ಗಂಡುಗಲಿ ಕುಮಾರರಾಮನ ಹೆಸರು ಕೇಳದವರುಂಟೆ?
ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ. ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ.
ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆಚರಿಸುವ ಹನಿಹಬ್ಬವನ್ನು ಆರಿದ್ರಮಳೆ ಹಬ್ಬ ಎಂದು ಕರೆಯುತ್ತಾರೆ. ಸಿದ್ಧಾಪುರದ ಕೋಲಶಿರ್ಸಿ,ಮನ್ಮನೆ,ಬೇಡ್ಕಣಿ,ಹುಸೂರು,ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.
ಕೋಲಶಿರ್ಸಿಯಲ್ಲಿ ನಡೆಯುವ ಆರಿದ್ರಮಳೆ ಹಬ್ಬದ ಆಚರಣೆಯ ವಿಡಿಯೋ
ವಿಜಯನಗರ ಸಾಂಮ್ರಾಜ್ಯ ಮತ್ತು ಅದಕ್ಕಿಂತ ಹಿಂದೆ ಮಲೆನಾಡಿನ ಧೀವರು ಸೈನಿಕರು, ರಾಜರೂ ಆಗಿ ಮೆರೆದವರು. ತಮ್ಮ ಹಳೆಫೈಕ ಸಂಸ್ಕೃತಿ ಮತ್ತು ಸಂಪ್ರದಾಯದ ರೂಢಿಯಂತೆ ಮಳೆಗಾಲದ ಯುದ್ಧವಿರಾಮ ಕಾಲದಲ್ಲಿ ಈ ಸೈನಿಕರ ಪೂರ್ವಜರು ವರ್ಷಕ್ಕೊಮ್ಮೆ ಹನಿ ಹಬ್ಬ ಎಂದು ಆಚರಿಸುತಿದ್ದರಂತೆ. ಪ್ರತಿವರ್ಷ ಆರಿದ್ರ ಮಳೆ ಪ್ರಾರಂಭವಾದ ಕಾಲ ಮತ್ತು ಈ ಆರಿದ್ರ ಮಳೆ ಕಳೆದ ಮೇಲೂ ಮಲೆನಾಡಿನ ಜನ ಆಚರಿಸುವ ಹನಿ ಹಬ್ಬ ಆರಿದ್ರಮಳೆ ಹಬ್ಬ ಎಂದು ಪ್ರಸಿದ್ಧವಾಗಿದೆ. ಯುದ್ಧವಿರಾಮ ಕಾಲದಲ್ಲಿ ಕೃಷಿ ಮಾಡುತಿದ್ದ ಆದಿ ಸೈನಿಕರು ವರ್ಷಕ್ಕೊಮ್ಮೆ ಸೇರಿ ಆಚರಿಸುತಿದ್ದ ಈ ಹನಿ ಅಥವಾ ಮಳೆಹಬ್ಬದಲ್ಲಿ ರಾಮ ಆಥವಾ ಗಾಮ ಎನ್ನಲಾಗುವ ಕುಮಾರರಾಮನ ಮುಖವಾಡವನ್ನು ಪೂಜಿಸುವುದು ವಾಡಿಕೆ.
ಗಾಮನಮುಖ, ಸೈನಿಕರ ಮುಖವಾಡ, ಕುದುರೆ ಹೀಗೆ ಯುದ್ಧ,ಸೈನ್ಯವನ್ನು ಪ್ರತಿನಿಧಿಸುವ ಚಹರೆಗಳು ಈ ಹಬ್ಬದ ಕೇಂದ್ರ ಬಿಂದು. ಯುವಕರು, ನವವಿವಾಹಿತರು ಈ ಮುಖಗಳನ್ನು ಹೊತ್ತು ಗಡಿದೇವರುಗಳನ್ನು ಪೂಜಿಸಿ, ಕೆಂಡದ ಮೇಲೆ ನಡೆಯುವುದು ವಿಶೇಶವಾದರೆ ಹೆಂಗಳೆಯರು ಈ ಸೈನಿಕ ಪುರುಷರ ಕಾಲು ತೊಳೆದು ಗೌರವಿಸುವ ನವಜಾತ ಶಿಶುಗಳಿಗೆ ಆರೋಗ್ಯಕ್ಕಾಗಿ ಹೊತ್ತ ಹರಕೆಯನ್ನು ತೀರಿಸಲು ಈ ಅವಕಾಶವನ್ನು ಉಪಯೋಗಿಸುತ್ತಾರೆ. ಇಂಥ ವೈಶಿಷ್ಟ್ಯಮಯ ಆಚರಣೆ, ರೂಢಿ, ಸಂಪ್ರದಾಯಗಳ ಹಿಂದೆ ಮಲೆನಾಡಿನ ಮೂಲನಿವಾಸಿಗಳು ಶ್ರಮಿಕರು, ಯೋಧರು, ಸಾಹಸಿಗಳು ಎಂದು ನೆನಪಿಸುವ ಆಚರಣೆ. ಈ ಆಚರಣೆಯಲ್ಲಿ ಕುಮಾರರಾಮನ ಸ್ಮರಣೆ, ಆಧರಣೆಕೂಡಾ. ವೀರತನ, ಧೀರತ್ವ, ಮಹಿಳೆಯರ ಬಗೆಗಿನ ಕುಮಾರರಾಮನ ಗೌರವ ಸ್ಮರಿಸಿ, ಗೌರವಿಸುವುದೇ ಈ ಆಚರಣೆಗಳ ಹಿಂದಿನ ಉದ್ದೇಶ.ಈ ವರ್ಷದ ಈ ಆರಿದ್ರಮಳೆಯ ಹಬ್ಬದ ಸಂಬ್ರಮ ಈ ವಾರ ಮುಕ್ತಾಯವಾಗುತ್ತಿದೆ.