ಕೆಮಿಕಲ್ ಟ್ಯಾಂಕರ್ ಸ್ಫೋಟ ; ಗದ್ದೆ, ತೋಟದ ಜತೆಗೆ ಹೊತ್ತಿ ಉರಿದ ಅರಣ್ಯ ಪ್ರದೇಶ
ಆರತಿ ಬೈಲು ಘಟ್ಟದಲ್ಲಿ ಇಂತಹ ಘಟನೆ ಪದೇಪದೆ ಸಂಭವಿಸುತ್ತಿವೆ. ರೈತರು ಹಾಗೂ ಸಾರ್ವಜನಿಕರು ಆತಂಕದಿಂದಲೇ ಕಾಲಕಳೆಯುವಂತಾಗಿದೆ..
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಅನಾಹುತಗಳು ಆಗಾಗ ನಡೆಯುತ್ತಿರುತ್ತವೆ. ಬುಧವಾರ ಸಹ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಿಂದ ಬೆಂಕಿ ಹತ್ತಿಕೊಂಡಿದೆ. ಬೆಳೆಗಳಿಗೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಟ್ಯಾಂಕರ್‌ನಿಂದ ಕೆಮಿಕಲ್ ಸೋರಿಕೆಯಿಂದ ಬೆಳೆಗಳಿಗೆ ಬೆಂಕಿ..
ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 63ರ ಆರತಿಬೈಲು ಘಟ್ಟದಲ್ಲಿ ಪಲ್ಟಿಯಾಗಿದೆ. ಇನ್ನು, ಪಲ್ಟಿಯಾಗಿ ಕೆಮಿಕಲ್ ಸೋರಿಕೆಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ.
ಪ್ರಾರಂಭದಲ್ಲಿ ಟ್ಯಾಂಕರಿಗೆ ಮಾತ್ರ ಬೆಂಕಿ ತಗುಲಿದೆ. ನಂತರ ಟ್ಯಾಂಕರ್‌ನಿಂದ ಕೆಮಿಕಲ್ ಸೋರಿಕೆಯಾಗಿ ಸಮೀಪದ ಅರಣ್ಯ, ಗದ್ದೆ ತೋಟಗಳಿಗೆ ಹೋಗಿ ಬೆಂಕಿ ಹತ್ತಿ ಗದ್ದೆ, ತೋಟ ನಾಶವಾಗಿವೆ.
ಇದಲ್ಲದೇ ಸಮೀಪದ ಹೊಳೆಯ ನೀರಿಗೆ ಸಹ ಕೆಮಿಕಲ್ ಸೇರ್ಪಡೆಯಾಗಿ ಸುಮಾರು ನೂರರಿಂದ ಇನ್ನೂರು ಮೀಟರ್ ಹೊಳೆಯ ನೀರಿನ ಮೇಲೂ ಸಹ ಬೆಂಕಿ ಹೊತ್ತಿ ಉರಿದಿದೆ. ಘಟನೆಯಿಂದ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ. ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸವನ್ನೇ ಪಡುವಂತಾಗಿದೆ.
ಆಯಿಲ್ ಪೇಯಿಂಟ್ಗೆ ಬಳಸುವ ಬೆಂಜಿನ್ ಪೆಟ್ರೋಕೆಮಿಕಲ್ ರಾಸಾಯನಿಕಯವನ್ನು ಟ್ಯಾಂಕರ್ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ವಾಹನ ಸಾಗುತ್ತಿತ್ತು. ಮೂಲಗಳ ಪ್ರಕಾರ ಗುಜರಾತ್ಗೆ ಟ್ಯಾಂಕರ್ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಕೆಮಿಕಲ್ ಸೋರಿಕೆಯಾಗಿ ಹೊಳೆಗೂ ಬೆಂಕಿ
ಘಟನಾ ಸ್ಥಳಕ್ಕೆ ಹಾನಗಲ್ ಚುನಾವಣಾ ಪ್ರಚಾರವನ್ನ ಬಿಟ್ಟು ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಪರಿಶೀಲಿಸಿದರು. ಕೆಮಿಕಲ್ ನೀರಿಗೆ ಸೇರ್ಪಡೆಯಾಗಿದ್ದು ಈ ಬಗ್ಗೆ ಪರಿಶೀಲಿಸಲು ಮಂಗಳೂರಿನಿಂದ ಪರಿಣಿತರ ತಂಡ ಬರುವುದಾಗಿ ಸಚಿವರು ಹೇಳಿದರು.
ಘಟನೆ ನಡೆದ ಸಂದರ್ಭ ಬೆಳಗ್ಗೆಯಾಗಿದ್ದರಿಂದ ಸುತ್ತಮುತ್ತಲೂ ವಾಹನ ಓಡಾಟ ಇಲ್ಲದಿರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಸುಮಾರು ಒಂದು ಎಕರೆಗೂ ಅಧಿಕ ಗದ್ದೆ ಹಾಗೂ ತೋಟ ಸಂಪೂರ್ಣ ಹಾನಿಯಾಗಿದೆ. ಪರಿಹಾರ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಆರತಿ ಬೈಲು ಘಟ್ಟದಲ್ಲಿ ಇಂತಹ ಘಟನೆ ಪದೇಪದೆ ಸಂಭವಿಸುತ್ತಿವೆ. ರೈತರು ಹಾಗೂ ಸಾರ್ವಜನಿಕರು ಆತಂಕದಿಂದಲೇ ಕಾಲಕಳೆಯುವಂತಾಗಿದೆ.