

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ “ಬೆಳಕು ಯೋಜನೆ” ವಿದ್ಯುತ್ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವ ಅವಶ್ಯಕತೆಯಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ “ಬೆಳಕು ಯೋಜನೆ” ವಿದ್ಯುತ್ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವ ಅವಶ್ಯಕತೆಯಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ರಾಜ್ಯದ ಎಲ್ಲ ವಿಭಾಗಗಳಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಮಾಡಲು ತೀರ್ಮಾನಿಸಲಾಗಿದೆ. ಟಿಸಿ ಸುಟ್ಟರೆ 24 ಗಂಟೆಯಲ್ಲಿ ಬದಲಾವಣೆ ಮಾಡಲಾಗುವುದು, ಗಂಗಾ ಕಲ್ಯಾಣದ ಯೋಜನೆಗಳಿಗೆ 30 ದಿನದಲ್ಲಿ ಸಂಪರ್ಕ ನೀಡಲು , ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಡ್ ಮೀಟರ್ ಅಳವಡಿಕೆಗೆ ತೀರ್ಮಾನಿಸಲಾಗಿದೆ ಎಂದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 60ಕ್ಕೂ ಹೆಚ್ಚು ಸಬ್ ಸ್ಟೇಶನ್ ಮಾಡಲಾಗುವುದು, ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ಸರ್ಕಾರಕ್ಕೆ ಹೊರೆಯಾಗಲಿದೆ. ವಿದ್ಯುತ್ ಬಳಕೆ ಮಾಡಿದರೆ ಬಿಲ್ ಕಟ್ಟುವುದು ಎಲ್ಲರಿಗೂ ಅನ್ವಯವಾಗಲಿದೆ. ಎಲೆಕ್ಟ್ರಿಕ್ ರಿಚಾರ್ಜ್ ಸೆಂಟರ್ ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ತೀರ್ಮಾನಿಸಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಹೊಸ ನೇಮಕಾತಿಗಳ ಬಗ್ಗೆ ಸಾಕಷ್ಟು ಬೇಡಿಕೆ ದೂರು ಬಂದಿದೆ. ಲೈನ್ ಮನ್, ಜೆಇ ನೇಮಕದ ಬಗ್ಗೆ ಬೇಡಿಕೆ ಇದೆ. ವರ್ಷಪೂರ್ತಿ ವರ್ಗಾವಣೆ ದಂಧೆ ನಡೆಸುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸುನೀಲ್ ಕುಮಾರ್ ಹೇಳಿದರು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಕಡಿಮೆ ಮಾಡಲು ತೀರ್ಮಾನಿಸಿದ್ದು, 100 ದಿನದಲ್ಲಿ ಕಲಾವಿದರ ಮಾಹಿತಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಬಗ್ಗೆ ಬೆಳಕು ಚೆಲ್ಲುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.
