

ಬುಧವಾರ ಶಿರಸಿಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ರಾಜ್ಯ ಸಾರಥ್ಯ ವಹಿಸಿಕೊಂಡ ಮೇಲೆ ಡಿ.ಕೆ.ಶಿವಕುಮಾರ ಮಲೆನಾಡು, ಕರಾವಳಿ ಪ್ರವಾಸಕ್ಕೆ ಬಂದಿದ್ದು ಇದೇ ಮೊದಲ ಬಾರಿ ಏನಲ್ಲ. ಆದರೆ ಈ ಬಾರಿಯ ಭೇಟಿ ನಾನಾ ಕಾರಣಕ್ಕೆ ವಿಶೇಶವೆನಿಸಿದೆ. ತಾಲೂಕಾ ಪಂಚಾಯತ್,ಜಿಲ್ಲಾ ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿ ನಿಂತು ಯೋಚಿಸುತ್ತಿರುವ ಮತದಾರರು,ಟಿಕೇಟ್ ಆಕಾಂಕ್ಷಿಗಳ ನಿರೀಕ್ಷೆ,ಉತ್ಸಾಹಗಳ ನಡುವೆ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಭೇಟಿಗೆ ಮಹತ್ವ ಪ್ರಾಪ್ತವಾಗಿದೆ. ಇನ್ನೊಂದು ವರ್ಷದ ನಂತರ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೂಡಾ ಈ ಭೇಟಿಗೆ ಮಹತ್ವವಿದೆ ಎನ್ನಲಾಗುತ್ತಿದೆ.
ಟಿಕೇಟ್ ಆಕಾಂಕ್ಷಿಗಳ ಸರ್ಕಸ್- ಮೀಸಲಾತಿ ಅನಿಶ್ಚಿತತೆ, ನ್ಯಾಯಾಲಯದ ಮೆಟ್ಟಿಲೇರಿರುವ ಮೀಸಲಾತಿ ನಿಗದಿ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ ಘೋಷಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಈ ಸಂದರ್ಭದಲ್ಲಿ ಕೂಡಾ ಈಗಿನ ಮೀಸಲಾತಿಯಂತೆ ಚುನಾವಣೆಗೆ ಸ್ಫರ್ಧಿಸುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆಡಳಿತ ಪಕ್ಷ ತನಗೆ ಅನುಕೂಲಕರವಾಗಿ ಮೀಸಲಾತಿ ನಿಗದಿಪಡಿಸಿದೆ ಎನ್ನುವ ಮೇಲ್ನೋಟದ ಆರೋಪದ ನಡುವೆ ಕೂಡಾ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಕಾಂಗ್ರೆಸ್ ಶಕ್ತಿಯ ಧ್ಯೋತಕ. ಜಿಲ್ಲೆಯ 50 ಕ್ಕೂ ಹೆಚ್ಚು ತಾ.ಪಂ. ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿ ಬಗ್ಗೆ ಆಕ್ಷೇಪಣೆಗಳಿರುವುದು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕೂಡಾ ಮೀಸಲಾತಿ ನಿಗದಿ ಆಕ್ಷೇಪಣೆ ಎರಡಂಕಿ ಕ್ಷೇತ್ರಗಳನ್ನು ದಾಟಿರುವುದು ಮೀಸಲಾತಿ ಅಸಮರ್ಪಕತೆಗೆ ಸಾಕ್ಷಿ.
