ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾಡುಪ್ರಾಣಿಗಳ ಹಾವಳಿಯಿಂದ ರೈತ ತೊಂದರೆಗೆ ಒಳಗಾಗುತಿದ್ದಾನೆ. ಈ ರಗಳೆ,ಹಾನಿಯಿಂದ ಪಾರಾಗಲು ಯಾವುದೇ ಪರಿಹಾರೋಪಾಯಗಳಿಲ್ಲ. ಕಾಡುಪ್ರಾಣಿಗಳು ಮಾಡುವ ಬೆಳೆ ನಾಶಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆಯಾದರೂ ಅದು ಅತ್ಯಲ್ಫ ಇಂಥ ಕಾಡುಪ್ರಾಣಿ ಹಾವಳಿ ತಡೆ ಮತ್ತು ರೈತರ ಹಿತರಕ್ಷಣೆ ಹಿನ್ನೆಲೆಯಲ್ಲಿ ಅನೇಕ ಪ್ರತಿಭಟನೆ, ಜನಸಂಘಟನೆಗಳಾಗಿವೆ. ಈ ಕಾಡು ಪ್ರಾಣಿಗಳಲ್ಲಿ ರೈತರ ಬೆಳೆಗೆ ಕಂಟಕವಾಗಿರುವುದು ಕಾಡು ಹಂದಿ ಪಡೆ. ಒಂಟಿಗ ಕಾಡುಹಂದಿ ಹಾಗೂ ಕಾಡುಹಂದಿ ಗುಂಪುಗಳು ಅಡಿಕೆ, ತೆಂಗು, ಬಾಳೆ ಸೇರಿದಂತೆ ಎಲ್ಲಾ ಕೃಷಿ ಉತ್ಫನ್ನಗಳನ್ನು ತಿಂದು,ಹಾಳುಮಾಡಿ ಹಾನಿಮಾಡುತ್ತವೆ. ಈ ಕಾಡುಹಂದಿ ಹಾವಳಿ ತಡೆಯಲು ಅವುಗಳನ್ನು ಭೇಟೆಯಾಡುವುದೊಂದೇ ಪರಿಹಾರ ಸೂತ್ರ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ. ನೆರೆಯ ಗೋವಾ-ಕೇರಳ ರಾಜ್ಯಗಳಲ್ಲಿ ಕಾಡುಹಂದಿಗಳನ್ನು ಭೇಟೆಯಾಡಲು ಸರ್ಕಾರ ಅನುಮತಿ ನೀಡಿದೆ ಆದರೆ ಕರ್ನಾಟಕದಲ್ಲಿ ಕಾಡುಹಂದಿ ಭೇಟೆ ನಿಷೇಧಿಸಲ್ಪಟ್ಟಿದ್ದು ಕಾಡು ಹಂದಿ ಬೇಟೆ ಮಾಡಿ ಬೆಳೆ ರಕ್ಷಿಸಿಕೊಳ್ಳುವ ರೈತರಿಗೆ ತೊಂದರೆಯಾಗುವಂಥ ಕಾನೂನು ಕಟ್ಟಳೆ ಗಳು ಕರ್ನಾಟಕದಲ್ಲಿ ಜಾರಿಯಲ್ಲಿವೆ. ಈ ಕಾನೂನು ಕಟ್ಟುಪಾಡುಗಳನ್ನು ಸಡಿಲಿಸಿ ಕಾಡುಹಂದಿ ಭೇಟೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಈ ಬಗ್ಗೆ ತಮ್ಮ ಅನುಭವದ ಅನಿಸಿಕೆ ಹಂಚಿಕೊಂಡಿರುವ ಪ್ರಗತಿಪರ ಕೃಷಿಕ ಡಿ.ಕೆ.