

ವ್ಯಕ್ತಿಯೊಬ್ಬರ ಮೇಲೆ ವೃತ್ತಿ ನಿಷೇಧ ಹೇರಿದ ಕಾರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಕ್ಯಾದಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋವಿಡ್ ಸಮಯದಲ್ಲಿ ವಂದಾನೆ ಗೋಪಾಲಕೃಷ್ಣ ಕೊಡಿಯಾ ಕುಟುಂಬಕ್ಕೆ ಅವಧಿಮೀರಿದ ಸೆನಿಟೈಸರ್ ಪೂರೈಸಿದ ಸ್ಥಳಿಯ ವ್ಯವಸ್ಥೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಕಾರಣಕ್ಕೆ ಮುನಿಸಿಕೊಂಡ ಕ್ಯಾದಗಿ ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿ ವೃತ್ತಿ ನಿಷೇಧ ಹೇರಿ ತೊಂದರೆ ಮಾಡಿದ ಕಾರಣಕ್ಕೆ ಕೊಡಿಯಾ ಸ್ಥಳೀಯ ನ್ಯಾಯಾಲಯದಲ್ಲಿ ಅಂದಿನ ಗ್ರಾಮ ಪಂಚಾಯತ್ ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ಮತ್ತು ಕ್ಯಾದಗಿ ಗ್ರಾ.ಪಂ. ಸದಸ್ಯರ ಮೇಲೆ ಸಿವಿಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಗೋಪಾಲಕೃಷ್ಣ ಕೊಡಿಯಾ ಕುಟುಂಬದ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಲ್ ಡೌನ್ ಮಾಡಿ ನಿರ್ಬಂಧ ವಿಧಿಸಲಾಗಿತ್ತು. ಈ ಕಾರಣಕ್ಕೆ ಸ್ಥಳಿಯ ಆಡಳಿತ ಅವರ ಕುಟುಂಬಕ್ಕೆ ಫುಡ್ ಕಿಟ್ ವಿತರಿಸಬೇಕಿತ್ತು. ಅಗತ್ಯ ವಸ್ತು ಪೂರೈಸದೆ ಕೊಟ್ಟ ಸೆನಿಟೈಸರ್ ಅವಧಿಮೀರಿದ ಕಾರಣದಿಂದ ಕೊಡಿಯಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರು, ಮಾಹಿತಿ ಕೇಳಿದ ಆಧಾರದಲ್ಲಿ ಕ್ಯಾದಗಿ ಪಂಚಾಯತ್ ಠರಾವು ಮಾಡಿ ಗೋಪಾಲಕೃಷ್ಣ ಕೊಡಿಯಾ ತಮ್ಮ ವೃತ್ತಿ ಮಾಡಬಾರದೆಂದು ನಿರ್ಬಂಧ ವಿಧಿಸಿತ್ತು. ಈ ಪ್ರಕರಣದಲ್ಲಿ ವ್ಯಕ್ತಿಯ ವೃತ್ತಿ ಸ್ವಾತಂತ್ರ್ಯ ದುಡಿಯುವ ಅವಕಾಶ ಕಸಿದುಕೊಂಡ ಕಾರಣಕ್ಕೆ ಕೊಡಿಯಾ ಹಾನಿ ಮಾಡಿರುವ ಅಧಿಕಾರಿ ವಿರುದ್ಧ ಕ್ರಿ ಮಿನಲ್ ಪ್ರಕರಣ ಮತ್ತು ಇದಕ್ಕೆ ಕಾರಣರಾದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ವಿರುದ್ಧ ಸಿವಿಲ್ ಪ್ರಕರಣ ದಾಖಲಿಸಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ನಡೆದ ಈ ಪ್ರಹಸನದ ಬಗ್ಗೆ ಆಗಸ್ಟ್ ತಿಂಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳಿಯರು ಮಾಧ್ಯಮಪ್ರತಿನಿಧಿಗಳಿಗೆ ದಾಖಲೆ ಸಹಿತ ಈ ಮಾಹಿತಿ ಹಂಚಿಕೊಂಡಿದ್ದಾರೆ.