ಈ ವಿದ್ಯಮಾನದ ನಡುವೆ ಶಿರಸಿ ಕ್ಷೇತ್ರದ ವಿಧಾನಸಭಾ ಟಿಕೇಟ್ ಆಕಾಂಕ್ಷಿಗಳೂ ಈಗಲೇ ನಾನಿದ್ದೇನಿ ಎಂದು ಸೌಂಡು ಮಾಡಿರುವುದು ರಾಜ್ಯಾಧ್ಯಕ್ಷರ ಭೇಟಿಯ ಹಿನ್ನೆಲೆಯ ಕಾರಣದಿಂದ ಎನ್ನುವ ವಿಶ್ಲೇಷಣೆಗಳಿವೆ. ಹೊರಗಿನ ಅಭ್ಯರ್ಥಿಗಳು ಪ್ರತಿಸಾರಿ ಚುನಾವಣಾ ಮುನ್ನ ಶಿರಸಿ-ಉತ್ತರ ಕನ್ನಡಕ್ಕೆ ಬಂದು ನಾನಿದ್ದೇನಿ ಎನ್ನುವ ಹಿಂದೆ ಶಿರಸಿ ಕೇಂದ್ರಿತ ಪುರೋಹಿತಶಾಹಿ ತಂತ್ರಗಾರಿಕೆ ಇದೆ ಎನ್ನುವ ಆರೋಪಗಳಿವೆ. ಶಿರಸಿ ಕ್ಷೇತ್ರದಲ್ಲಿ ಒಂದು ಚುನಾವಣೆಯಿಂದ ಅರ್ಧ ಅವಧಿ ನಾಪತ್ತೆಯಾಗುವ ರಾಜ್ಯ ಮಟ್ಟದ ಪದಾಧಿಕಾರಿಗಳು ಚುನಾವಣೆಯ ಒಂದೆರಡು ವರ್ಷ ಮೊದಲು ಬಂದು ಮಾಡುವ ಗಲಿಬಿಲಿಯಿಂದಾಗಿ ಶಿರಸಿ ಕ್ಷೇತ್ರ ಕೋಮುವಾದಿಗಳ ಕೈ ವಶವಾಗುತ್ತಿದೆ ಎನ್ನುವ ಆರೋಪಗಳಿವೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಮೂರುವರ್ಷ ಕಳೆದುಹೋಗಿ ಕೊನೆಯ ಒಂದೆರಡು ವರ್ಷ ಬಂದು ಹೊರಗಿನವರು ಸರ್ಕಸ್ ನಡೆಸಲು ರಾಜ್ಯ ಕಾಂಗ್ರೆಸ್ ನ ಕೆಲವರ ಚಿತಾವಣೆ ಕಾರಣ ಎನ್ನಲಾಗುತ್ತಿದೆ.
ಸಂಘಟನೆ ಯಾರಿಗೂ ಬೇಡ- ಬೆಂಗಳೂರು ಮಟ್ಟದಲ್ಲಿ ಹಣ,ದೊಡ್ಡವರ ಸಂಪರ್ಕದಿಂದ ರಾಜ್ಯಮಟ್ಟದ ಪದಾಧಿಕಾರಗಳಾದವರು ಹುದ್ದೆಗೆ ಸೀಮಿತ ಮತ್ತು ಚುನಾವಣೆಗೆ, ಅವಕಾಶಕ್ಕೆ ಅನುಕೂಲಕ್ಕೆ ಜೋತುಬಿದ್ದವರು ಎನ್ನುವ ಆರೋಪಗಳ ನಡುವೆ ಅವರ ಕ್ರೀಯಾಶೀಲತೆಯೂ ಪರೀಕ್ಷೆಗೊಳಪಡುತ್ತಿದೆ. ನಾಲ್ಕು ಅವಧಿಯ ಒಂದುಡಜನ್ ಸುಧೀರ್ಘ ಸಮಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ಭೀಮಣ್ಣ ನಾಯ್ಕರಿಗೆ ಪಕ್ಷದ ಕೆಲವು ಸ್ಥರದ ನಾಯಕರು,ಕೆಲವು ವಿಭಾಗಗಳು ಸಹಕರಿಸುತ್ತಿಲ್ಲ. ಈ ದುರಿತ ಕಾಲದಲ್ಲೂ ಪಕ್ಷ ಮುನ್ನೆಡೆಸಿರುವ ಭೀಮಣ್ಣ ನಾಯಕರಿಗೆ ರಾಜ್ಯ ಮಟ್ಟದ ಪದಾಧಿಕಾರಿಗಳು ಕಾಲೆಳೆಯುವ ಕೆಲಸಮಾಡುತಿದ್ದಾರೆ ಎನ್ನುವ ಗುಟ್ಟು ಬಹಿರಂಗ ಸತ್ಯ. ಈ ವಿದ್ಯಮಾನದ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಹಿಂದೇಟು ಹಾಕುವ ಅನೇಕ ನಾಯಕರು ಸಂಘಟನೆ ಬೇಡ, ಅಲಂಕಾರಿಕ ಹುದ್ದೆ,ಪಕ್ಷದ ಟಿಕೇಟ್ ಮಾತ್ರ ತಮಗೆ ಬೇಕು ಎನ್ನುವ ರೀತಿ ವರ್ತಿಸುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೇ ಬೇಸರವಿದೆ ಎನ್ನಲಾಗುತ್ತಿದೆ.
