

ಈ ಟಿ.ವಿ. ಕನ್ನಡದ ಶುರುವಾತಿನಲ್ಲಿ ಕನ್ನಡಪ್ರಭದಿಂದ ಬಂದಿದ್ದ ಮನೋಹರ್ ಯಡವಟ್ಟಿ ಯುವ ತಂಡವೊಂದನ್ನು ಕಟ್ಟಿದ್ದರು. ಅದೇ ತಂಡ ಈಗ 1 ಟು 100,ಎ ಟು ಜಡ್ ಟಿ.ವಿ.ಗಳಲ್ಲಿ ಪ್ರಮುಖ ಹುದ್ದೆಗಳಲ್ಲಿದೆ. ಈ ಯಡವಟ್ಟಿಯವರ ನಂತರ ಕೆ.ಎಂ.ಮಂಜುನಾಥ್ ಎಂಬ ಕನಸುಗಾರ ಈ ಟಿ.ವಿ.ನ್ಯೂಸ್ ಗೆ ಹೊಸ ರೂಪ ಕೊಟ್ಟರು. ಅವರ ನಂತರ ಜಿ.ಎನ್. ಮೋಹನ್ ಈ.ಟಿ.ವಿ.ಗೆ ಸಮಾಜಮುಖಿಯ ರೂಪ ಕೊಟ್ಟರು.
ಮನೋಹರ್ ಯಡವಟ್ಟಿ ಮತ್ತು ಜಿ.ಎನ್.ಮೋಹನ್ ರಂಥ ಅನುಭವಿ ಸಮತಾವಾದಿಗಳ ನಡುವೆ ಈ ಟಿ.ವಿ. ಕನ್ನಡದ ಚುಕ್ಕಾಣಿ ಹಿಡಿದಿದ್ದವರು ಕೆ.ಎ.ಎಸ್. ಪಾಸುಮಾಡಿ ರಾಜೀನಾಮೆ ಒಗೆದು ಬಂದಿದ್ದ ಮಂಜುನಾಥ್.
ಕೆ.ಎಂ.ಮಂಜುನಾಥ್ ರಲ್ಲಿ ಸಾಹಸ ಮಾಡುವ ಉತ್ಸಾಹವಿತ್ತು. ತಂಡ ಕಟ್ಟುವ ಹುರುಪಿತ್ತು ಅದಕ್ಕಿಂತ ಹೆಚ್ಚಾಗಿ ದೋಸೆ ತಿರುವಿ ಹಾಕಿದಂತೆ ವ್ಯವಸ್ಥೆ ಬದಲಾಯಿಸಿಬಿಡುತ್ತೇನೆ ಎನ್ನುವ ಧಾವಂತವಿತ್ತು. ಮುಂದೆ ನಡೆದಿದ್ದೇ ಬೇರೆ.
ಈ ಅವಧಿಯಲ್ಲಿ ದಾಡಿ ಬಿಟ್ಟು, ಬಗಲಲ್ಲಿ ಒಂದು ಚೀಲ ನೇತು ಬಿಟ್ಟವರೆಲ್ಲಾ ಪತ್ರಕರ್ತರಲ್ಲ, ಕಾರ್ಪೋರೇಟ್ ಉದ್ಯೋಗಿಗಳ ರೀತಿ ಟೀಕುಟಾಕಾಗಿರುವವರೂ ಪತ್ರಕರ್ತರಾಗಬಹುದು ಎಂದು ನಿರೂಪಿಸಿದವರು ಮಂಜುನಾಥ್.
ಈ ಮಂಜುನಾಥ್ ನಮ್ಮ ಬಳಗದ ಶಾಸ್ತ್ರೀ ಎನ್ನುವ ಉದ್ಯೋಗಿಗೆ ಹೇಳಿದ ಕೆಲವು ಸತ್ಯಗಳ ಬಗ್ಗೆ ಹಿಂದೆದೋ ಬರೆದ ನೆನಪು. ಅದಿರಲಿ ಕೆ.ಎಂ. ಮಂಜುನಾಥ್ ಹುಬ್ಬಳ್ಳಿಯಲ್ಲಿ ನಮಗೆ ಸಭೆ ನಡೆಸಿ ವೈಯಕ್ತಿಕ ಸಂದರ್ಶನ ನಡೆಸಿದವರು ನಾನು ಹುಡುಕುತಿದ್ದ ಹುಡುಗ ಇಂದು ಸಿಕ್ಕ ಎಂದು ನನ್ನನ್ನು ಹೈದರಾಬಾದಿಗೆ ಕರೆಸಿಕೊಂಡಿದ್ದು ನಂತರ ಅಲ್ಲಿ ಮಂಜುನಾಥ್ ಅನುಪಸ್ಥಿತಿಯಲ್ಲಿ ನನಗಾದ ರಗಳೆ ಇವೆಲ್ಲಾ ಈಗ ಇತಿಹಾಸ.
ಮರೆಯುವ ಮುನ್ನ ಬರೆದೇ ಬಿಡಬೇಕೆಂದು ಕೊರೆಯುವ ಸತ್ಯವೊಂದನ್ನು ಗೀಚುವುದಕ್ಕಾಗಿ ಇದನ್ನೆಲ್ಲಾ ಸಾಂದರ್ಭಿಕವಾಗಿ ಹೇಳಬೇಕಾಯಿತು.