ನಾಯ್ಕ ತೆಂಗಿನಮನೆ ನೆರೆಯ ಗೋವಾ, ಕೇರಳಗಳಲ್ಲಿ ಕರ್ನಾಟಕದಷ್ಟು ದೊಡ್ಡ ಪ್ರಮಾಣದಲ್ಲಿ ಕೃಷಿ ಭೂಮಿಯಿಲ್ಲ ಆದರೆ ಅಲ್ಲಿಯ ಸರ್ಕಾರಗಳು, ಜನಪ್ರತಿನಿಧಿಗಳು ಆ ರಾಜ್ಯಗಳಲ್ಲಿ ಕಾಡುಹಂದಿ ಬೇಟೆಗೆ ಅವಕಾಶಕಲ್ಫಿಸುವಂತೆ ಸರ್ಕಾರಗಳಿಗೆ ಮನವರಿಕೆ ಮಾಡಿ ಕಾನೂನು ಸಡಿಲಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಡುಹಂದಿ ಮತ್ತು ಕಾಡುಪ್ರಾಣಿಳಿಂದ ಆಗುತ್ತಿರುವ ಅನಾಹುತ, ಬೆಳೆನಾಶಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿಲ್ಲ. ಈ ಬಗ್ಗೆ ವಿಸ್ತ್ರತ ಚರ್ಚೆಯಾಗಿ ರೈತರಿಗೆ ಕಂಟಕವಾಗಿರುವ ಕಾಡುಹಂದಿ ಭೇಟೆಗೆ ಅವಕಾಶ ಕಲ್ಫಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ರೈತಸಂಘ ಮತ್ತು ಇತರ ಪಕ್ಷ, ಸಂಘಟನೆಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ವಿದ್ಯುತ್ ತಂತಿ ಸಮಸ್ಯೆ-
ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಗಮ ವಿದ್ಯುತ್ ಸಂಪರ್ಕ ವಿತರಣೆಗಾಗಿ ರಾಜ್ಯದಾದ್ಯಂತ ವಿದ್ಯುತ್ ತಂತಿ,ಲೈನ್ ಗಳನ್ನು ಅಳವಡಿಸಿದೆ. ಹೀಗೆ ಬಹುಹಿಂದೆ ಅಳವಡಿಸಿದ ವಿದ್ಯುತ್ ಸರಬರಾಜು ತಂತಿ ಮಾರ್ಗ ರೈತರ ಭೂಮಿ ಜಮೀನುಗಳ ಮೂಲಕ ಹಾಯ್ದು ಹೋಗಿದೆ. ಇಂಥ ವಿದ್ಯುತ್ ಮಾರ್ಗ, ತಂತಿಗಳಿಂದ ರೈತರ ಜನ-ಜಾನುವಾರುಗಳಿಗೆ ಕಂಟಕವಾಗುತ್ತಿದೆ. ಈ ತಂತಿ ವ್ಯವಸ್ಥೆಯನ್ನು ಸರ್ಕಾರ, ನಿಗಮ ಬದಲಿಸುವುದಿಲ್ಲ, ರೈತರು ಬದಲಿಸಲು ಕೋರಿದರೆ ರೈತರಿಗೆ ಖರ್ಚು ವಿಧಿಸಲಾಗುತ್ತದೆ. ರೈತರನ್ನು ಕೇಳದೆ ನಿಗಮ ವಿದ್ಯುತ್ ಸಂಪರ್ಕ ತಂತಿ ಅಳವಡಿಸಿದ ಲೈನ್ ಗಳಿಂದ ಅಪಾಯವಾದರೆ ರೈತರ ಪರ ನಿಲ್ಲುವವರು ಯಾರು? ಈ ಕಾರಣಗಳಿಂದ ವಿದ್ಯತ್ ಲೈನ್ ಸ್ಥಳಾಂತರಕ್ಕೆ ರೈತರಿಗೆ ಹೊರೆಮಾಡದೆ ಸರ್ಕಾರ ಈ ವಿದ್ಯುತ್ ಲೈನ್ ಸ್ಥಳಾಂತರ ಮಾಡಬೇಕೆಂದು ರೈತರು ಸರ್ಕಾರವನ್ನು ಕೋರಿದ್ದಾರೆ.
ಈ ಬಗ್ಗೆ ಸಚಿವ ಸುನಿಲ್ ಕುಮಾರರಿಗೆ ಮನವಿ ನೀಡುವ ಸುಳಿವು ನೀಡಿರುವ ಯುವ ರೈತರಾದ ಸಂತೋಷ ಕಲಕರಡಿ, ಪಾಂಡುರಂಗ ನಾಯ್ಕ, ಸುದರ್ಶನ ನಾಯ್ಕ, ರಾಮಚಂದ್ರನಾಯ್ಕ ಸೇರಿದ ರೈತರು ಇದಕ್ಕೆ ರೈತಸಂಘ, ಇತರ ಸಂಘಟನೆಗಳ ಬೆಂಬಲ ಕೋರಿದ್ದಾರೆ.