

ದೇಶದ ಒಕ್ಕೂಟ ಸರ್ಕಾರದ ಖಾಸಗೀಕರಣ ನೀತಿಗೆ ವಿರೋಧ ಹೆಚ್ಚುತ್ತಿದೆ. ಹಲವು ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿ ವ್ಯವಸ್ಥೆಗೆ ಒಪ್ಪಿಸಿದ ಕೇಂದ್ರ ಸರ್ಕಾರದ ನಡೆಯನ್ನು ಹಲವು ಸಂಘಟನೆಗಳು ವಿರೋಧಿಸಿವೆ. ದೇಶದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಖಾಸಗಿ ಕ್ಷೇತ್ರಕ್ಕೆ ನೀಡುವ ಕೇಂದ್ರ ಸರ್ಕಾರದ ಮಸೂದೆಗೆ ಆಗಷ್ಟ್ 10 ರಂದು ಅನುಮೋದನೆಯ ಒಪ್ಪಿಗೆ ಮುದ್ರೆ ಬೀಳಲಿದೆ.
ಮಳೆ, ಪ್ರವಾಹದಿಂದ ತಾಲೂಕಿನಾದ್ಯಂತ ವ್ಯಾಪಕ ಹಾನಿಯಾಗಿದ್ದು ಅದರ ಸಮೀಕ್ಷೆ ಕಾರ್ಯ ನಡೆದಿಲ್ಲ. ಸ್ಥಳಿಯ ಶಾಸಕರು ಸಂಸದರು ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಿಲ್ಲ, ತಾಲೂಕಿನ ರೈತರಿಗೆ ಸಾಮೂಹಿಕವಾಗಿ, ಸಮಗ್ರವಾಗಿ ಬೆಳೆಹಾನಿ ಪರಿಹಾರ ನೀಡಬೇಕು. ಜೀವ, ಬೆಳೆ, ಸಾರ್ವಜನಿಕ ಸ್ವತ್ತಿನ ಹಾನಿಗೆ ಸೂಕ್ತ ಪರಿಹಾರ ನ್ಯಾಯ ಒದಗಿಸಬೇಕು. ಜಿಲ್ಲೆಗೆ ಪ್ರವಾಹ ಪರಿಹಾರಕ್ಕೆ ಬಂದ 210 ಕೋಟಿ ಅನುದಾನದಲ್ಲಿ ರೈತರು, ಬೆಳೆಹಾನಿ ಪರಿಹಾರದ ಪ್ರಮಾಣ ಬಹಿರಂಗಪಡಿಸಬೇಕು.- ವೀರಭದ್ರ ನಾಯ್ಕ, ರೈತ ಸಂಘದ ಅಧ್ಯಕ್ಷ
ಈ ವರೆಗೆ ಆಡಳಿತಾರೂಢ ಕೇಂದ್ರ ಸರ್ಕಾರ ಹಲವು ಸಾರ್ವಜನಿಕ ಉದ್ದಿಮೆ ಸೇವಾಕ್ಷೇತ್ರಗಳನ್ನು ಖಾಸಗಿಯವರಿಗೆ ಒಪ್ಪಿಸಿದೆ. ಈಗ ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ಉದ್ದೇಶದಿಂದ ಮಸೂದೆ ಪಾಸು ಮಾಡಲು ಕೇಂದ್ರ ಮುಂದಾಗಿದೆ.
ಈ ಪ್ರಕ್ರೀಯೆಯನ್ನು ಜನವಿರೋಧಿ ತೀರ್ಮಾನ ಎಂದು ಕರೆದಿರುವ ರಾಜ್ಯ ರೈತ ಸಂಘ ಆಗಷ್ಟ್ 10 ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಲು ಕರೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ರಾಜ್ಯ ರೈತ ಸಂಘದ ಈ ವಿರೋಧಕ್ಕೆ ಬೆಂಬಲ ವ್ಯಕ್ತವಾಗಿದ್ದು ಆಗಸ್ಟ್ 10 ರಂದು ಜಿಲ್ಲೆಯ ಕೆಲವು ತಾಲೂಕುಗಳ ತಹಸಿಲ್ಧಾರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ವಿದ್ಯುತ್ ಕ್ಷೇತ್ರ ಖಾಸಗಿಕರಣದಿಂದ ಜನಸಾಮಾನ್ಯರು, ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ವಿತರಣೆ ನಿಗಮದ ನೌಕರರಿಗೆ ತೊಂದರೆಯಾಗಲಿದ್ದು ವಿದ್ಯುತ್ ಗ್ರಾಹಕರು ಮತ್ತು ನಿಗಮದ ನೌಕರರ ಪರವಾಗಿ ಹೋರಾಟ ಮಾಡುವುದಾಗಿ ರೈತಸಂಘ ಹೇಳಿದೆ. ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾಧ್ಯಕ್ಷ ವೀರಭದ್ರ ನಾಯ್ಕ ಮಳಲವಳ್ಳಿ ಕೇಂದ್ರ ವಿದ್ಯುತ್ ಖಾಸಗೀಕರಣ ಮಸೂದೆಗೆ ಅನುಮತಿ ನೀಡುವ ಆಗಷ್ಟ್ ಹತ್ತರಂದು ರೈತ ಸಂಘದ ಕರೆಯ ಮೇರೆಗೆ ಸಿದ್ಧಾಪುರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಈ ಪ್ರತಿಭಟನೆಗೆ ಪಕ್ಷಾತೀತವಾಗಿ ಎಲ್ಲಾ ರೈತರು,ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.



