ವಿ.ಪ. ಚುನಾವಣೆಯ ಮತದಾನ ಮುಕ್ತಾಯದ ಹಂತ ತಲುಪಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಒಂದು ಘಂಟೆಯ ವೇಳೆಗೆ ಪ್ರತಿಶತ ೯೦ ರಷ್ಟು ಮತದಾನವಾಗಿರುವುದು ಗರಿಷ್ಠ ಮತದಾನದ ಮುನ್ಸೂಚನೆ ನೀಡಿದೆ.
ಮತದಾನೋತ್ತರ ಸಮೀಕ್ಷೆಯ ಅಂದಾಜಿನ ಪ್ರಕಾರ ಗೆಲ್ಲುವ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.
ರಾಜ್ಯದಲ್ಲಿ ಆಡಳಿತಾರೂಢ ಬಿ.ಜೆ.ಪಿ. ೧೦ ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ನಿಚ್ಚಳ ವಾಗಿದೆ. ಜೆ.ಡಿಎಸ್. ಮೂರು ಕ್ಷೇತ್ರಗಳಲ್ಲಿ ೨-೩ ಕ್ಷೇತ್ರಗಳಲ್ಲಿ ಸ್ವತಂತ್ರರು ಆಯ್ಕೆಯಾದರೆ ಉಳಿದ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದೆ? ಎನ್ನುವ ಪ್ರಶ್ನೆ ಈಗ ರಾಜ್ಯದ ಮುಂದಿರುವ ಒಗಟು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತು ಪಕ್ಷೇತರ ಅಭ್ಯರ್ಥಿ ಅಥವಾ ಬಿ.ಜೆ.ಪಿ. ಗೆಲ್ಲುವ ಸಾಧ್ಯತೆ ಕಂಡು ಬಂದಿದೆ.
ಬಿ.ಜೆ.ಪಿ. ಯ ಪ್ರಾಬಲ್ಯದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿ.ಜೆ.ಪಿ.ಗೆ ಪೂರಕ ವಾತಾವರಣವಿಲ್ಲದೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಅಭಿಪ್ರಾಯಗಳಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಜೆ.ಪಿ. ನಾಯಕರ ಪ್ರತಿಷ್ಠೆ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಮಾಡಿರುವಂತಿದೆ. ಬಿ.ಜೆ.ಪಿ. ಒಳಜಗಳದ ಲಾಭ, ಜಾತ್ಯಾತೀತ ಜನತಾದಳದ ಬೆಂಬಲ ಕಾಂಗ್ರೆಸ್ ಗೆ ದೊರೆತಿರುವ ಹಿನ್ನೆಲೆಗಳಲ್ಲಿ ಬಿ.ಜೆ.ಪಿ. ಯ ತವರು ಶಿವಮೊಗ್ಗದಲ್ಲಿ ಬಿ.ಜೆ.ಪಿ.ಯ ಕಚ್ಚಾಟದ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ ಗೆಲುವು ನಿಶ್ಚಿತ ಎನ್ನಲಾಗಿದೆ.
ಉತ್ತರ ಕನ್ನಡ- ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಬಿ.ಜೆ.ಪಿ. ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ವಿರುದ್ಧ ಹಿರಿಯ ಶಾಸಕರು, ಸಂಸದರು ಕೆಲಸ ಮಾಡಿರುವ ಸಾಧ್ಯತೆ ಕಂಡುಬಂದಿದೆ. ಇದೇ ಮೊದಲ ಬಾರಿ ಹೆಬ್ಬಾರ್ ನೇತೃತ್ವದಲ್ಲಿ ಬಿ.ಜೆ.ಪಿ. ಹಣದ ಹೊಳೆ ಹರಿಸಿದೆಯಾದರೂ ಬಿ.ಜೆ.ಪಿ.ಯ ಬಂಡಾಯ ಅಮಾಯಕ ಗಣಪತಿ ಉಳ್ವೇಕರ್ ರಿಗೆ ಮಾರಕವಾಗಬಹುದೆ? ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.
