

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮದಲ್ಲಿ ಕಳ್ಳತನಕ್ಕೆ ಹೊಂಚುಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯ ಒಳಗೆ ಹಣ-ಆಭರಣಗಳಿಗಾಗಿ ಹುಡುಕಿ ಕೊನೆಗೆ ಮನೆಯ ಎದುರಿಗಿದ್ದ ಕಾರ್ ಕದ್ದೊಯ್ದ ಘಟನೆ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ ಸಮಯದೊಳಗೆ ನಡೆದಿದೆ.
ಶಿರಳಗಿಯ ಖಾಸಗಿ ಬ್ಯಾಂಕ್ ಉದ್ಯೋಗಿ ಮತ್ತು ಶಿಕ್ಷಕಿ ದಂಪತಿಗಳ ಮನೆಯಲ್ಲಿ ಯಾರೂ ಇರದಿರುವುದನ್ನು ಅರಿತ ಕಳ್ಳರು ಬೆಳಿಗ್ಗೆ 2-3 ಗಂಟೆಯ ಸಮಯಕ್ಕೆ ಬಾಗಿಲು ಒಡೆದು ಮನೆಗೆ ನುಗ್ಗಿದ್ದಾರೆ. ಮನೆಯ ಒಳಗೆ ಆಭರಣ-ಹಣಕ್ಕಾಗಿ ತಡಕಾಡಿದ್ದಾರೆ. ಯಾವ ಸ್ವತ್ತೂ ಸಿಗದೆ ವಾರ್ಡ್ ರೋಬ್ ನಲ್ಲಿ ದೊರೆತ ಕಾರ್ ಆರ್.ಸಿ. ಪುಸ್ತಕ ಹಿಡಿದು ಮನೆಯ ಮೇಜಿನ ಮೇಲಿದ್ದ ಕಾರ್ ಕೀಲಿ ಪಡೆದು ಕಾರ್ ನೊಂದಿಗೆ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಮಾಹಿತಿ ಮೇರೆಗೆ ಪೊಲೀಸ್ ದೂರು ದಾಖಲಿಸಿ ಪರಿಶೀಲಿಸಿದಾಗ ಕಳ್ಳರು ಕಳ್ಳತನಕ್ಕಾಗಿ ಪ್ರಯತ್ನಿಸಿ ವಿಫಲರಾಗಿ ನಂತರ ಕಾರ್ ನೊಂದಿಗೆ ಪರಾರಿಯಾದ ವಾಸ್ತವ ತಿಳಿದಿದೆ.
ಸ್ಥಳಿಯರ ಮಾಹಿತಿ ಪ್ರಕಾರ ಬೆಳಿಗ್ಗೆ 2 ಗಂಟೆಯಿಂದ 2.30 ರ ಅವಧಿಯಲ್ಲಿ ಬಾಗಿಲು ಒಡೆದ ಶಬ್ಧ, ನಂತರ ಕಾರಿನ ಅವಾಜ್ ಗಮನಕ್ಕೆ ಬಂದಿದೆ. ಆದರೆ ಕಳ್ಳತನದ ಬಗ್ಗೆ ಸಂಶಯಿಸದ ಸ್ಥಳಿಯರು ತೆಂಗಿನ ಮರದಿಂದ ಕಾಯಿ ಬಿದ್ದಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಮುಂಜಾನೆಯ ವೇಳೆ ಕಳ್ಳತನದ ವಿಷಯ ತಿಳಿಯುತ್ತಲೇ ಶಬ್ಧಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪುರುಷೋತ್ತಮ ನಾಯ್ಕ ಕೆಲವು ದಿವಸ ಶಿರಳಗಿಯಲ್ಲಿ ಕೆಲವು ದಿವಸ ಹೊರ ಊರಲ್ಲಿ ಕುಟುಂಬದೊಂದಿಗೆ ಇರುತಿದ್ದರು. ಈ ಮಾಹಿತಿ ಸಂಗ್ರಹಿಸಿದ ಕಳ್ಳರು ಅವರ ಕುಟುಂಬ ಶಿರಳಗಿಯ ಮನೆಯಲ್ಲಿರದಿರುವುದನ್ನು ಖಚಿತಪಡಿಸಿಕೊಂಡು ಬಾಗಿಲು ಒಡೆದಿದೆ. ಈ ಕಳ್ಳತನದ ವೇಳೆ ಬೀಡಿ ಸೇದು ಎಸೆದಿರುವ ಕುರುಹುಗಳಿದ್ದು ಹಣ-ಆಭರಣ ದೋಚುವ ಉದ್ದೇಶದಿಂದ ಬಂದವರು ಹತಾಶರಾಗಿ ಕಾರ್ ಅಪಹರಿಸಿರುವ ಸಾಧ್ಯತೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿದ್ಧಾಪುರ ಪೊಲೀಸರು ಕಳ್ಳರು ಶಿವಮೊಗ್ಗ ಜಿಲ್ಲೆಯ ಕಡೆಯಿಂದ ಬಂದಿದ್ದು ಒಳದಾರಿಯಿಂದ ಪರಾರಿಯಾಗಿರುವ ಸಾಧ್ಯತೆ ಬಗ್ಗೆ ಊಹಿಸಿದ್ದಾರೆ.
ಭಟ್ಕಳ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : ಸಾಗವಾನಿ ಮರ ಕಡಿದು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ
ಕಾರವಾರ : ಭಟ್ಕಳ ತಾಲೂಕಾ ಅರಣ್ಯ ವಲಯ ವ್ಯಾಪ್ತಿಯ ಶಿರಾಲಿ ಶಾಖೆಯ ಕೊಪ್ಪಾ ಮೀಸಲು ಅರಣ್ಯ ಸರ್ವೆ ನಂ.157 ರಲ್ಲಿ ಸಾಗವಾನಿ ಮರ ಕಡಿದು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಇಲಿಯಾಸ ಕೊಳಗೇರಿ,ಉತ್ತರಕೊಪ್ಪಾ ಮತ್ತು ಸೋಮ ಕೃಷ್ಣ ಮರಾಠಿ,ಉತ್ತರಕೊಪ್ಪಾ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ದಂಡ ವಸೂಲಿ ಮಾಡಲಾಯಿತು.
ಅಕ್ರಮವಾಗಿ ಕಡಿದ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿಗಳಿಂದ ರೂ.25000/- ದಂಡ ವಸೂಲಿ ಮಾಡಲಾಯಿತು.ಈ ಕಾರ್ಯಚರಣೆಯಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ಆರ್.ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿಗಳಾದ ಜಗದೀಶ ನಾಯ್ಕ,ಮಧುಕುಮಾರ ನಾಯ್ಕ, ಸಂದೀಪ ಭಂಡಾರಿ,ಶ್ರೀಕಾಂತ ಪವಾರ,ಗಣಪತಿ ನಾಯ್ಕ,ಅರಣ್ಯ ರಕ್ಷಕರಾದ ಸಚಿನ್ ಕಾಡು ಗೋಲಬಾವಿ,ಮೃತ್ಯುಂಜಯ,ಪುಂಡಲೀಕ ಮತ್ತು ವಾಹನ ಚಾಲಕರು ಪಾಲ್ಗೊಂಡಿದ್ದರು.ತಾಲೂಕಿನಲ್ಲಿ ನಡೆದ ಅರಣ್ಯ ಇಲಾಖೆಯ ಈ ಕಾರ್ಯಾಚರಣೆಗೆ ತಾಲೂಕಿನಾದ್ಯಂತ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ.


