

ಪಶ್ಚಿಮಘಟ್ಟ ಪ್ರಪಂಚದ ವಿಶಿಷ್ಟ ಜೀವಜಾಲಗಳ ತಾಣ. ಪಶ್ಚಿಮಘಟ್ಟವನ್ನು ವಿಶ್ವ ಪಾರಂಪರಿಕ ಜೀವವೈವಿಧ್ಯದ ಪ್ರದೇಶ ಎಂದು ಯುನೆಸ್ಕೋ ಘೋಶಿಸಿದೆ.ಇಂಥ ಜೀವವೈವಿಧ್ಯದ ಪಶ್ಚಿಮಘಟ್ಟದ ವಿಶೇಶಗಳನ್ನು ಒಂದೇ ಪ್ರದೇಶದಲ್ಲಿ ನೋಡುವ ಅವಕಾಶವಿದ್ದರೆ ಹೇಗೆ ಇಂಥದ್ದೊಂದು ಯೋಚನೆ ಸಾಕಾರವಾಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಸಿದ್ಧಾಪುರದ ಹೊಸೂರಿನಲ್ಲಿರುವ ಅರಣ್ಯ ಇಲಾಖೆಯ ಟ್ರೀಪಾರ್ಕ್ ನಲ್ಲಿ
ಟ್ರೀ ಪಾರ್ಕ್ ಎಂದು ಪ್ರಸಿದ್ಧವಾಗಿರುವ ವೃಕ್ಷೋದ್ಯಾನ ಈಗ ವೈಶಿಷ್ಟ್ಯಗಳ ಪ್ರದೇಶವಾಗಿ ಗುರುತಿಸಿಕೊಂಡಿದೆ. ಸಿದ್ಧಾಪುರ ಕುಮಟಾ ರಸ್ತೆಯ ಹೊಸೂರು ಟ್ರೀಪಾರ್ಕ್ ಈಗ ಜೋಗಕ್ಕೆ ಬರುವ ಪ್ರವಾಸಿಗರಿಗೆ ವಿಶೇಶ ಆಕರ್ಷಣೆಯಾಗಿದೆ. ೫೦ ಎಕರೆಗಳ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಸಸ್ಯೋದ್ಯಾನದಲ್ಲಿ ೨೨೦ ಪ್ರಬೇಧಗಳ ಸಸ್ಯಗಳಿವೆ.ಪಶ್ಚಿಮಘಟ್ಟದ ಬಹುತೇಕ ಎಲ್ಲಾ ಸಸ್ಯ ಪ್ರಭೇದಗಳೊಂದಿಗೆ ಹೊರಪ್ರದೇಶದ ಸಸ್ಯಸಂಪತ್ತನ್ನು ಒಂದೆಡೆ ಬೆಳೆಸಿರುವ ಅರಣ್ಯ ಇಲಾಖೆ ಇವುಗಳ ಮಾಹಿತಿ ನೀಡಲು ವ್ಯವಸ್ಥೆಯನ್ನೂ ಮಾಡಿದೆ.
ವಾಯುವಿಹಾರಕ್ಕೆ ಬರುವವರಿಗೆ, ಅರಣ್ಯ ವನ್ಯ ಸಂಪತ್ತಿನ ಅಭಿರುಚಿಯುಳ್ಳವರಿಗೆ ಉತ್ತಮ ಸ್ಥಳವಾಗಿರುವ ಈ ಸಸ್ಯೋದ್ಯಾನ ಈಗ ಎಲ್ಲರ ಆಸಕ್ತಿಯ ಕೇಂದ್ರ ಆಗಿದೆ. ಪ್ರತಿವರ್ಷ ವಿಭಿನ್ನ ಸಸ್ಯಗಳನ್ನು ಆರೋಹಣ ಮಾಡುವ ಇಲಾಖೆ ಚಿಣ್ಣರ ಅನುಕೂಲ, ಆಸಕ್ತಿಗೆ ಪೂರಕವಾಗಿ ಆಟದ ಅವಕಾಶವನ್ನೂ ಮಾಡಿಕೊಟ್ಟಿ ದೆ.
ಹಿರಿಯರು ಈ ಟ್ರೀಪಾರ್ಕ್ ನಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯಗಳ ಬಗ್ಗೆ ಅರಿತರೆ ಮಕ್ಕಳು ಇಲ್ಲಿ ಆಡುತ್ತಾ ಹಕ್ಕಿಗಳ ಚಿಲಿಪಿಲಿ ಗಾನಕ್ಕೆ ಮರುಳಾಗುತ್ತಾರೆ.
ವಿಶಿಷ್ಟ ತಳಿಯ ಹಲಸು, ನೇರಳೆ, ಬಿದಿರಿನ ಸೌಂದರ್ಯ, ಸೊಬಗಿನೊಂದಿಗೆ ಪ್ರಕೃತಿಯಲ್ಲಿ ಕಳೆದುಹೋಗುವವರಿಗೆ ಅನುಕೂಲ ವಾಗಲಿ ಎಂದು ವೀಕ್ಷಣಾ ಕುಟೀರಗಳನ್ನೂ ನಿರ್ಮಿಸಲಾಗಿದೆ.
ಸರ್ಕಾರಮನಸ್ಸು ಮಾಡಿದರೆ ಪರಿಸರ ಪೂರಕ ಜನೋಪಯೋಗಿ ಕೆಲಸವನ್ನು ಹೀಗೂ ಮಾಡಬಹುದೆನ್ನುವ ವಾಸ್ತವಕ್ಕೆ ದೃಷ್ಟಾಂತವಾಗಿರುವ ಟ್ರೀಪಾರ್ಕ್ ಪ್ರವಾಸಿಗರು, ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ.ಈ ಟ್ರೀಪಾರ್ಕ್ ನೋಡಲು ಬರುವವರಿಗೆ ಚಾರಣದ ಅನುಭವವಾಗುವಂತೆ ವಾಕ್ ಮಾಡಲು ಅವಕಾಶವಿರುವುದು ಈ ಸಸ್ಯೋದ್ಯಾನದ ಹೆಚ್ಚುವರಿ ಅನುಕೂಲ.