ಸರ್ಕಾರ ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರಿಗೆ ಈ ಚುನಾವಣೆ ಪ್ರತಿಷ್ಠೆ ಆಗಿರುವುದರಿಂದ ಹೆಬ್ಬಾರ್ ಆಪ್ತರು ಬಿ.ಜೆ.ಪಿ ಅಭ್ಯರ್ಥಿ ಪರವಾಗಿ ಅಹರ್ನಿಸಿ ದುಡಿದಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಶಿರಸಿ ಕೇಂದ್ರಿತ ರಾಷ್ಟ್ರೀಯವಾದಿಗಳು ಹೆಬ್ಬಾರ್ ವಿರುದ್ಧ ಕೆಲಸಮಾಡುವ ಅಂಗವಾಗಿ ನಿರ್ಲಿಪ್ತರಾಗಿದ್ದು ವಿರೋಧಿ ಪಾಳಯದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ನೆರವಾಗಿದ್ದಾರೆ ಎನ್ನಲಾಗುತ್ತಿದೆ.
ಭೀಮಣ್ಣ ನವರ ದೀವರ ಜಾತಿ, ಜೆ.ಡಿ.ಎಸ್. ಮತಗಳ ಆಕರ್ಷಣೆ, ಎರಡೆರಡು ಕ್ಷೇತ್ರಗಳಲ್ಲಿ ಭೀಮಣ್ಣ ವೈಯಕ್ತಿಕವಾಗಿ ಹೊಂದಿರುವ ಸಂಪರ್ಕ,ಕಾಂಗ್ರೆಸ್ ನ ಮಾಜಿ ಶಾಸಕರು, ಸಚಿವರು ಒಗ್ಗಟ್ಟಾಗಿ ಭೀಮಣ್ಣ ಪರ ಕೆಲಸ ಮಾಡಿರುವ ಮಾಹಿತಿ ಭೀಮಣ್ಣ ನಾಯ್ಕ ಈ ಬಾರಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮತ್ತು ಭೀಮಣ್ಣನವರಿಗೆ ಪೂರಕ ಅಂಶಗಳು ಹೆಚ್ಚಿದ್ದವು. ಈ ಲೆಕ್ಕಾಚಾರದಲ್ಲೇ ಮಾಜಿಗಳೆಲ್ಲಾ ಸೇರಿ ಭೀಮಣ್ಣರನ್ನು ಅಭ್ಯರ್ಥಿ ಮಾಡಿದರು ಎನ್ನುವ ಅಂಶಗಳ ಜೊತೆಗೆ ಕಾಂಗ್ರೆಸ್ ನ ಅವೈಜ್ಞಾನಿಕ ಚುನಾವಣಾ ತಂತ್ರ, ಚಿರಪರಿಚಿತ ಭೀಮಣ್ಣ ನಾಯ್ಕ ತಮ್ಮ ಪರವಾಗಿ ವೈಯಕ್ತಿಕವಾಗಿ ಜೊತೆಗೆ ಪಕ್ಷದಿಂದ ನೇರವಾಗಿ ಮತ ಯಾಚನೆಯನ್ನೇ ಮಾಡದಿರುವುದು ಅವರ ಗೆಲ್ಲುವ ಸಾಧ್ಯತೆಯನ್ನು ಕ್ಷೀಣಿಸಿದೆ ಎನ್ನಲಾಗಿದೆ. ಆದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು,ಬೆಳಗಾವಿ, ಹಾಸನಗಳಲ್ಲಿ ಕಾಂಗ್ರೆಸ್,ಬಿ.ಜೆ.ಪಿ.ಗೆ ಸೋಲು ಎನ್ನುವ ಗುಪ್ತಚರ ಇಲಾಖೆಯ ಮಾಹಿತಿ ರಾಜ್ಯದಲ್ಲಿ ಕಾಂಗ್ರೆಸ್ ಒಂದಂಕಿ ದಾಟುವ ಮುನ್ಸೂಚನೆ ನೀಡಿದೆ. ಬಿ.ಜೆ.ಪಿ. ಯ ಬಂಡಾಯ, ಭೀಮಣ್ಣ ಪಾಳೆಯದ ನ್ಯೂನ್ಯತೆಗಳ ನಡುವೆ ಕೂಡಾ ಭೀಮಣ್ಣ ಸಣ್ಣ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಸಮೀಕ್ಷೆ ನಿಜವಾಗಲು ನಾಲ್ಕು ದಿವಸ ಕಾಯಬೇಕಿದೆ.