

- ಯಲ್ಲಾಪುರ ದಕ್ಷಿಣ ಭಾಗದಲ್ಲಿ ಧರೆ ಕುಸಿತ, ರಸ್ತೆ, ಮನೆಗಳಿಗೆ ಹಾನಿ
- ಶಿರಸಿ-ಸಿದ್ಧಾಪುರ ರಸ್ತೆ ಬಂದ್, ಶಿರಸಿ-ಸಿದ್ಧಾಪುರದ ನಗರ ಪ್ರದೇಶವೂ ಜಲಾವೃತ್ತ.
- * ಸಿದ್ಧಾಪುರ ಕಲ್ಯಾಣಪುರ-ಗೋಳಗೋಡು ರಸ್ತೆ ಸಂಪರ್ಕ ಕಡಿತ, ಮುಳುಗಿದ ಭತ್ತದ ಬೆಳೆ
- ಹೆಮ್ಮನಬೈಲ್, ಕಲ್ಯಾಣಪುರಗಳಲ್ಲಿ ಕಾಳಜಿಕೇಂದ್ರ ಪ್ರಾರಂಭ
- * ಅಂಕೋಲಾದಲ್ಲಿ ಪ್ರವಾಹ ಕಾರ್ಯಾಚರಣೆಯಲ್ಲಿದ್ದ ಇಬ್ಬರು ನೀರು ಪಾಲು
- * ಕೆರೆ ಒಡೆಯುವ ಅಪಾಯ


ಮಲೆನಾಡು ಕರಾವಳಿಯಲ್ಲಿ ವರ್ಷಧಾರೆ ತಗ್ಗಿಲ್ಲ, ಕಳೆದ 24 ಗಂಟೆಗಳಲ್ಲಿ ಸುರಿದ 200 ಮಿ.ಮೀ ಮಳೆ ಅಪಾರ ಹಾನಿ ಮಾಡಿದೆ. ಕರಾವಳಿ ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವ ನದಿಗಳು, ಬಿದ್ದ ಮರಗಳಿಂದ ಪ್ರಮುಖ ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಹಾಮಳೆಗೆ ನಗರ, ಗ್ರಾಮೀಣ ಪ್ರದೇಶಗಳೆನ್ನದೆ ಎಲ್ಲಾ ಕಡೆ ಜಲಾವೃತ್ತವಾದ ಪರಿಸ್ಥಿತಿಯಿಂದ ಜನರು ಮನೆಯಿಂದ ಹೊರಬರದ ಸ್ಥಿತಿ ಉಂಟಾಗಿದೆ.
ಶಿರಸಿ-ಸಿದ್ಧಾಪುರ ರಸ್ತೆ ಸೇರಿದಂತೆ ಪ್ರಮುಖ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಮಳೆ, ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾಡಳಿತ ಹೆಣಗಾಡುತ್ತಿದೆ. ಶಿರಸಿ-ಸಿದ್ಧಾಪುರ ಸೇರಿದಂತೆ ಜಿಲ್ಲೆಯ ನಗರಪ್ರದೇಶಗಳ ನೂರಾರು ಮನೆಗಳಿಗೆ ಮಳೆಯ ನೀರು ತುಂಬಿ ಕೆಲವೆಡೆ ಜನರನ್ನು ಸ್ಥಳಾಂತರಿಸಲಾಗಿದೆ. ಶಿರಸಿ ಮುಗವಳ್ಳಿ, ಸಿದ್ಧಾಪುರದ ಕಲ್ಯಾಣಪುರ, ಹೆಮ್ಮನಬೈಲು ಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಗುರುವಾರ-ಶುಕ್ರವಾರದ ಮಹಾಮಳೆಯಿಂದ ತೊಂದರೆಗೆ ಒಳಗಾದ ಜನರನ್ನು ಸ್ಥಳಾಂತರಿಸಲಾಗಿದ್ದು ಜಾನುವಾರುಗಳನ್ನು ಸಂಬಂಧಿಗಳ ಮನೆಗೆ ಸಾಗಿಸಲಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ಶಿರಸಿ,ಸಿದ್ಧಾಪುರ, ಯಲ್ಲಾಪುರಗಳಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗಳು, ಕೆಲವೆಡೆ ತೋಟ ಕೂಡಾ ನೀರಿನಲ್ಲಿ ಮುಳುಗಿದೆ. ಸಿದ್ಧಾಪುರದ ಕೆರೆಕಟ್ಟೆಗಳು ತುಂಬಿ ಒಡೆಯುವ ಅಪಾಯವಿದ್ದು ಕಾನಗೋಡಿನಲ್ಲಿ ನೂರಾರು ಎಕರೆ ಬೆಳೆ ತೊಳೆದುಹೋಗಿದೆ. ಪ್ರಮುಖ ರಸ್ತೆಗಳು ಧರೆಕುಸಿತದಿಂದ ಸಂಪರ್ಕ ಕಡಿದುಕೊಂಡಿದ್ದು ಜಿಲ್ಲಾಡಳಿತ ಇವುಗಳನ್ನು ತೆರವು ಮಾಡಲು ಸಮರೋಪಾದಿಯ ಕಾರ್ಯಾಚರಣೆ ನಡೆಸಿದೆ. ಹಲವೆಡೆ ಮರಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ವಿದ್ಯುತ್ ಸಂಪರ್ಕಕ್ಕೆ ವ್ಯತ್ಯಯ ಉಂಟಾಗಿದೆ.ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಪ್ರವಾಹ ಕಾರ್ಯಾಚರಣೆ ಮಾಡುತಿದ್ದ ಇಬ್ಬರು ವ್ಯಕ್ತಿಗಳು ನದಿಯಲ್ಲಿ ತೇಲಿಹೋಗಿದ್ದಾರೆ. ಕೆಲವೆಡೆ ರಸ್ತೆ ಕುಸಿದು, ಮನೆಗಳು ಹಾನಿಗೊಳಗಾಗಿವೆ. ಮಳೆ ಮಾಡಿರುವ ಹಾನಿ, ಅನಾಹುತದ ವರದಿಗಳು ಬರುತಿದ್ದು ಈ ವರ್ಷದ ಮಳೆ ಉತ್ತರ ಕನ್ನಡವನ್ನು ಕಂಗಾಲುಮಾಡಿದೆ.





