ಸುಮ್ಮನೇ ಯಾಕೆ ನನ್ನನ್ನೂ ನೀವು ಎಳೀತೀರಿ, ನಾನು ನೆಮ್ಮದಿಯಿಂದ ಇದ್ದೇನೆ.. ಉಸ್ತುವಾರಿ ಬದಲಾವಣೆಗೆ ಕೋಟ
ರಾಜ್ಯದ 30 ಜಿಲ್ಲೆಗಳಿಗೆ ತವರು ಜಿಲ್ಲೆಯನ್ನು ಹೊರತುಪಡಿಸಿ ಉಸ್ತುವಾರಿಯನ್ನಾಗಿ ಸಚಿವರುಗಳಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲೆಯ ಈ ಹಿಂದಿನ ಉಸ್ತುವಾರಿಯಾಗಿದ್ದ ಶಿವರಾಮ ಹೆಬ್ಬಾರ್‌ರೊಂದಿಗೆ ಮಾತನಾಡಿದ್ದು, ಒಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಕುರಿತು ಚರ್ಚಿಸಿದ್ದೇವೆ..
ಕಾರವಾರ : ಜಿಲ್ಲಾ ಉಸ್ತುವಾರಿ ಸಚಿವರುಗಳ ದಿಢೀರ್ ಬದಲಾವಣೆಯಿಂದಾಗಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಸಂತೋಷದಿಂದಲೇ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಉತ್ತರಕನ್ನಡ ಜಿಲ್ಲಾ ಉಸ್ತುವಾರಿಯಾಗಿ ನೇಮಕವಾದ ಬೆನ್ನಲ್ಲೇ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ಉಸ್ತುವಾರಿ ಬದಲಾವಣೆ ವಿಚಾರವಾಗಿ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿರುವುದು..
ರಾಜ್ಯದ 30 ಜಿಲ್ಲೆಗಳಿಗೆ ತವರು ಜಿಲ್ಲೆಯನ್ನು ಹೊರತುಪಡಿಸಿ ಉಸ್ತುವಾರಿಯನ್ನಾಗಿ ಸಚಿವರುಗಳಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲೆಯ ಈ ಹಿಂದಿನ ಉಸ್ತುವಾರಿಯಾಗಿದ್ದ ಶಿವರಾಮ ಹೆಬ್ಬಾರ್‌ರೊಂದಿಗೆ ಮಾತನಾಡಿದ್ದು, ಒಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಕುರಿತು ಚರ್ಚಿಸಿದ್ದೇವೆ.
ಉಸ್ತುವಾರಿ ಎನ್ನುವುದು ಆಯಾ ಜಿಲ್ಲೆಯ ಪ್ರಗತಿ,ಅಭಿವೃದ್ಧಿ,ಸಂಘಟನಾತ್ಮಕ ವಿಚಾರಗಳಿಗೆ ಅನುಕೂಲವಾಗುವಂತೆ ನೇಮಿಸಿರುವುದಾಗಿದೆ. ನಮ್ಮ ಅಭಿವೃದ್ಧಿ ಕಾರ್ಯ ಇನ್ನೊಂದು ಜಿಲ್ಲೆಗೂ ಸಿಗಲಿ ಎನ್ನುವ ಉದ್ದೇಶದಿಂದ ತವರು ಜಿಲ್ಲೆಯನ್ನು ಹೊರತುಪಡಿಸಿ ನೀಡಲಾಗಿದೆ. ನಮಗೆ ಇದರಿಂದ ಯಾವುದೇ ಅಸಮಾಧಾನವಿಲ್ಲ, ನೆಮ್ಮದಿಯಿಂದ ಇದ್ದೇವೆ ಎಂದರು.
ವಲಸಿಗರು ಪಕ್ಷಕ್ಕೆ ಬಂದು ಸಚಿವರಾಗಿರುವ ಹಿನ್ನೆಲೆ ಅಸಮಾಧಾನ ವ್ಯಕ್ತವಾಗಿದೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಾಲಿಗೆ ಸಕ್ಕರೆ ಹಾಕಿದರೆ ಅದು ಸಕ್ಕರೆಯನ್ನೂ ತನ್ನೊಳಗೆ ಕರಗಿಸಿಕೊಳ್ಳುತ್ತದೆ. ಅದರಂತೆ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ನಮ್ಮೊಂದಿಗೆ ಬಂದವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು,ಇದರಲ್ಲಿ ವಲಸೆ,ಮೂಲ ಎನ್ನುವ ವ್ಯತ್ಯಾಸವಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ದೇವನಹಳ್ಳಿ ರೆಸಾರ್ಟ್‌ನಲ್ಲಿ ಬಿಜೆಪಿ ಮುಖಂಡರು ಡಿಕೆಶಿ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ರೆಸಾರ್ಟಿಗೆ ಯಾರೋ ಹೋಗ್ತಾರೆ, ಮತ್ತ್ಯಾರೋ ಬರ್ತಾರೆ. ಅಲ್ಲಿ ಇನ್ನೊಂದು ಪಕ್ಷದವರು ಸಿಕ್ಕ ಸಂದರ್ಭದಲ್ಲಿ ಭೇಟಿಯಾಗೋದು ತಪ್ಪಾ?, ಅದರಿಂದ ನಮ್ಮವರು ಪಕ್ಷ ತೊರೆದು ಹೋಗುತ್ತಾರೆ ಎನ್ನುವುದು ಸರಿಯಲ್ಲ. ಅವರು ವಿರೋಧ ಪಕ್ಷದಲ್ಲಿದ್ದವರು ಏನೇನೋ ಹೇಳುತ್ತಾರೆ. ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸುವುದು ಸಾಧ್ಯವಿಲ್ಲ.
ಹಲವು ಬಾರಿ ಶಾಸಕರಾದವರು ತಮ್ಮನ್ನು ಮಂತ್ರಿ ಮಾಡಿ ಎಂದು ಬೇಡಿಕೆಯಿಡುವುದು ತಪ್ಪಲ್ಲ. ಆದರೆ, ಸಚಿವರನ್ನು ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದ್ದು ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ ಎಂದಿದ್ದಾರೆ. (kpc)