

ಸುಖ,ಶಾಂತಿ ಇದ್ದರೆ ಇಹಲೋಕವೇ ಸ್ವರ್ಗ, ಸ್ವರ್ಗದ ಕಲ್ಪನೆಯನ್ನು ಜನಸಾಮಾನ್ಯರೂ ಕೂಡಾ ಇದೇ ಮಾನದಂಡಗಳಿಂದ ನೋಡುತ್ತಾರೆ. ಕೆಲವರಿಗೆ ಈ ಲೋಕವೇ ಸ್ವರ್ಗವಾದರೆ, ಅನೇಕರಿಗೆ ಸ್ವರ್ಗ ಎನ್ನುವುದು ಒಂದು ಕಲ್ಪನೆ,ಭ್ರಮೆ. ಆದರೆ ನಾವಿಲ್ಲಿ ನಿಮಗೆ ಭೂಮಿ ಮೇಲಿನ ಸ್ವರ್ಗವನ್ನು ತೋರಿಸುತಿದ್ದೇವೆ. ಇದು ಭ್ರಮೆ, ಕಾಲ್ಪನಿಕ ಸ್ವರ್ಗವಲ್ಲ. ಜಾನುವಾರುಗಳಿಗೆ ಮಠ ನಿರ್ಮಿಸಿಕೊಟ್ಟಿರುವ ಗೋಸ್ವರ್ಗ.
ಹೌದು ಗೋವಿನ ಬಗ್ಗೆ ಅನೇಕ ಕಾಲ್ಪನಿಕ, ಪೌರಾಣಿಕ ಮಿಥ್ ಗಳಿವೆ. ಗೋವಿನ ಕತೆ, ದಂತಕತೆ,ಪುರಾಣ,ಪ್ರವಚನಗಳಿಗೇನೂ ಕಡಿಮೆ ಇಲ್ಲ. ಆದರೆ ಈ ಶಾಸ್ತ್ರಗಳನ್ನು ಮೀರಿದ ಗೋವಿನ ಸ್ವಚ್ಚಂದ ಬದುಕಿನ ವಾಸ್ತವದ ಗೋಸ್ವರ್ಗ ಒಂದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.
ಸಿದ್ಧಾಪುರದ ಬಾನ್ಕುಳಿಯಲ್ಲಿ ಶ್ರೀ ರಾಮದೇವರ ಶಾಖಾ ಮಠವೊಂದಿದೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸ ವಿದೆಯಾದರೂ ಈಗ ಈ ಮಠವನ್ನು ನಿರ್ವಹಣೆಮಾಡುತ್ತಿರುವ ಹೊಸನಗರದ ರಾಮಚಂದ್ರಪುರ ಮಠ ಇಲ್ಲಿ ಗೋವುಗಳಿಗೆ ಗೋಸ್ವರ್ಗವೊಂದನ್ನು ನಿರ್ಮಿಸಿದೆ. ಈ ಗೋಸ್ವರ್ಗದಲ್ಲಿ ಜನರು ಕೊಟ್ಟ ಹಾಗೂ ಕಸಾಯಿಖಾನೆಗಳಿಗೆ ಸಾಗಣೆಯಾಗುವ ಜಾನುವಾರುಗಳನ್ನು ರಕ್ಷಿಸಿ ಸಾಕಲಾಗುತ್ತದೆ. ದೇಶೀ ಹಸುಗಳ ಅಭಿವೃದ್ಧಿ ಕೇಂದ್ರವನ್ನಾಗಿಸಿ ಜಾನುವಾರು ಪೋಷಣೆ ಮಾಡುತ್ತಿರುವ ಈ ಗೋಸ್ವರ್ಗದಲ್ಲಿ ಆರು ನೂರಕ್ಕೂ ಹೆಚ್ಚು ವೈವಿಧ್ಯಮಯ ಹಸುಗಳಿವೆ.
ದೇಶದ ೩೪ ದೇಶೀ ತಳಿಗಳಲ್ಲಿ ಅರ್ಧದಷ್ಟು ಪ್ರಬೇಧಗಳ ಹಸುಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಭಾನ್ಕು ಳಿ ಶಾಖೆ ಕಾಮಧುಗಾ ಎನ್ನುವ ಟ್ರಸ್ಟ ಒಂದನ್ನು ನಿರ್ಮಿಸಿಕೊಂಡಿದೆ.
ಹಾಲುಕೊಡುವ,ಕರು ಹಾಕುವ, ಕರುಹಾಕಿದ ಹೀಗೆ ಎಲ್ಲಾ ವಯೋಮಾನದ ನಾನಾ ತಳಿಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಈ ಗೋಸ್ವರ್ಗ ಈಗ ಕೇವಲ ಗೋವುಗಳಿಗೆ ಮಾತ್ರ ಸ್ವರ್ಗವಲ್ಲ ಈ ಗೋಸ್ವರ್ಗವನ್ನು ನೋಡಿ ಆನಂದಿಸಲು ಪ್ರವಾಸಿಗರೂ ಬರುತಿದ್ದಾರೆ. ವಿಶಾಲ ಪ್ರದೇಶದಲ್ಲಿ ಮಲೆನಾಡ ಜಲಸಿರಿಯ ಕಾರಂಜಿಗಳ ಪಕ್ಕ ಪಕ್ಷ ಮಾಸಗಳ ಹಂಗಿಲ್ಲದೆ ಜಾನುವಾರುಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ನೋಡುವುದೇ ಚಂದ.
ಕಣ್ಮನಗಳಿಗೆ ಹಬ್ಬ ನೀಡುವ ಮಠದ ಗೋಸ್ವರ್ಗದ ಕಲ್ಪನೆ ಮಠಕ್ಕೆ ಖರ್ಚಿನ ಬಾಬ್ತಾದರೂ ಸರ್ಕಾರ, ಸಾರ್ವಜನಿಕರ ನೆರವಿನಿಂದ ನಡೆಯುತ್ತಿರುವ ಈ ಗೋಸ್ವರ್ಗ ಮೂಖಪ್ರಾಣಿಗಳಿಗೆ ಅವುಗಳನ್ನು ನೋಡಲು ಬರುವ ಜನರಿಗೆ ಸ್ವರ್ಗಸದೃಶ ಅನುಭವ ನೀಡುವುದಂತೂ ಸತ್ಯ.
(ಕನ್ನೇಶ್ವರ ನಾಯ್ಕ, ಕೋಲಶಿರ್ಸಿ)


