡಕಟ್ಟುಗಳಾದ ದೀವರು ರಾಜರ ಕೆಳಗೆ ಯೋಧರಾಗಿ, ಹಲವು ಸಾಂಮ್ರಾಜ್ಯಗಳಲ್ಲಿ ದೊರೆಗಳಾಗಿದ್ದು ಈ ನಾಡನ್ನು ಆಳಿದವರು, ರಕ್ಷಿಸಿದವರು.
ಅವರು ಮಳೆಗಾಲದ ಯುದ್ಧ ವಿರಾಮದ ಕಾಲದಲ್ಲಿ ತಮ್ಮ ಹುಟ್ಟೂರಿಗೆ ಬಂದು ಕೃಷಿಕೆಲಸ ಮನೋರಂಜನೆಗಳಲ್ಲಿ ತೊಡಗಿಕೊಳ್ಳುತಿದ್ದ ಆಚರಣೆಯಾಗಿ ಮಲೆನಾಡಿನಲ್ಲಿ ಈ ಆರಿದ್ರಮಳೆ ಹಬ್ಬದ ಗಾಮನ ಪೂಜೆ, ಬಿಂಗಿಗಳೆಲ್ಲಾ ಈಗಲೂ ನಡೆಯುತ್ತವೆ. ಗಾಮನ ಮೂರ್ತಿ ಹೊತ್ತ ವ್ಯಕ್ತಿಯನ್ನು ಸ್ತ್ರೀಯರು ಪಾದತೊಳೆದು ಪೂಜಿಸುವುದು ಈ ಬುಡಕಟ್ಟುಜನ ವೀರನೂ, ಧೀರನೂ ಆದ ಮಹಿಳೆಯರನ್ನು ಗೌರವಿಸುತಿದ್ದ ಕುಮಾರರಾಮನನ್ನು ಗೌರವಿಸುವ ಧ್ಯೋತಕ. ಪುರಾಣ, ಸಾಹಿತ್ಯ, ಚರಿತ್ರೆ ಎಲ್ಲಾ ಕಡೆ ತನ್ನ ಶೂರತನ, ತ್ಯಾಗ, ಪೌರುಷದಿಂದ ಅಜರಾಮರನಾದ ಕುಮಾರ ರಾಮ ದೀವರ ಕೊಪ್ಪಗಳಲ್ಲಿ ದೇವರಾಗಿ ಪೂಜಿಸುತ್ತಿರುವ ಹಿಂದೆ ಅಧ್ಯಯನಮಾಡಬೇಕಾದ ಚಾರಿತ್ರಿಕ ಸತ್ಯವಿದೆ. ಮಲೆನಾಡಿನ ಬಹುತೇಕ ಕಡೆ ಪೂಜಿಸಲ್ಪಡುವ ರಾಮ, ಗಾಮ ರಾಮಾಯಣದ ರಾಮನಲ್ಲದೆ ವೀರ-ಶೂರ, ಧೀರ ಬುಡಕಟ್ಟು ಕುಮಾರ ರಾಮನೆಂಬುದು ನಿರ್ವಿವಾದ. ಇದೇ ಕುಮಾರರಾಮನ ಗುಡಿಯೊಂದು ಹೊನ್ನಾವರ ತಾಲೂಕಿನ ನವಿಲಗೋಣಿನಲ್ಲಿ ಇರುವ ಮಾಹಿತಿ ಇದೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಸುಗ್ಗಿ ಹಬ್ಬವೆಂದು ಆಚರಿಸುವ ರೂಢಿಯೂ ಸಂಪ್ರದಾಯವಾಗಿದೆ. ಈ ಬಗ್ಗೆ ಸಂಶೋಧನೆಗಳಾಗಿ ಆರಿದ್ರಮಳೆ ಹಬ್ಬ ಅಲ್ಲಿಯ ಬಿಂಗಿ ಈ ಆಚರಣೆಗಳೊಂದಿಗೆ ಗಾಮನ ಆರಾಧನೆ ಇವುಗಳ ಹಿಂದೆ ಪ್ರಬಲವಾದ ಬುಡಕಟ್ಟು ಆಚರಣೆ, ರೂಢಿಗಳಿರುವುದು ಕರಾವಳಿ, ಮಲೆನಾಡಿನ ದೀವರು ಅರಣ್ಯವಾಸಿ ಬುಡಕಟ್ಟುಗಳು ಎಂಬುದಕ್ಕೆ ಸಾಕ್ಷಗಳನ್ನೊದಗಿಸುತ್ತದೆ ಕೂಡಾ.

