
ಅರವಿಂದ ಬೆಲ್ಲದ್ ಮುಂದಿನ ಕರ್ನಾಟಕದ ಮುಖ್ಯಮಂತ್ರಿ, ಅರವಿಂದ ಬೆಲ್ಲದ್ ವೆಂಕಯ್ಯ ನಾಯ್ಡು,ಅಮಿತ್ಶಾ ರಿಂದ ಹಿಡಿದು ಅನೇಕ ಮುಖಂಡರ ಸಂಪರ್ಕದಲ್ಲಿದ್ದವರು.ಯಡಿಯೂರಪ್ಪನವರನ್ನು ಬದಲಾಯಿಸುವ ಕಾರ್ಯಯೋಜನೆ ಹಿಂದಿದ್ದ ವ್ಯಕ್ತಿ ಮತ್ತು ಯಡಿಯೂರಪ್ಪ ವಿರೋಧಿ ಬಣದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೇಂದ್ರಕ್ಕೆ ರಾಜ್ಯದ ವರ್ತಮಾನವನ್ನು ದಿನನಿತ್ಯ ಪೂರೈಸುತಿದ್ದವರು ಎಂದು ಹೇಳಲಾಗುತ್ತಿರುವ ಬೆಲ್ಲದ್ ಕೇಂದ್ರದ ಮುಖಂಡರ ನೆಚ್ಚಿನ ಆಯ್ಕೆ ಹಾಗಾಗಿ ಅವರ ಹೆಸರೇ ಇಂದು ಅಂತಿಮಗೊಳ್ಳುತ್ತಿದೆ ಎಂದು ಆರ್. ಎಸ್,ಎಸ್. ವಲಯ ಹೇಳುತ್ತಲೇ ಆಶ್ಚರ್ಯಕರವಾಗಿ ಇಂದು ಅಥವಾ ಒಂದು ವರ್ಷದೊಳಗೆ ಬಿ.ಎಲ್. ಸಂತೋಷ ಹೆಸರೇ ಅಂತಿಮಗೊಳ್ಳಲಿದೆ ಎನ್ನುವ ರಹಸ್ಯವನ್ನೂ ಪರಿವಾರ ಹೇಳುತ್ತಿದೆ!.
ಆದರೆ ಈ ಸಂಘ ಪರಿವಾರಕ್ಕೆ ತಲೆನೋವಾಗಿರುವ ಇನ್ನೊಂದು ಹೆಸರು ಮೂಲ ಜನತಾ ಪರಿವಾರದ ಬಸವರಾಜ್ ಬೊಮ್ಮಾಯಿ. ಬಸವರಾಜ್ ಬೊಮ್ಮಾಯಿ ಮಾಜಿಮುಖ್ಯಮಂತ್ರಿ ದಿ.ಎಸ್.ಆರ್. ಬೊಮ್ಮಾಯಿಯವರ ಪುತ್ರ. ರಾಜಕೀಯ ಮನೆತನದ ಹಿನ್ನೆಲೆ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಶರಣರ ಗುಣ, ವಿದ್ಯೆ-ವಿಲಯ,ಸರಳತೆ, ಬುದ್ಧಿವಂತಿಕೆ ಜೊತೆಗೆ ಚಾಣಾಕ್ಷತೆ ಈ ಎಲ್ಲಾ ಗುಣ ವಿಶೇಶಗಳ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ಪರಮಾಪ್ತರು. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಹಾಯಾಗಿ ವಿಶ್ರಾಂತಿ ಪಡೆಯಬಹುದು ಯಾಕೆಂದರೆ ಬೊಮ್ಮಾಯಿ ಯಡಿಯೂರಪ್ಪ ಪುತ್ರರ ಆಪ್ತರು.
ಇದೇ ಕಾರಣಕ್ಕೆ ಈಗ ಬಿ.ಜೆ.ಪಿ. ಸಂಘದ ವಲಯಗಳಲ್ಲಿ ಅಳೆದುತೂಗುವ ಕೆಲಸ ನಡೆಯುತ್ತಿದೆ. ಸಂಘ ಮತ್ತು ಬಿ.ಜೆ.ಪಿ. ಹೈಕಮಾಂಡ್ ಅರವಿಂದ ಬೆಲ್ಲದ್ ಎನ್ನುವ ಉದ್ಯಮಿಯನ್ನು ಬೆಂಬಲಿಸುವ ಹಿಂದೆ ಅವರದ್ದೇ ಆದ ಲೆಕ್ಕಾಚಾರಗಳಿವೆ. ಆದರೆ ಬೊಮ್ಮಾಯಿಗೆ ಯಡಿಯೂರಪ್ಪ ಜೊತೆಗೆ ಜನತಾಪರಿವಾರದ ಸಿದ್ಧರಾಮಯ್ಯ, ಜೆ.ಡಿ.ಎಸ್. ಪರಿವಾರದ ಬೆಂಬಲವಿದೆ.
