

ಕಾಂಗ್ರೆಸ್ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಸಮೀಕ್ಷೆ ನಡೆಸಿ ಪ್ರಾಮಾಣಿಕತೆ, ಸರಳತೆ, ಜನಪರತೆ, ಶುದ್ಧಚಾರಿತ್ರ್ಯ, ಸೈದ್ಧಾಂತಿಕ ಸ್ಫಷ್ಟತೆಗಳ ಆಧಾರದಲ್ಲಿ ಸಿದ್ಧರಾಮಯ್ಯ ಎಲ್ಲರಿಗಿಂತಲೂ ಬೆಸ್ಟ್ ಎನ್ನುವ ನಿರ್ಧಾರ ಮಾಡಿತ್ತಂತೆ! ಈಗ ಬಿ.ಜೆ.ಪಿ. ಇಂಥ ಸಮೀಕ್ಷೆ, ಜನಾಭಿಪ್ರಾಯದ ಮೊರೆ ಹೋದರೆ ಆಗ ಸಿಗುವ ಎರಡು ಹೆಸರು ಮಾಜಿ ಶಾಸಕ ಅರಗಜ್ಞಾನೇಂದ್ರ ಮತ್ತು ಸಚಿವ ಶ್ರೀನಿವಾಸ್ ಪೂಜಾರಿ ಮಾತ್ರ ಎನ್ನಲಾಗಿದೆ. ಹೇಳಿ ಕೇಳಿ ಆಶ್ಚರ್ಯಕರ ಆಯ್ಕೆಗೆ ಹೆಸರಾದ ಬಿ.ಜೆ.ಪಿ. ಹೈಕಮಾಂಡ್ ಬಿ.ಜೆ.ಪಿ. ಗೆ ಇರುವ ಜನವಿರೋಧ ಶಮನಕ್ಕೆ ರಾಜ್ಯದಲ್ಲಿ ಸರಳ ಮುಖ್ಯಮಂತ್ರಿ ನೇಮಕ ಆಗಬೇಕು ಎಂದು ನಿರ್ಧರಿಸಿದರೆ ಈ ಮಾನದಂಡದಲ್ಲೂ ಪೂಜಾರಿ ಮತ್ತು ಅರಗ ಜೊತೆಗೆ ಸೇರುವ ಮತ್ತೊಂದು ಹೆಸರು ಬಿ.ಎಲ್. ಸಂತೋಷ ಎಂದರೆ………………
ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುತ್ತಲೇ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಹೇರಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಲಿಂಗಾಯತರ ಅಭಯದಿಂದ ರಾಜ್ಯ ಆಳುತ್ತಿರುವ ಬಿ.ಜೆ.ಪಿ. ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಹೋಗಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿದೆ ಯೆ ಎಂದರೆ… ಅಲ್ಲಿಂದ ಬರುವ ಉತ್ತರ ಸವದಿ,ನಿರಾಣಿ.ಅರವಿಂದ ಬೆಲ್ಲದ ಸೇರಿದಂತೆ ಇನ್ನೂ ಎರಡ್ಮೂರು ಲಿಂಗಾಯತರೇ ನಮ್ಮ ಪಟ್ಟಿಯಲ್ಲಿದ್ದಾರೆ ಎಂದು ತೋರಿಸುತ್ತಿದೆ.
ಅಲ್ಲಿಗೆ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ, ಬಸವರಾಜ್ ಬೊಮ್ಮಾಯಿಗಳಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿಯಾಗಬಹುದು. ಹೀಗೆ ಇವರಲ್ಲಿ ಯಾರಾದರೂ ಮುಖ್ಯಮಂತ್ರಿಯಾದರೆ ನಾಯಕರು, ಮಠಾಧೀಶರ ಲಿಂಗಾಯತ್ ವಿರೋಧ ಶಮನವಾಗುತ್ತದೆ ಎನ್ನುವ ಮುಂದಾಲೋಚನೆಯಿಂದ ಈ ಕೆಲವೇ ಹೆಸರುಗಳನ್ನು ಬಿ.ಜೆ.ಪಿ. ಹಿಂದೆಮುಂದೆ ಮಾಡಿ ನಿರ್ಧಾರ ಪ್ರಕಟಿಸಲಿದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ ಎನ್ನುವಂತಿಲ್ಲ.
rss ಬ್ರಾಹ್ಮಣ ಲಾಬಿ- ಬಿ.ಜೆ.ಪಿ. ಶಕ್ತಿ,ನಿಯಂತ್ರಕ ದಂಡವಾದ ರಾ.ಸೇ.ಸಂಘ ಬಿ.ಎಲ್. ಸಂತೋಷ್, ಪ್ರಹಲ್ಹಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳನ್ನು ಸೂಚಿಸಿರುವಲ್ಲಿ ಯಾವುದೇ ವಿಶೇಷವಿಲ್ಲ ಯಾಕೆಂದರೆ ಸಂಘ ಬ್ರಾಹ್ಮಣರನ್ನು ಬಿಟ್ಟು ಬೇರೆಯವರ ಪರವಾಗಿ ವಕಾಲತ್ತು ವಹಿಸಿರುವ ಪ್ರಸಂಗ ಸಂಘದ ಇತಿಹಾಸದಲ್ಲೇ ಇಲ್ಲ.


ಈ ಬ್ರಾಹ್ಮಣ, ಲಿಂಗಾಯತ ಲೆಕ್ಕಾಚಾರ, ಲಾಬಿಗಳ ನಡುವೆ ಒಕ್ಕಲಿಗರಲ್ಲಿ ಸಿ.ಟಿ.ರವಿ ಹೆಸರು ಮುಂದೆ ಮಾಡಿ ತೆರೆಮರೆಯಲ್ಲಿರುವ ಸಜ್ಜನ ಅರಗ ಜ್ಞಾನೇಂದ್ರರನ್ನು ಅಥವಾ ಸಚಿವ ಶ್ರೀನಿವಾಸ (ಈಡಿಗ) ಪೂಜಾರಿಯವರನ್ನು ನಿಷ್ಠೆ, ಪ್ರಾಮಾಣಿಕತೆ, ವಿಧೇಯತೆಗಳ ಆಧಾರದಲ್ಲಿ ಮುಖ್ಯಮಂತ್ರಿಯನ್ನಾಗಿಸಿ ಬಿ.ಎಲ್. ಸಂತೋಷರ ಮೂಲಕ ಆಡಳಿತ ನಡೆಸುವ ಲೆಕ್ಕಾಚಾರ ಬಿ.ಜೆ.ಪಿ. ಮತ್ತು ಸಂಘದ ಹೈಕಮಾಂಡ್ ಯೋಚನೆ ಎನ್ನುವ ಊಹೆಗಳೂ ಇವೆ.
ಹೀಗೆ ಲೆಕ್ಕಾಚಾರ, ಜಾತಿಲಾಬಿ, ದಲಿತರ ಕೋಟಾ ಇವುಗಳ ಮಧ್ಯೆ ಬಿ.ಜೆ.ಪಿ., ರಾ.ಸೇ.ಸಂಘದ ಗುಪ್ತಕಾರ್ಯಸೂಚಿಗಳ ನಡುವೆ ಮುಂದಿನ ವಾರ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲಕ್ಕೆ ಈವರೆಗೂ ಸಷ್ಟ ಉತ್ತರ ಸಿಕ್ಕಿಲ್ಲ.