ಅಂದಹಾಗೆ….. ಉತ್ತರ ಕನ್ನಡದ ಮುಂಡಗೋಡಿನಲ್ಲಿ ಸುಳ್ಳಳ್ಳಿ ಎನ್ನುವ ಹಳ್ಳಿಯೊಂದಿದೆ. ಆ ಹಳ್ಳಿಯಲ್ಲಿ ಹಿಂದುಳಿದ ಸಮೂದಾಯದ ಕರೆ ಒಕ್ಕಲಿಗರ ಸಮೂದಾಯದ ಜನರೇ ಹೆಚ್ಚು. ಆ ಗ್ರಾಮಕ್ಕೆ ಕಿವುಡಳ್ಳಿ ಎನ್ನುವ ಅನ್ವರ್ಥಕ ನಾಮವೂ ಇತ್ತೀಚಿನ ವರ್ಷಗಳಲ್ಲಿ ಅಂಟಿಕೊಂಡಿದೆ. ಈ ಗ್ರಾಮದ ಮುಗ್ಧರನ್ನು ಬಳಸಿಕೊಂಡ ಅಂತರಾಷ್ಟ್ರೀಯ ಸೇವಾ ಸಂಸ್ಥೆಯೊಂದು ಬಿಲಿಯನ್ ಗಟ್ಟಳೆ ಹಣ ವ್ಯಯಿಸಿ ಇಲ್ಲಿಯ ಜನರ ಕಿವುಡತನ ನಿವಾರಿಸಿದ್ದೇವೆ ಎಂದು ಪ್ರಚಾರ ಪಡೆದಿತ್ತು.
ಹುಬ್ಬಳ್ಳಿ, ಮುಂಡಗೋಡಿನ ನಂಟಿದ್ದ ನನಗೆ ಈ ವಿಚಾರ ತಿಳಿಯಿತು. ಈಟಿ.ವಿ. ಮಂಜುನಾಥ್ ರಿಗೆ ಈ ವಿಷಯ ತಿಳಿಸಿ, ಬಹುಶ: ಸಿದ್ದೂ ಕಾಳೋಜಿ, ಕೇಶವ ಅಡಿ ಮಾರ್ಗದರ್ಶನದಲ್ಲಿ ಒಂದು ತನಿಖಾ ವರದಿ ತಯಾರಿಸಿದೆವು.
ವಿಶ್ವಮಾನ್ಯತೆಯ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸೇವೆಯ ದೆಸೆಯಿಂದಾಗಿ ಕುಗ್ರಾಮ ಸುಳ್ಳೊಳ್ಳಿಗೆ ಕಿವುಡಳ್ಳಿ ಎನ್ನುವ ಅಪಪ್ರಚಾರದಿಂದಾಗಿ ಆ ಹಳ್ಳಿಯ ಯುವಕರಿಗೆ ಪರ ಊರವರು ಹೆಣ್ಣು ಕೊಡದೆ ಈ ಸುಳ್ಳೊಳ್ಳಿಯ ಕನ್ಯೆಯರಿಗೆ ವರ ಸಿಗದ ರಾದ್ಧಾಂತವಾಗಿತ್ತು. ನಮ್ಮ ತನಿಖಾ ವರದಿ ಅಂತರಾಷ್ಟ್ರೀಯ ಸೇವೆಯ ಮುಖವಾಡ ಕಿತ್ತು ಬೋಳಿಗೆ ತಪರಾಕಿ ಬಿಗಿಯಲು ನೆರವಾಗಿತ್ತು. ನಂತರ ಈ ಗ್ರಾಮದ ಅರ್ಹ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ದೊರೆಯಿತು ಎನ್ನುವುದು ಸುದ್ದಿಯಾಗಲೇ ಇಲ್ಲ.
ಆದರೆ ಈ ವರದಿ ಮಾಡಿದ ಪರಿಣಾಮ ನಮಗೆ ಹಿತಶತ್ರುಗಳು ವೃದ್ಧಿಯಾಗುವಂತಾಯಿತು. ಇಂದು ನಾಗೇಶ್ ಹೆಗಡೆಯವರ ಲೇಖನ ಒಂದನ್ನು ಓದಿದ ಮೇಲೆ ಪ್ಲಾಶ್ಬ್ಯಾಕ್ ಸರಿದು ಹೋಯಿತು.ಈಗಾಗಲೇ ಮಾಧ್ಯಮಕ್ಷೇತ್ರದ ಮೌಲ್ಯದ ಮಳೆ ಸಾಕಷ್ಟು ಕೊಚ್ಚೆಯನ್ನು ತೊಳೆದುಹೋಗಿದೆ ಕೂಡಾ. ಗ್ರಾಮ ಪಂಚಾಯತ್ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಹಣ-ಕೀರ್ತಿ,ಅಧಿಕಾರ,ಅವಕಾಶ ಬಹಳಷ್ಟು ಒಳ್ಳೆಯದನ್ನು ಮಾಡಿದ್ದರೆ ಅದರೊಂದಿಗೇ ಸಾಕಷ್ಟು ರಾದ್ಧಾಂತಗಳೂ ನಡೆದಿರುತ್ತವೆ. ಆದರೆ ಯಾರದೋ ಕೀರ್ತಿ-ಹಣ, ಲಾಭ, ದುರಾಸೆಗೆ ಸುಳ್ಳಳ್ಳಿಯಂಥ ಮುಗ್ಧರು ಬಲಿಯಾಗಬಾರದು ಆ ಮನುಷ್ಯತ್ವ,ಒಳ್ಳೆ ಮನಸ್ಸು ಇಲ್ಲದಿದ್ದರೆ ಅಂಥವರು ಏನಾಗಿ ಏನಾಗಬೇಕು? -ನಿಮ್ಮ ಕನ್ನೇಶ್.