ಸಂಘ ಮೊದಲು ಬಿ.ಎಲ್. ಸಂತೋಷರನ್ನು ಮುಖ್ಯಮಂತ್ರಿ ಮಾಡುವ ಕಸರತ್ತು ಮಾಡಿ ನಂತರ ಯಾರೇ ಆಗಲಿ ಅವರು ಬ್ರಾಹ್ಮಣರಾಗಲಿ ಎಂದು ತನ್ನ ಅಭಿಪ್ರಾಯ ತೇಲಿಸಿತ್ತು. ಬ್ರಾಹ್ಮಣರನ್ನು ಅಧಿಕಾರಕ್ಕೆ ಕೂರಿಸುವ ಸಂಘದ ಯತ್ನಕ್ಕೆ ತಮ್ಮ ಧ್ವನಿ ಸೇರಿಸಿದ ಮಾಧ್ಯಮಗಳು ಜೋಷಿ, ಹೆಗಡೆ, ಸಂತೋಷ, ಇನ್ನೂ ಅನೇಕರ ಹೆಸರು ಸೇರಿಸಿ ಜನಾಭಿಪ್ರಾಯಕ್ಕೆ ಯತ್ನಿಸಿದ್ದೇ ಪ್ರಯತ್ನಿಸಿದ್ದು!
ಈಗ ಸಂಘದ ಕಾರ್ಯಾಚರಣೆಗೆ ಏಟು ಬಿದ್ದಿದೆ. ಸಂಘ, ಬಿ.ಜೆ.ಪಿ. ಹೈಕಮಾಂಡ್ ಏನೆಲ್ಲಾ ಕಸರತ್ತು ನಡೆಸಿದರೂ ಅರವಿಂದ ಬೆಲ್ಲದ್ ರಿಗೆ ಬೆಂಬಲ ಸಿಗುತ್ತಿಲ್ಲ. ಬ್ರಾಹ್ಮಣರು, ಸಂಘ, ಸಂಘದ ಹಿನ್ನೆಲೆಯ ಶ್ರೀಮಂತರು, ಸಳತೆಯ ಸೋಗಿನ ಮುಖಂಡರು ಹೀಗೆ ಏನೇನೆಲ್ಲಾ ಪ್ರಯತ್ನ, ಪ್ರಯೋಗಗಳ ನಂತರ ಈಗ ಸಂಘದ ಬೆಲ್ಲದ್ ಗೆ ಎದುರಾಗಿ ಯಡಿಯೂರಪ್ಪ ಪರಿವಾರದ ಬಸವರಾಜ್ ಬೊಮ್ಮಾಯಿ ಅಂತಿಮ ಸ್ಫರ್ಧೆಯಲ್ಲಿದ್ದಾರೆ. ಇನ್ನೇನು ಎರಡ್ಮೂರು ಗಂಟೆಗಳ ಅವಧಿಗೆ ಮೊದಲು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವವರು ಸಂಘದ ಬೆಲ್ಲದ್ ಅಥವಾ ಜನತಾಪರಿವಾರದ ಬೊಮ್ಮಾಯಿ ಎನ್ನುವುದಷ್ಟೇ ಬಾಕಿ.
ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ಜನತಾಪರಿವಾರ ಪರಿಣಾಮಕಾರಿ ಎಂದು ಒಪ್ಪಿಕೊಂಡ ನಂತರ ಬಿ.ಜೆ.ಪಿ. ಕೂಡಾ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಕೋಮುವಾದಿ ಪರಿವಾರಕ್ಕಿಂತ ಜನತಾ ಪರಿವಾರ ಸ್ವೀಕಾರಾರ್ಹ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನು ಕೆಲವೇ ಸಮಯ ಬಾಕಿ ಎನ್ನುವುದು ಈಗಿನ ವಾಸ್ತವ.