ಕಾರವಾರದ ಮಾಜಿ ಶಾಸಕ ಸತೀಶ್ ಶೈಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎನ್ನುತ್ತಿರುವಂತೆ ಅವರೂ ಕೂಡಾ ಡಿ.ಸಿ.ಸಿ. ಜವಾಬ್ಧಾರಿ ಬೇಡ ಎಂದಿರುವ ವರ್ತಮಾನವಿದೆ. ಸಾಯಿಗಾಂವಕರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಉತ್ಸುಕರಾದರೂ ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಮತದಾರರಾದ ನಾಮಧಾರಿ- ದೀವರು ಅಥವಾ ಹವ್ಯಕರು ಜಿಲ್ಲಾಧ್ಯಕ್ಷರಾದರೆ ಉತ್ತಮ ಎನ್ನುವ ಹಿನ್ನೆಲೆಯಲ್ಲಿ ಭಟ್ಕಳದ ಮಾಜಿ ಶಾಸಕ ಜೆ.ಡಿ.ನಾಯ್ಕರಿಗೆ ಡಿ.ಸಿ.ಸಿ. ಅಧ್ಯಕ್ಷತೆಯ ಪಟ್ಟ ಕಟ್ಟಲು ಕಾಂಗ್ರೆಸ್ ಸಿದ್ಧತೆ ಮಾಡಿರುವ ವದಂತಿ ಕೇಳಿ ಬರುತ್ತಿದೆ. ಆದರೆ ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ಸತೀಶ್ ಶೈಲ್ ನಿರಾಕರಣೆಯ ನಂತರ ಯಾರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎನ್ನುವ ಪ್ರಶ್ನೆಗೆ ಈ ವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಅನಿವಾರ್ಯತೆಗಳಲ್ಲೆಲ್ಲಾ ಪಕ್ಷದ ನೆರವಿಗೆ ನಿಂತ ಭೀಮಣ್ಣ ಪಕ್ಷ ಸಂಘಟನೆ ಮಾಡುತ್ತಲೇ ಸರ್ಕಾರದ ಜವಾಬ್ಧಾರಿ ಹುದ್ದೆಗೇರಬೇಕು ಎನ್ನುವ ಕಾಂಗ್ರೆಸ್ ಪಕ್ಷದ ತೀರ್ಮಾನ ಡಿ.ಸಿ.ಸಿ. ಹುದ್ದೆಯ ಅಧ್ಯ ಕ್ಷರ ಆಯ್ಕೆ ಹಿಂದೆ ಕೆಲಸ ಮಾಡುವ ಅಂಶ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣ, ವಿದ್ಯಮಾನಗಳ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಉತ್ತರ ಕನ್ನಡ ಭೇಟಿಗೆ ಮಹತ್ವವಿದೆ ಎನ್ನಲಾಗುತ್ತಿದೆ.



